ಕಟೀಲು ದುರ್ಗಾ ಪರಮೇಶ್ವರಿಯನ್ನು, ಶಕ್ತಿ ದೇವತೆಯ ಅವತಾರವೆಂದೇ ನಂಬಲಾಗಿದೆ. ದುರ್ಗೆ, ಕಟೀಲಿನಲ್ಲಿ ನೆಲೆಸಲು ಕಾರಣವೇನು ಎಂಬುದಕ್ಕೆ ಪೌರಾಣಿಕ ಹಿನ್ನೆಲೆಯ ಕಥೆಯೊಂದಿದೆ. ಶರನ್ನವರಾತ್ರಿಯ ಉತ್ಸವವನ್ನು ಇಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ ಸಾಕಷ್ಟು ಪವಿತ್ರ ಪುಣ್ಯಕ್ಷೇತ್ರಗಳನ್ನು ಹೊಂದಿದೆ. ಅವುಗಳಲ್ಲಿ ನಂದಿನಿ ನದಿಯ ತಟದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವೂ ಒಂದು. ಈ ದೇಗುಲವು, ನಂದಿನಿ ಎಂಬ ನದಿಯ ಮಧ್ಯದಲ್ಲಿರುವ ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಇಲ್ಲಿಗೆ ಬಂದು ತಾಯಿ ದುರ್ಗಾ ಪರಮೇಶ್ವರಿಯ ದರ್ಶನ ಭಾಗ್ಯ ಪಡೆದು ಪುನೀತರಾಗುತ್ತಿದ್ದಾರೆ. ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿ ಬಂದು ನೆಲೆಸಲು ಕಾರಣವೇನು ಎಂಬ ಕುರಿತಾಗಿ ಒಂದು ಪೌರಾಣಿಕ ಕಥೆಯೇ ಇದೆ. ಶುಂಭ ಮತ್ತು ನಿಶುಂಭರೆಂಬ ಎಂಬ ಇಬ್ಬರು ರಾಕ್ಷಸರನ್ನು ದುರ್ಗಾದೇವಿ ಸಂಹರಿಸಿದ ನಂತರ ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗುತ್ತಾನೆ. ಆನಂತರ ಅವನೇ ರಾಕ್ಷಸರಿಗೆ ನಾಯಕನಾಗಿ ಋಷಿ, ಮುನಿಗಳ ತಪ್ಪಸ್ಸಿಗೆ ಭಂಗ ತರಲು ಪ್ರಾರಂಭಿಸಿದನು. ಅವನ ಕಾಟದಿಂದ ಯಜ್ಞಗಳಿಗೆ ಭಂಗವಾಗಿತ್ತಂತೆ. ಈ ಕಾರಣದಿಂದಾಗಿ, ದೇವತೆಗಳು ಭೂಮಿಗೆ ಮಳೆ ಸುರಿಸುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದ ಭೀಕರ ಬರಗಾಲ ಎದುರಾಗಿ ಎಲ್ಲರೂ ಕಷ್ಟಪಡುವಂತಾಯಿತು. ಆಗ ಜಾಬಾಲಿ ಮಹರ್ಷಿಗಳು ಒಂದು ಯಜ್ಞ ನಡೆಸಲು ತೀರ್ಮಾನಿಸಿ, ಇದಕ್ಕೆ ಸಹಾಯವಾಗುವಂತೆ ಇಂದ್ರನ ಬಳಿ ಹೋಗಿ ಕಾಮಧೇನುವನ್ನು ಕಳುಹಿಸಿಕೊಡಲು ಕೇಳಿಕೊಂಡರು. ಆದರೆ ಅಲ್ಲಿ ಕಾಮಧೇನು ಇರಲಿಲ್ಲ. ಬದಲಿಗೆ ಅವಳ ಮಗಳಾದ ನಂದಿನಿಯನ್ನು ಕಳುಹಿಸಿಕೊಡಲು ಇಂದ್ರ ಒಪ್ಪಿಕೊಳ್ಳುತ್ತಾನೆ. ಆದರೆ ನಂದಿನಿ, ಋಷಿಗಳ ಜೊತೆಗೆ ಭೂಲೋಕಕ್ಕೆ ಬರಲು ಒಪ್ಪುವುದಿಲ್ಲ. ಇದರಿಂದ ಕುಪಿತರಾದ ಮಹರ್ಷಿಗಳು, ನದಿಯಾಗಿ ಹರಿಯುವಂತೆ ನಂದಿನಿಗೆ ಶಾಪ ನೀಡುತ್ತಾರೆ. ಈ ಶಾಪ ವಿಮೋಚನೆಗಾಗಿ ನಂದಿನಿ ಆದಿಶಕ್ತಿಯನ್ನು ಪ್ರಾರ್ಥಿಸಿದಾಗ, ದುರ್ಗಾದೇವಿ ಪ್ರತ್ಯಕ್ಷಳಾಗಿ, ನೀನು ನದಿಯಾಗಿ ಹರಿಯಲೇಬೇಕು. ನಾನು ನಿನ್ನ ಮಗಳಾಗಿ ಹುಟ್ಟಿ ಬರುತ್ತೇನೆ. ಆಗ ನಿನ್ನ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಕಳುಹಿಸುತ್ತಾಳೆ. ಆಗ ನಂದಿನಿ ಈ ಕ್ಷೇತ್ರದಲ್ಲಿ ನದಿಯಾಗಿ ಹರಿಯುತ್ತಾಳೆ.
ಇತ್ತ ಅರುಣಾಸುರ, ಮನುಷ್ಯರಿಂದಾಗಲಿ,ಪ್ರಾಣಿಗಳಿಂದಾಗಲೀ ಮರಣ ಬಾರದಂತೆ ಬ್ರಹ್ಮನಿಂದ ವರಪಡೆದು ಎಲ್ಲರಿಗೂ ಇನ್ನಷ್ಟು ಹಿಂಸೆ ನೀಡಲು ಪ್ರಾರಂಭಿಸಿದಾಗ ಎಲ್ಲರೂ ಆದಿಶಕ್ತಿಯ ಮೊರೆ ಹೋಗುತ್ತಾರೆ. ಆಗ ಆದಿಶಕ್ತಿಯು ಮೋಹಿನಿಯ ರೂಪ ತಾಳುತ್ತಾಳೆ. ಅರುಣಾಸುರ ಉದ್ಯಾನದಲ್ಲಿ ಸಂಚರಿಸುತ್ತಿದ್ದಾಗ, ಅವಳನ್ನು ಕಂಡು ಮೋಹಗೊಂಡ ಅಸುರ ಮದುವೆಯಾಗಲು ಕೇಳಿಕೊಳ್ಳುತ್ತಾನೆ. ಅವಳು ಏನೊಂದೂ ಉತ್ತರ ಕೊಡದೆ ಒಂದು ಬೃಹತ್ ಬಂಡೆಯಲ್ಲಿ ಕಣ್ಮರೆಯಾಗುತ್ತಾಳೆ. ಅವನು ಸಿಟ್ಟಿನಿಂದ ಬಂಡೆಗೆ ಹೊಡೆದಾಗ, ಅದರಿಂದ ಸಹಸ್ರ ಸಂಖ್ಯೆಯಲ್ಲಿ ದುಂಬಿಗಳು ಹೊರಬರಲಾರಂಭಿಸುತ್ತವೆ. ಅವುಗಳಲ್ಲಿ ಆದಿಶಕ್ತಿಯು ಒಂದು ದೊಡ್ಡ ಭ್ರಮರದ ರೂಪ ತಾಳಿ ಅರುಣಾಸುರನನ್ನು ಕಚ್ಚಿ ಕೊಂದು ಭ್ರಮರಾಂಭಿಕೆ ಎನಿಸಿಕೊಳ್ಳುತ್ತಾಳೆ. ನಂತರ ಋಷಿಗಳು ಅವಳಿಗೆ ಅಭಿಷೇಕ ಮಾಡಿ, ಶಾಂತ ಸ್ವರೂಪಳಾಗುವಂತೆ ಬೇಡಿಕೊಂಡಾಗ ದೇವಿಯು ನಂದಿನಿ ನದಿಯ ಮಧ್ಯದಲಿ,ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರಿ ಎಂಬ ಹೆಸರಿನಿಂದ ಉದ್ಭವಿಸುತ್ತಾಳೆ. ಇದರಿಂದ ನಂದಿನಿಯ ಶಾಪವೂ ವಿಮೋಚನೆಯಾಯಿತು. ನಂದಿನಿ ನದಿಯ ಕಟಿ (ನಡು) ಭಾಗದಲ್ಲಿ ಉದ್ಭವಿಸಿರುವ ಕಾರಣ ಈ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರು ಬಂದಿದೆ ಎನ್ನುತ್ತದೆ ಇತಿಹಾಸ.
ಈ ದೇವಸ್ಥಾನವನ್ನು ಕೇರಳ
ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿಯೇ ಒಂದು ಬೃಹದಾಕಾರದ ಬಂಡೆ ಇದೆ. ಇಲ್ಲಿಂದಲೇ ದೇವಿ ಹೊರಗೆ ಬಂದಳೆಂದು, ಈ ಬಂಡೆಗೆ ನಿತ್ಯವೂ ಮೂರು ಬಾರಿ ಪೂಜೆಸಲ್ಲಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಮಹಾಗಣಪತಿ, ಅಯ್ಯಪ್ಪ, ಚಾಮುಂಡಿ, ಬ್ರಹ್ಮ, ಮುಂತಾದವರ ದೇವಸ್ಥಾನಗಳಿವೆ. ಶಕ್ತಿಮಾತೆಯ ಅವತಾರವೆಂದೇ ಪರಿಗಣಿಸಲಾಗುವ ದುರ್ಗಾಪರಮೇಶ್ವರಿಯ ದರ್ಶನ ಭಾಗ್ಯಕೋರಿ, ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಈ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವವನ್ನು ಅದ್ದೂರಿುಂದ ಆಚರಿಸಲಾಗುತ್ತದೆ. 9 ದಿನಗಳ ಕಾಲ ನಿರಂತರವಾಗಿ ವಿಶೇಷ ಪೂಜೆಗಳು ಇಲ್ಲಿ ನಡೆಯುತ್ತವೆ.
ತಲುಪುವ ಮಾರ್ಗ
ಈ ಕ್ಷೇತ್ರಕ್ಕೆ ಹತ್ತಿರದ ವಿಮಾನ ನಿಲ್ದಾಣ ಮಂಗಳೂರು. ಇಲ್ಲಿಂದ ಕೇವಲ 16 ಕಿ.ಮೀ. ಮತ್ತು ಈ ಕ್ಷೇತ್ರದಿಂದ ಕೇವಲ 11 ಕಿ.ಮೀ ಅಂತರದಲ್ಲಿಯೇ ಮುಲ್ಕಿ ಪಟ್ಟಣದ ರೈಲು ನಿಲ್ದಾಣವಿದೆ.
ಆಶಾ ಎಸ್. ಕುಲಕರ್ಣಿ