ಕಿನ್ನಿಗೋಳಿ: ಇಡೀ ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ ದೇಶ ಭಾರತ. ಅನ್ಯ ದೇಶಗಳು ಸುಖವನ್ನು ಬಯಸುತ್ತಿದ್ದರೆ, ಭಾರತ ಮಾತ್ರ ಸರ್ವ ಜನಾಂಗದ ಶಾಂತಿಯನ್ನು ಬಯಸುತ್ತದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ 3ನೇದಿನ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತನಾಡಿ, ಭಕ್ತಿಯಿಂದ ದೇವರ ಆರಾಧನೆ ಮಾಡಿದಾಗ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಉಚ್ಚಿಲ ಹಾಗೂ ಬೆಣ್ಣೆಕುದ್ರು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಜಿ. ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಮುರುಗೇಶ ನಿರಾಣಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಗಣ್ಯರಾದ ಸೂರ್ಯನಾರಾಯಣ ಉಪಾಧ್ಯಾಯ, ಕುಂಟಾರು ರವೀಶ ತಂತ್ರಿ, ಹರೀಶ ಉಪಾಧ್ಯಾಯ, ಪ್ರಸನ್ನ ಭಟ್, ವೆಂಕಟರಮಣ ಆಸ್ರಣ್ಣ ಶುಭ ಹಾರೈಸಿದರು.
ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಮಾಧ್ಯಮ ಮತ್ತು ಧರ್ಮ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ. ಜಯರಾಮ ಭಟ್, ಆನೆಗುಂದಿ ಮಹಾಸಂಸ್ಥಾನದ ಅಧ್ಯಕ್ಷ ಬಿ. ಸೂರ್ಯಕುಮಾರ್ ಆಚಾರ್ಯ ಸೇರಿದಂತೆ ಹಲವು ಧಾರ್ಮಿಕ ಮುಖಂಡರು, ಸಾಮಾಜಿಕ ಮುಖಂಡರು, ಉದ್ಯಮಿಗಳು ಉಪಸ್ಥಿತರಿದ್ದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಸ್ವಾಗತಿಸಿದರು. ಪ್ರದ್ಯುಮ್ನ ರಾವ್ ಶಿಬರೂರು ವಂದಿಸಿದರು. ಉಪನ್ಯಾಸಕಿ ಅರ್ಪಿತಾ ಶೆಟ್ಟಿ ನಿರ್ವಹಿಸಿದರು.
ಶುಕ್ರವಾರ ಬೆಳಗ್ಗೆ ನೂತನ ಸುವರ್ಣ ಧ್ವಜ ಪ್ರತಿಷ್ಠೆ ನಡೆಯಿತು. ಪೂರ್ವ ಭಾವಿಯಾಗಿ ಧ್ವಜ ಕಲಶಾಭಿಷೇಕ, ಗರ್ಭಗುಡಿಯ ಮೇಲಿನ ಶಿಖರ ಕಲಶ ಪ್ರತಿಷ್ಠೆ, ತೀರ್ಥಮಂಟಪದ ಕಲಶ ಪ್ರತಿಷ್ಠೆ ನಡೆಯಿತು. ಪೀಠ ಸಹಿತ ಧ್ವಜಸ್ತಂಭದ ಚಿನ್ನದ ಲೇಪನಕ್ಕೆ 8 ಕೆಜಿ ಚಿನ್ನ ಬಳಸಲಾಗಿದೆ.
ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ಅವರ ಆಚಾರ್ಯತ್ವದಲ್ಲಿ ಶಿಬರೂರು ಕೃಷ್ಣರಾಜ ತಂತ್ರಿಗಳ ಸಹಯೋಗದಲ್ಲಿ ಧಾರ್ಮಿಕ ವಿಧಿ ನೆರವೇರಿತು.