ಕಟಪಾಡಿ: ಶುಭ ಕಾರ್ಯ ನಿಮಿತ್ತ ಬಳಸಲಾಗಿದ್ದ ಮಾಂಸದ ಬಿರಿಯಾನಿ ಮತ್ತು ಕುಡಿದ ನೀರಿನ ಪ್ಲಾಸ್ಟಿಕ್ ಬಾಟಲಿಗಳ ರಾಶಿಯನ್ನು ಕಟಪಾಡಿ ಕಲ್ಸಂಕ ಬಳಿಯ ಧಕ್ಕೆಯ ಬಳಿ ರಸ್ತೆಯ ಮೇಲೆಯೇ ಸುರಿದಿದ್ದು, ಸ್ಥಳೀಯರ ಆಕ್ರೋಶದ ಮೇರೆಗೆ ಟಿಪ್ಪರ್ ಮೂಲಕ ತೆರವುಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.
ಕಟಪಾಡಿಯಲ್ಲಿನ ಧಕ್ಕೆಯ ಪಾಪನಾಶಿನಿ ಹೊಳೆಯ ಸೇತುವೆಯ ಬಳಿಯಲ್ಲಿ ಈ ತ್ಯಾಜ್ಯವು ಕಂಡು ಬಂದಿದ್ದು, ಗಬ್ಬು ವಾಸನೆಯನ್ನು ಸಹಿಸದಾದ ಸ್ಥಳೀಯರು ಕೂಡಲೇ ಗ್ರಾಮ ಪಂಚಾಯತ್, ವಾರ್ಡು ಸದಸ್ಯರು, ಪಂಚಾಯತ್ ಸದಸ್ಯರ ಗಮನಕ್ಕೆ ತಂದು ತಮ್ಮ ಅಸಹನೆಯನ್ನು ಪ್ರಕಟಿಸಿದ್ದರು. ವಾರ್ಡು ಸದಸ್ಯ ಪ್ರೇಮ್ ಕುಮಾರ್ ಕಟಪಾಡಿ ಕೂಡಲೇ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪಿಡಿಒ ಗಮನಕ್ಕೆ ತಂದು ತುರ್ತು ಕ್ರಮಕ್ಕೆ ಆಗ್ರಹಿಸಿದ್ದರು.
ಗ್ರಾಮ ಪಂಚಾಯತ್ ಕೂಡಲೇ ಎಚ್ಚೆತ್ತು ತ್ಯಾಜ್ಯದ ಮೂಲವನ್ನು ಕಂಡು ಹಿಡಿದು ಕೂಡಲೇ ತೆರವುಗೊಳಿಸುವಂತೆ ತ್ಯಾಜ್ಯ ಸುರಿದವರ ಗಮನಕ್ಕೆ ತಂದಿರುತ್ತಾರೆ.
ಶುಭ ಕಾರ್ಯವನ್ನು ನಡೆಸಿದ ಮನೆ ಮಾಲಕ ಕೂಡಲೇ ಜೆಸಿಬಿ ಮತ್ತು ಟಿಪ್ಪರ್ ಮೂಲಕ ಅಲ್ಲಿ ಸುರಿಯಲಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿ ಸ್ಥಳೀಯ ನಿವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಈ ಭಾಗದಲ್ಲಿ ಹಸಿ ತ್ಯಾಜ್ಯವನ್ನೂ ಬಿಸಾಡುತ್ತಿದ್ದು, ಕಟಪಾಡಿ ಧಕ್ಕೆಯಲ್ಲಿ ಐಶಾರಾಮಿ ಕಾರುಗಳಲ್ಲಿ ಆಗಮಿಸಿ ತ್ಯಾಜ್ಯವನ್ನು ಬಿಸಾಡಿ ಹೋಗುವುದು ಮಾಮೂಲಾಗಿದೆ. ಕಟಪಾಡಿ ಪೇಟೆಯಲ್ಲಿನ ಕಟ್ಟಡಗಳ ಮಲಿನ ತ್ಯಾಜ್ಯವೂ ಇದೇ ಪಾಪನಾಶಿನಿ ಹೊಳೆಗೆ ಈ ಭಾಗದಿಂದಲೇ ಸೇರುತ್ತಿದೆ. ಇಲ್ಲಿನ ನಿವಾಸಿಗಳಾದ ನಮಗೆ ನಿತ್ಯ ನರಕ ಯಾತನೆಯಾಗಿದೆ. ಈ ಬಗ್ಗೆ ಶಾಶ್ವತ ಪರಿಹಾರ ಕ್ರಮಕ್ಕೆ ಕಟಪಾಡಿ ಗ್ರಾಮ ಪಂಚಾಯತ್ ಮುಂದಾಗಬೇಕಿದೆ ಎಂದು ಆಗ್ರಹಿಸುವ ಸ್ಥಳೀಯರಾದ ಕ್ಯಾಥರಿನ್ ರೊಡ್ರಿಗಸ್, ಕಮಲ ಕೋಟ್ಯಾನ್ ಮೊದಲಾದವರು ತಮ್ಮ ಆಕ್ರೋಶವನ್ನು ಹೊರಗೆಡಹಿದ್ದಾರೆ.
ಕ್ರಮ ಕೈಗೊಳ್ಳಲಾಗಿದೆ
ತ್ಯಾಜ್ಯ ಸುರಿದ ವಿಷಯ ಗಮನಕ್ಕೆ ಬಂದ ಕೂಡಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸುರಿದವರ ಗಮನಕ್ಕೆ ತರಲಾಗಿದ್ದು, ಅವರೇ ಸ್ವ ಇಚ್ಛೆಯಿಂದ ತೆರವುಗೊಳಿಸಿದ್ದು, ದಂಡ ವಿಧಿಸಲಾಗಿದೆ.
-ಇನಾಯತುಲ್ಲಾ ಬೇಗ್, ಪಿ.ಡಿ.ಒ. ಕಟಪಾಡಿ ಗ್ರಾ.ಪಂ.