ಬೆಂಗಳೂರು: ಮೂರು ತಿಂಗಳ ಹಿಂದೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಜೆಟ್‌ಲಾಗ್ ಪಬ್ ಮತ್ತು ರೆಸ್ಟೋಬಾರ್‌ನಲ್ಲಿ ನಟ ದರ್ಶನ್ ಸೇರಿ ಕೆಲ ನಟರು ತಡರಾತ್ರಿವರೆಗೂ ಮದ್ಯದ ಪಾರ್ಟಿ ನಡೆಸಿರುವ ಆರೋಪ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು 39ನೇ ಎಸಿಎಂಎಂ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ನಟ ದರ್ಶನ್ ಸೇರಿ 8 ಮಂದಿ ಸೆಲೆಬ್ರಿಟಿಗಳು ಪಬ್‌ನಲ್ಲಿ ತಡರಾತ್ರಿವರೆಗೂ ಮದ್ಯದ ಪಾರ್ಟಿ ಮಾಡಿಲ್ಲ. ಬದಲಾಗಿ ಊಟ ಮಾಡಿದ್ದಾರೆ ಅಷ್ಟೇ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಿರುವ ಪೊಲೀಸರು, ನಟ ದರ್ಶನ್ ಸೇರಿದಂತೆ ಎಂಟು ಮಂದಿ ಸೆಲಿಬ್ರಿಟಿಗಳನ್ನು ಸಾಕ್ಷಿಗಳನ್ನಾಗಿ ಪರಿಗಣಿಸಿದ್ದಾರೆ.
ಅವಧಿ ಮೀರಿ ತಡರಾತ್ರಿವರೆಗೂ ಪಬ್ ತೆರೆದಿದ್ದ ಆರೋಪದಡಿ ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಜಗದೀಶ್ ಮತ್ತು ಕ್ಯಾಶಿಯರ್ ಪ್ರಶಾಂತ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅವಧಿ ಮೀರಿ ರೆಸ್ಟೋಬಾರ್ ತೆರೆದಿದ್ದಕ್ಕೆ ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಅಲ್ಲಿನ ಕೆಲಸಗಾರರ ಹೇಳಿಕೆಗಳನ್ನು ದೋಷಾರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜ.3ರಂದು ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಸೇರಿ ಎಂಟು ಮಂದಿ ಸೆಲಿಬ್ರಿಟಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ ಎಂಟು ಮಂದಿಯೂ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದರು. ಈ ವೇಳೆ “ನಾವು ರೆಸ್ಟೋಬಾರ್‌ಗೆ ಊಟ ಮಾಡಲು ಹೋಗಿದ್ದವು. ಅಲ್ಲಿ ಯಾವುದೇ ಮದ್ಯ ಸೇವಿಸಿರಲಿಲ್ಲ. ಊಟ ಮಾಡಿ ಸ್ವಲ್ಪ ತಡವಾಗಿ ಮನೆಗಳಿಗೆ ತೆರಳಿದ್ದೆವು’ ಎಂದು ಸೆಲಿಬ್ರಿಟಿಗಳು ಹೇಳಿಕೆ ನೀಡಿದ್ದರು. ಅಲ್ಲದೆ, ತನಿಖೆಯಲ್ಲಿ ನಟರು ಮದ್ಯದ ಪಾರ್ಟಿ ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯಗಳು ದೊರೆಯದ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಪ್ರಕರಣ? :
ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ನಟ ದರ್ಶನ್ ಅಭಿನಯದ ಕಾಟೇರಾ ಸಿನಿಮಾ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡವು ಜ.3ರ ರಾತ್ರಿ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯ ಜೆಟ್‌ಲಾಗ್ ಪಬ್ ಆ್ಯಂಡ್ ರೆಸ್ಟೋಬಾರ್‌ನಲ್ಲಿ ಪಾರ್ಟಿ ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ, ಚಿಕ್ಕಣ್ಣ ಸೇರಿ ಹಲವು ಸೆಲಿಬ್ರಿಟಿಗಳು ಸೇರಿದ್ದರು. ಜ.4ರ ನಸುಕಿನವರೆಗೂ ಮದ್ಯದ ಪಾರ್ಟಿ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಪಬ್ ಮಾಲೀಕರು ಹಾಗೂ ಕ್ಯಾಶಿಯರ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.