ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನವನ್ನು ಕಾಲ ಮಿತಿಗೊಳಪಡಿಸುವ ನಿರ್ಧಾರವನ್ನು ಕೈಬಿಡ ಬೇಕೆಂದು ರವಿವಾರ ಕದ್ರಿ ದೇಗುಲದಲ್ಲಿ ಜರಗಿದ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಹಾಗೂ ಯಕ್ಷಗಾನ ಸೇವಾರ್ಥಿಗಳ ಸಭೆಯಲ್ಲಿ ಆಗ್ರಹಿಸಲಾಯಿತು.
ಕಟೀಲು ಮೇಳದ ಯಕ್ಷಗಾನ ಇಡೀ ರಾತ್ರಿಯ ಬಯಲಾಟದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಈ ಹಿಂದೆ ನಡೆದುಕೊಂಡು ಬಂದ ರೀತಿಯಂತೆಯೇ ಮುಂದುವರಿ ಯಬೇಕು. ಯಕ್ಷಗಾನವನ್ನು ರಾತ್ರಿ 10.30ರ ವರೆಗೆ ನಡೆಸುವ/ಕಾಲಮಿತಿ ನಿರ್ಧಾರ ಮರು ಪರಿಶೀಲಿಸಬೇಕು ಎಂದು ಸಭೆ ತಿಳಿಸಿತು.
ಕಾಲಮಿತಿ ನಿರ್ಧಾರದ ಬಗ್ಗೆ 7 ದಿನಗಳ ಒಳಗೆ ಸಂಬಂಧಿಸಿದವರು ಮಾಹಿತಿ ನೀಡಬೇಕೆಂದು ಮನವಿ ಮಾಡಲಾಯಿತು. ಮುಂದಿನ ಚಟುವಟಿಕೆಗಳಿಗಾಗಿ 15 ಮಂದಿಯ ಸಮನ್ವಯ ಸಮಿತಿ ರಚಿಸಲಾಯಿತು.
“ಯಾರ ವಿರುದ್ಧವೂ ಅಲ್ಲ’
ಈ ಸಭೆ ಯಾರ ವಿರುದ್ಧವೂ ಅಲ್ಲ. ಇದು ಭಕ್ತರ ಮನಸ್ಸಿನ ಭಾವನೆಯನ್ನು ದಾಖಲಿಸಿಕೊಳ್ಳುವ ಸಭೆ. ಇಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮೇಳದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದವರ ಗಮನಕ್ಕೆ ತರುತ್ತೇವೆ ಎಂದು ಸೇವಾರ್ಥಿ ಅಶೋಕ್ ಕೃಷ್ಣಾಪುರ ತಿಳಿಸಿದರು.
ಹಿರಿಯ ಸೇವಾರ್ಥಿ ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ದೇಗುಲದ ಟ್ರಸ್ಟಿ ರಾಜೇಶ್ ಕೊಂಚಾಡಿ, ಸೇವಾರ್ಥಿಗಳಾದ ಕೃಷ್ಣಪ್ಪ ಪೂಜಾರಿ, ದುರ್ಗಾಪ್ರಸಾದ್ ಹೊಳ್ಳ, ಅಶೋಕ್ ಕೃಷ್ಣಾಪುರ ಪಾಲ್ಗೊಂಡಿದ್ದರು.