Advertisement

ಕಟಪಾಡಿ : ತ್ಯಾಜ್ಯದ ರಾಶಿ; ಸಾಂಕ್ರಾಮಿಕ ರೋಗದ ಭೀತಿ!

09:28 PM Jul 15, 2019 | Sriram |

ಕಟಪಾಡಿ: ಕಟಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಎಲ್ಲೆಲ್ಲೂ ತ್ಯಾಜ್ಯದ ರಾಶಿಯು ಕಂಡು ಬರುತ್ತಿದ್ದು ಈ ಬಾರಿಯ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗುವ ಸಾಧ್ಯತೆ ಇದೆ.

Advertisement

ಪ್ರಮುಖವಾಗಿ ರಾ.ಹೆ. 66ರ ಸರ್ವಿಸ್‌ ರಸ್ತೆಗಳ ಪಕ್ಕದಲ್ಲಿ ಜನವಸತಿ ಪ್ರದೇಶ ಮತ್ತು ಜನ ಸಂಚಾರದ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಸುರಿಯಲಾಗಿದೆ. ಎಸ್‌.ವಿ.ಎಸ್‌. ಶಾಲೆಯ ಆವರಣಗೋಡೆಯ ಹೊರಭಾಗದಲ್ಲಿ ತ್ಯಾಜ್ಯ ಸುರಿಯಲಾಗಿದ್ದು, ಇದು ಶಾಲಾ ಮಕ್ಕಳು ಸಹಿತ ಅಧಿಕ ಸಂಖ್ಯೆಯಲ್ಲಿ ಓಡಾಡುವ ಪ್ರದೇಶವಾಗಿದೆ. ಮಣಿಪುರ ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆ ಭಾಗದ ಇಕ್ಕೆಲಗಳಲ್ಲಿ ಗೋಣಿಗಳಲ್ಲಿ ತಂದು ತ್ಯಾಜ್ಯ ಹಾಕುತ್ತಿದ್ದು, ಸರಕಾರಿ ಗುಡ್ಡೆ ಸಂಪರ್ಕದ ರೈಲ್ವೇ ಕ್ರಾಸಿಂಗ್‌ ಬಳಿ, ಜನವಸತಿ ಕಾಲನಿ ಹತ್ತಿರ ತ್ಯಾಜ್ಯಗಳ ರಾಶಿ ತಯಾರಾಗುತ್ತಿದೆ.

ಕಟಪಾಡಿ -ಶಿರ್ವ ಸಂಪರ್ಕದ ರಾಜ್ಯ ಹೆದ್ದಾರಿಯ ಅಚ್ಚಡ ರೈಲ್ವೇ ಮೇಲ್ಸೇತುವೆಯ ಬಳಿ ರಸ್ತೆಯಲ್ಲಿಯೇ ಚೆಲ್ಲಾ ಪಿಲ್ಲಿಯಾಗಿ ಹರಡಿಕೊಂಡಿರುವ ಸ್ಥಿತಿಯಲ್ಲಿ ಕೊಳೆತ ಹಸಿ ತ್ಯಾಜ್ಯಗಳು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ.

ಈ ಪರಿಸರದಲ್ಲಿ ಕೊಳೆತ ತ್ಯಾಜ್ಯದಿಂದ ಗಬ್ಬು ವಾಸನೆಯಿಂದ ನಾರುತ್ತಿದ್ದು ಅಸಹ್ಯವಾದ ವಾತಾವರಣ ಸೃಷ್ಟಿಯಾಗಿದೆ. ಇದರಲ್ಲಿನ ಹಸಿ ತ್ಯಾಜ್ಯಗಳು ಇದೀಗ ಸುರಿಯುತ್ತಿರುವ ಮಳೆಯಿಂದ ಕೊಳೆತು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗುವ ಜತೆಗೆ ಪರಿಸರಕ್ಕೆ ಮಾರಕವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗದ ಭೀತಿಯ ಛಾಯೆಯು ಸ್ಥಳೀಯರಲ್ಲಿ ಕಾಡುತ್ತಿವೆ.

ಅದರೊಂದಿಗೆ ಹಗುರವಾದ ತ್ಯಾಜ್ಯವು ಗಾಳಿಯಿಂದ ಅಥವಾ ಮಳೆಯ ನೀರಿನ ಹರಿವಿನೊಂದಿಗೆ ಸಾಗಿ ಕೃಷಿ ಗದ್ದೆ, ಹೊಳೆ, ತೊರೆಗಳನ್ನು ಸೇರುವ ಸಂಭಾವ್ಯತೆ ಅಧಿಕವಾಗಿದ್ದು, ಕೃಷಿಗೂ ಹಾನಿಯಾಗಬಲ್ಲುದು. ಪರಿಸರ ಮಾಲಿನ್ಯದ ಜತೆಗೆ ಜಲಚರಗಳ ಮೇಲೆಯೂ ದುಷ್ಪರಿಣಾಮವನ್ನು ಬೀರುವ ಸಾಧ್ಯತೆಯು ನಿಚ್ಚಳವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.

Advertisement

ಇಲ್ಲಿನ ಸ್ಥಳೀಯರ ಸಹಿತವಾಗಿ ಸನಿಹದಲ್ಲಿ ಸಾಗುವ ಸಂಚಾರಿಗಳಿಗೂ ಸಾಂಕ್ರಾಮಿಕ ರೋಗದ ಭೀತಿಯನ್ನು ಸೃಷ್ಟಿಸುತ್ತಿದೆ. ಆದರೊಂದಿಗೆ ಕಳೆದ ಮಳೆಗಾಲದಲ್ಲಿ ಕಟಪಾಡಿ ಭಾಗದಲ್ಲಿ ಸಂಶಯಿತ ಡೆಂಗ್ಯೂ ಜ್ವರ ಕಾಡಿರುವುದನ್ನು ಸಾರ್ವಜನಿಕರು ನೆನಪಿಸಿಕೊಳ್ಳುತ್ತಿದ್ದಾರೆ.

ಜನಮಾನಸದ ಸುರಕ್ಷತೆಯನ್ನು ಗಮನ ದಲ್ಲಿರಿಸಿಕೊಂಡು ಮೂಲದಲ್ಲಿಯೇ ಸೂಕ್ತವಾಗಿ ವಿಲೇವಾರಿಗೊಳಿಸಿದಲ್ಲಿ ಇಂತಹ ಸಮಸ್ಯೆಯು ಸೃಷ್ಟಿಯಾಗುತ್ತಿರಲಿಲ್ಲ ಎನ್ನುವುದು ಸಾರ್ವ ಜನಿಕರ ಅಭಿಪ್ರಾಯ. ಈ ಕೂಡಲೇ ಆರೋಗ್ಯ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆ ಸಹಿತ ಸಂಬಂಧಿತ ಇಲಾಖೆಯು ಜನರ ಆರೋಗ್ಯದ ಸುರಕ್ಷತೆಯ ಬಗ್ಗೆ ಕಾಳಜಿ ಇರಿಸಿ ಈ ಬಗ್ಗೆ ನಿಗಾ ವಹಿಸ ಬೇಕಾಗಿ ಸಾರ್ವಜನಿಕರ ಆಗ್ರಹವಾಗಿದೆ.

ಬೇಸರ ಮೂಡಿಸುತ್ತಿದೆ
ಕಳೆದ ತಿಂಗಳ‌ ಹಿಂದಷ್ಟೇ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿತ್ತು. ಸಾರ್ವಜನಿಕರು ಸೌಜನ್ಯ ಮರೆತು ನಿರಂತರ ತ್ಯಾಜ್ಯ ಸುರಿಯುತ್ತಿರುವುದು ಬೇಸರ ಮೂಡಿಸುತ್ತಿದೆ. ಜನರು ತ್ಯಾಜ್ಯವನ್ನು ಸುರಿಯದಂತೆ ಮತ್ತೆ ವಿಜ್ಞಾಪಿಸುತ್ತೇನೆ. ಪರಿಸರ ಸ್ವತ್ಛತೆ ಮತ್ತು ಗ್ರಾಮಸ್ಥರ ಆರೋಗ್ಯ ಕಾಳಜಿಯಿಂದ ಶೀಘ್ರದಲ್ಲಿಯೇ ಸಂಗ್ರಹಿತ ತ್ಯಾಜ್ಯವನ್ನು ವಿಲೇವಾರಿಗೊಳಿಸಲಾಗುತ್ತದೆ.
– ಇನಾಯತುಲ್ಲಾ ಬೇಗ್‌,
ಪಿ.ಡಿ.ಒ. ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next