Advertisement

ಕಟಪಾಡಿ : ಏಣಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯ ನಿಧಿ ಕುಂಭ ಯೋಗನಾಳದಲ್ಲಿ ತೀರ್ಥೋದ್ಭವ!

08:05 PM Oct 22, 2021 | Team Udayavani |

ಕಟಪಾಡಿ: ಐತಿಹ್ಯ, ಕಾರಣಿಕ ಗರಡಿಯೊಂದರ ನವ ನಿರ್ಮಾಣಕ್ಕೆ  ನಿಧಿ ಕುಂಭ ಸ್ಥಾಪನೆಯ ಮರುದಿನ ನಿಧಿ ಕುಂಭದ ನಾಳದಲ್ಲಿ ನೀರು ಮೇಲಕ್ಕೆ ಉಕ್ಕಿ ಬರುತ್ತಿದ್ದು, ತೀರ್ಥೋದ್ಭವ  ಕಂಡು ಭಕ್ತಾಧಿ ಗಳು ಪುಳಕಿತರಾಗುತ್ತಿದ್ದಾರೆ.

Advertisement

ಕಾರಣಿಕ ಪ್ರಸಿದ್ಧ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಸಮಗ್ರ ಜೀರ್ನೋದ್ಧಾರದ ಪ್ರಯುಕ್ತ ಗುರುವಾರ  ನಿಧಿ ಕುಂಭ ಸ್ಥಾಪನೆಗೊಂಡಿದ್ದು,  ಶುಕ್ರವಾರದಂದು ನಿಧಿ ಕುಂಭ ಯೋಗನಾಳದಲ್ಲಿ ಜಲಗಂಗೆ ಉಕ್ಕುತ್ತಿರುವುದು ಕಂಡು ಬಂದಿದ್ದು, ಕ್ಷೇತ್ರದ ಕಾರಣಿಕದ ಬಗ್ಗೆ ಜೀರ್ನೋದ್ಧಾರ ಸಮಿತಿ, ಭಕ್ತಾಧಿ ಗಳು ಪುಳಕಿತರಾಗುತ್ತಿರುವುದು ಕಂಡು ಬರುತ್ತಿದೆ.

ಜಲ ನೋಡಿ ನೆಲೆಯಾದ ಶಕ್ತಿಗಳು ಎಂಬ ಕಾರಣಿಕ ಪ್ರಸಿದ್ಧ ಕ್ಷೇತ್ರವಾಗಿದ್ದು, ಇಲ್ಲಿನ ಬ್ರಹ್ಮರಗುಂಡ ನವನಿರ್ಮಾಣಗೊಳ್ಳಲಿರುವ ಸ್ಥಳದಲ್ಲಿ ಗರಡಿಯ ಪೂಜಾರಿ ಇಂಪು ಪೂಜಾರಿ ಮತ್ತು ತಂತ್ರಿವರ್ಯರಾದ ಮಹೇಶ್ ಶಾಂತಿ ಹೆಜಮಾಡಿ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ನಾರಾಯಣಗುರು ಮಠದ ಪೀಠಾಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ನಿಧಿ ಕುಂಭ ಪ್ರತಿಷ್ಠೆಯ ಸಂದರ್ಭದಲ್ಲಿ ತಳದಲ್ಲಿ ಆಧಾರ ಶಿಲೆ, ಅದರ ಮೇಲೆ ಧಾನ್ಯ ಪೀಠ, ಶಿಲೆಯ ನಿಕುಂಭ, ಬಳಿಕ ಶಿಲಾ ಪದ್ಮ, ಶಿಲೆಯ ಕೂರ್ಮಾಕೃತಿಯ, 15 ಅಡಿ ಎತ್ತರದ ಚಿನ್ನದ ಸರಿಗೆಯನ್ನೊಳಗೊಂಡಂತೆ ತಾಮ್ರದ ಯೋಗನಾಳವನ್ನು ಸುಮಾರು 12 ಅಡಿ ಆಳದಲ್ಲಿ ಪ್ರತಿಷ್ಠೆಗೊಳಿಸಲಾಗಿತ್ತು.

ಇದೀಗ ಸುಮಾರು 15 ಅಡಿ ಎತ್ತರದ ಯೋಗನಾಳದಲ್ಲಿ ಜಲಗಂಗೆ ಜಿನುಗುತ್ತಿರುವುದನ್ನು ಕಂಡ ಜೀರ್ನೋದ್ಧಾರ ಸಮಿತಿಯ ಅಧ್ಯಕ್ಷ ಅಶೋಕ್ ಎನ್. ಪೂಜಾರಿ, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಕೋಶಾಧಿಕಾರಿ ದುಗ್ಗಪ್ಪ ಜಿ.ಬಂಗೇರ, ಗರಡಿಯ ಪೂಜಾರಿ ಇಂಪು ಪೂಜಾರಿ ಸಹಿತ ಭಕ್ತರು ಕ್ಷೇತ್ರದ ಕಾರಣಿಕದ ನಿದರ್ಶನದ ಬಗ್ಗೆ ಭಕ್ತ್ತಿಭಾವ ಪರವಶರಾಗುತ್ತಿರುವುದು ಕಂಡು ಬರುತ್ತಿದೆ.

Advertisement

ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

ನಾಗಬ್ರಹ್ಮ ಸಾನಿಧ್ಯ, ವಾಯುದೇವರ, ಕೋಟಿ ಚೆನ್ನಯರ, ಕುಜುಂಬ ಕಾಂಜವ, ಒಕ್ಕು ಬಳ್ಳಾಲ, ಜೋಗಿಪುರುಷ, ಪಂಜುರ್ಲಿ , ಪಿಲಿಚಂಡಿ, ಗುರುಕಂಬ, ಕಾಂತೇರಿ ಜುಮಾದಿ, ಜುಮಾದಿ ಬಂಟ, ಮಾಯಂದಾಲ್, ಕೊಳತೆ ಜುಮಾದಿ, ಮಾಣಿ, ಬಾಲೆ, ಬಬ್ಬರ್ಯ, ಅಯ್ಯ ಕಲ್ಲು, ಧ್ವಜಮರ, ಜಲನೆಲೆ, ಒಂದೇ ಬಾಗಿಲು ಹೊಂದಿರುವ ಕಾರಣಿಕ ಕ್ಷೇತ್ರದಲ್ಲಿ ಕ್ಷೇತ್ರದ ಶಕ್ತಿಗಳ ನಿದರ್ಶನಗಳನ್ನು ತೋರಿದ್ದಾರೆ  ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್ ಭಕ್ತಿ ಪರವಶರಾಗಿ ತಿಳಿಸಿದ್ದಾರೆ.

ಕಾರಣಿಕ ಕ್ಷೇತ್ರದ ನಿಧಿ ಕುಂಭ ಸ್ಥಾಪನೆಯ ಮರುದಿನ ನಿಧಿ ಕುಂಭದ ನಾಳದಲ್ಲಿ ನೀರು ಮೇಲಕ್ಕೆ ಉಕ್ಕಿ ಬರುತ್ತಿದೆ. ತೀರ್ಥೋದ್ಭವ ಅಂತ ಹೇಳಬಹುದು. ಏಕೆಂದರೆ ಶಕ್ತಿ ಪುರುಷರಾದ ಕೋಟಿ ಚೆನ್ನಯರು ನೀರಿದ್ದಲ್ಲಿ ನೆಲೆಯಾಗಿದ್ದು ಎಂಬ ಪುಣ್ಯ ವಾಕ್ಯದಂತೆ ಶಕ್ತಿಯು ಕಂಡು ಬರುತ್ತಿದೆ. ಅದು ನಮ್ಮ ಭಾಗ್ಯ ಎಂದು ಕ್ಷೇತ್ರದ ಭಕ್ತ ಆರ್.ಜಿ. ಕೋಟ್ಯಾನ್ ಪ್ರತಿಕ್ರಿಯಿಸಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲೂ  ಈ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, ಕ್ಷೇತ್ರದ ಭಕ್ತರು ಬಂದು ವೀಕ್ಷಿಸುತ್ತಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next