ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ (Renukaswamy Case) ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಂಗಳವಾರ (ಅ.29ರಂದು) ಹೈಕೋರ್ಟ್‌ನಲ್ಲಿ ನಡೆದಿದೆ.
ಅನಾರೋಗ್ಯ ಕಾರಣದಿಂದಾಗಿ ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌ಗೆ ದರ್ಶನ್ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದೆ.
ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದು, ದರ್ಶನ್ ಬೆನ್ನುಮೂಳೆ ಎಂಆರ್ ಐ ಸ್ಕ್ಯಾನ್ ಮಾಡಿದ್ದಾರೆ. ರೋಗಿಯ ಬೆನ್ನಿನ ನರದ L5, S1 ಡಿಸ್ಕ್ ನೂನ್ಯತೆ ಕಂಡು ಬಂದಿದೆ. ಡಿಸ್ಕ್ ನಲ್ಲಿನ ಸಮಸ್ಯೆಯಿಂದಾಗಿ ರಕ್ತಪರಿಚಲನೆದಲ್ಲಿ ತೊಂದರೆ ಆಗುತ್ತಿದೆ. ಹಾಗಾಗಿ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಇದು ಪಾರಂಪಾರಿಕ ಚಿಕಿತ್ಸೆಯಿಂದ ಪರಿಹಾರ ಆಗಲ್ಲವೆಂದು ನಾಗೇಶ್ ವಾದ ಮಂಡಿಸಿದ್ದಾರೆ.
ರೋಗಿಯ ಪರಿಸ್ಥಿತಿಯನ್ನು ಅನುಮಾನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಿರುವ ಅನೇಕ ಉದಾಹರಣೆಗಳಿವೆ. ಈ ಪ್ರಕರಣ ಕೂಡ ಜಾಮೀನು ನೀಡಲು ಅರ್ಹವಾಗಿದೆ ಎಂದು ಡಿಕೆ ಶಿವಕುಮಾರ್ ಅವರ ಪ್ರಕರಣವನ್ನು ಉಲ್ಲೇಖಿಸಿ ನಾಗೇಶ್ ವಾದ ಮಂಡಿಸಿದ್ದಾರೆ.
ಓಡಾಡಲು ಕುಳಿತುಕೊಳ್ಳುವ ಸಮಸ್ಯೆ ಆಗುತ್ತಿದೆ. ಸ್ವತಂತ್ರವಾಗಿ ಸ್ವಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಎಷ್ಟೇ ಗಂಭೀರ ಕೃತ್ಯವೆಸಗಿದ್ದರೂ ಅದನ್ನು ಪರಿಗಣಿಸದೆ ವೈದ್ಯಕೀಯ ಕಾರಣವೆಂದು ಪರಿಗಣಿಸಿ ಮಧ್ಯಂತರ ಜಾಮೀನು ನೀಡಿ ಎಂದು ನಾಗೇಶ್ ನ್ಯಾಯಧೀಶರ ಮುಂದೆ ಹೇಳಿದ್ದಾರೆ.
ವೈದ್ಯರ ವರದಿಯನ್ನು ಪ್ರಸನ್ನ ಕುಮಾರ್ ಓದಿದ್ದಾರೆ. ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಸರಿಪಡಿಸಲಾಗಿದೆ. ರೋಗಿಯ ತಪಾಸಣೆ ಮಾಡದಾಗ ಮುಂದೊಮ್ಮೆ ಸರಿ ಆಗಬಹುದೆಂದಿದೆ. ಎಷ್ಟು ದಿನ ಚಿಕಿತ್ಸೆ ಬೇಕು, ಯಾವಾಗ ಗುಣವಾಗುತ್ತದೆನ್ನುವ ಅಂಶ ಈಗಿನ ವರದಿಯಲ್ಲಿ ಇಲ್ಲ. ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆಯುವುದು ಸೂಕ್ತ. ಸುಪ್ರೀಂ ಕೋರ್ಟ್ ಕೂಡ ಮೆಡಿಕಲ್ ಬೋರ್ಡ್ ವರದಿ ಬೇಕೆಂದಿದೆ ಎಂದು ಪ್ರಸನ್ನ ಕುಮಾರ್ ಹಳೆಯ ಪ್ರಕರಣವೊಂದನ್ನು ಇಲ್ಲಿ ಉಲ್ಲೇಖಿಸಿದ್ದಾರೆ.
ಇದೇ ಮಾದರಿಯಲ್ಲಿ ಡಿಸ್ಕ್ ಸಮಸ್ಯೆ ಆದಾಗ ಮೆಡಿಕಲ್ ಬೋರ್ಡ್ ರಚಿಸಲಾಗಿದೆ. ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದು ತೀರ್ಮಾನ ಮಾಡುವುದು ಸೂಕ್ತವೆಂದು ಎಸ್ ಪಿಪಿ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಾಗೇಶ್, ಎರಡನೇ ಅಭಿಪ್ರಾಯ ಯಾಕೆ ಪಡೆಯಬೇಕು. ಚಿಕಿತ್ಸೆ ಪಡೆಯುವ ವೈದ್ಯರಿಂದಲೇ ಅಭಿಪ್ರಾಯ ಪಡೆಯಬೇಕು ಎಂದಿದ್ದಾರೆ.
ವಿಚಾರಧೀನ ಕೈದಿಗೂ ಉತ್ತಮ ಆರೋಗ್ಯದ ಹಕ್ಕಿದೆ. ಮುಂದೆ ಸಮಸ್ಯೆ ಆದರೆ ಅದನ್ನು ಸರಿಪಡಿಸಲಾಗುವುದಿಲ್ಲ. ಹಳೆಯ ಎಂಆರ್ ಐ ಸ್ಕ್ಯಾನಿಂಗ್ ವರದಿಯನ್ನು ಹೊರತುಪಡಿಸಿದರೆ, ಜೈಲಿಗೆ ಸೇರಿದ ಬಳಿಕ ಬಂದಿರುವ ವರದಿಯನ್ನು ಪರಿಗಣಿಸಬೇಕಲ್ವಾ? ಎಂದು ಜಡ್ಜ್ ಪ್ರಶ್ನಿಸಿದ್ದಾರೆ.
ಸರ್ಜರಿಗೆ ಎಷ್ಟು ದಿನ, ಯಾವಾಗ ಬೇಕೆಂದು ವೈದ್ಯರು ಹೇಳಿಲ್ಲ, ನಿಮಗೆ ಎಷ್ಟು ದಿನದ ಮಟ್ಟಿಗೆ ಮಧ್ಯಂತರ ಜಾಮೀನು ಬೇಕು ಎಂದಿರುವ ಜಡ್ಜ್ ಮಾತಿಗೆ, ಇದನ್ನು ಆಸ್ಪತ್ರೆಗೆ ದಾಖಲಾದ ಬಳಿಕವೇ ಹೇಳಬೇಕು. ಆರಂಭದಲ್ಲಿ 3 ತಿಂಗಳು ಜಾಮೀನು ನೀಡಿ ಎಂದು ನಾಗೇಶ್ ಹೇಳಿದ್ದಾರೆ.
ಕೆಲ ದಿನಗಳ ಕಾಲ ಚಿಕಿತ್ಸೆ ಪಡೆಯಲಯ ಆಕ್ಷೇಪಣೆ ಸರಿಯಲ್ಲ. ಮೆಡಿಕಲ್ ಎಮರ್ಜೆನ್ಸಿ ಇರುವುದರಿಂದ ಮಧ್ಯಂತರ ಜಾಮೀನು ನೀಡಬೇಕು ನಾಗೇಶ್ ಹೇಳಿದ್ದಾರೆ.
ಮೆಡಿಕಲ್ ಬೋರ್ಡ್ ಅಭಿಪ್ರಾಯವಿಲ್ಲದೆ ಮಧ್ಯಂತರ ಜಾಮೀನು ನೀಡಬಾರದು ಎಂದು ದೆಹಲಿಯ ಅಸಾರಾಂ ಬಾಪು ಪ್ರಕರಣವನ್ನು ಎಸ್ ಪಿಪಿ ಉಲ್ಲೇಖಿಸಿದ್ದಾರೆ. ಮೆಡಿಕಲ್ ಬೋರ್ಡ್ ಅಭಿಪ್ರಾಯವಿಲ್ಲದೆ ಜಾಮೀನು ನೀಡಿರುವ ಕರ್ನಾಟಕದ ಹೈಕೋರ್ಟ್ ಪ್ರಕರಣಗಳಿವೆ ದೆಹಲಿಯ ಉದಾಹರಣೆ ಅಗತ್ಯವಿಲ್ಲವೆಂದು ನಾಗೇಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಾದ- ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಬುಧವಾರ (ಅ.30) ಕ್ಕೆ ಆದೇಶವನ್ನು ಕಾಯ್ದಿರಿಸಿದೆ.