ಸಂಗೀತ ನಿರ್ದೇಶಕ ರವಿ ಬಸ್ರೂರು “ಕಟಕ’ ಎಂಬ ಸಿನಿಮಾ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ಸಿನಿಮಾಗಳ ಟ್ರೇಲರ್‌ಗಳು ಯಾವ ಭಾಷೆಯಲ್ಲಿ ಸಿನಿಮಾ ತಯಾರಾಗುತ್ತೋ ಆ ಭಾಷೆಯಲ್ಲಷ್ಟೇ ಬಿಡುಗಡೆಯಾಗುತ್ತದೆ. ಆದರೆ, “ಕಟಕ’ ಚಿತ್ರದ ಟ್ರೇಲರ್ ಬರೋಬ್ಬರಿ 13 ಭಾಷೆಗಳಲ್ಲಿ ಬಿಡುಗಡೆಯಾಗಿದೆ ಎಂದರೆ ನೀವು ನಂಬಲೇಬೇಕು.
ಈ ಮೂಲಕ ಹದಿಮೂರು ಭಾಷೆಯ ಸಿನಿಪ್ರೇಮಿಗಳಲ್ಲೂ “ಕಟಕ’ ಬಗ್ಗೆ ಕುತೂಹಲ ಕೆರಳಬೇಕೆಂಬ ಉದ್ದೇಶ ನಿರ್ದೇಶಕ ರವಿ ಬಸ್ರೂರು ಅವರದು. ಕನ್ನಡ, ತುಳು, ಮರಾಠಿ, ಇಂಗ್ಲೀಷ್, ಹಿಂದಿ, ಕೊಡವ, ಕೊಂಕಣಿ, ಬ್ಯಾರಿ, ಅಸ್ಸಾಮಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಭಾಷೆಗಳಲ್ಲಿ “ಕಟಕ’ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಟ ಪುನೀತ್ ರಾಜಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಅಷ್ಟಕ್ಕೂ 13 ಭಾಷೆಗಳಲ್ಲಿ ಟ್ರೇಲರ್ ಬಿಡಲು ಕಾರಣವೇನು ಎಂದರೆ, ಜನರಿಗೆ ಸಿನಿಮಾ ಬಗ್ಗೆ ಆಸಕ್ತಿ ಹುಟ್ಟಲಿ ಎಂಬ ಕಾರಣಕ್ಕೆ ಎನ್ನುತ್ತಾರೆ ರವಿ ಬಸ್ರೂರು. “ಬೇರೆ ಭಾಷೆ ಟ್ರೇಲರ್‌ಗಳನ್ನು ನೋಡಿ ನಾವು ಖುಷಿಪಡುತ್ತೇವೆ. ನಮ್ಮ ಟ್ರೇಲರ್ ಅನ್ನು ಅವರು ಕೂಡಾ ನೋಡಲಿ. ಜೊತೆಗೆ ಟ್ರೇಲರ್ ಇಷ್ಟವಾಗಿ ಯಾರಾದರೂ ಸಿನಿಮಾ ಡಬ್ಬಿಂಗ್ ಮಾಡಲು ಮುಂದೆ ಬರಲಿ ಎಂಬ ಉದ್ದೇಶ ಕೂಡಾ ಇದರ ಹಿಂದಿದೆ. ಈ ಮೂಲಕ ನಮ್ಮ ಕನ್ನಡ ಸಿನಿಮಾವನ್ನು ಬೇರೆ ಕಡೆಗಳಿಗೂ ತಲುಪುತ್ತದೆ’ ಎನ್ನುತ್ತಾರೆ ರವಿ ಬಸ್ರೂರು.
ಈ ಹಿಂದೆ “ಜಟ್ಟ’, “ಮೈತ್ರಿ’ ಸಿನಿಮಾಗಳನ್ನು ನಿರ್ಮಿಸಿರುವ ಎನ್.ಎಸ್.ರಾಜ್‌ಕುಮಾರ್ ಅವರು ಈಗ “ಕಟಕ’ ಚಿತ್ರ ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು “ಕಟಕ’ ಮೂಲಕ ಒಂದು ಹಾರರ್ ಸ್ಟೋರಿ ಹೇಳಲು ಹೊರಟಿದ್ದಾರೆ. ಮುಖ್ಯವಾಗಿ “ಕಟಕ’ ವಾಮಾಚಾರ ಸುತ್ತ ನಡೆಯುವ ಸಿನಿಮಾ. ಇದು ನೈಜ ಘಟನೆಯನ್ನಾಧರಿಸಿದೆ. ಐದು ವರ್ಷದ ಬಾಲಕಿಯೊಬ್ಬಳ ಮೇಲೆ ವಾಮಾಚಾರ ಪ್ರಯೋಗವಾದಾಗ ಏನೆಲ್ಲಾ ಆಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಕರಾವಳಿಯಲ್ಲಿ ಸುಮಾರು 14 ವರ್ಷಗಳ ಹಿಂದೆ ನಡೆದ ಘಟನೆಗೆ ಸಿನಿಮೀಯ ಸ್ಪರ್ಶ ಕೊಟ್ಟು “ಕಟಕ’ ಮಾಡಿದ್ದಾರೆ ರವಿ ಬಸ್ರೂರು. ಈ ಚಿತ್ರದ ಮತ್ತೂಂದು ಹೈಲೈಟ್ ಅಂದರೆ ಸೌಂಡ್. ಚಿತ್ರದಲ್ಲಿ ಸೌಂಡಿಂಗ್ ತುಂಬಾ ವಿಭಿನ್ನವಾಗಿರಬೇಕು, ಕಥೆಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಹಾಲಿವುಡ್ ಚಿತ್ರಗಳ ಸೌಂಡಿಂಗ್‌ನಲ್ಲಿ ಕೆಲಸ ಮಾಡುವ ಸುಮಾರು 14 ಕಂಪೆನಿಗಳು ಈ ಚಿತ್ರಕ್ಕೆ ಸೌಂಡ್ ಎಫೆಕ್ಟ್ ನೀಡಿವೆ.
ಈ ಹಿಂದೆ “ಗುಡ್ಡದ ಭೂತ’ ಧಾರಾವಾಹಿಯನ್ನು ಚಿತ್ರೀಕರಿಸಿದ ಮನೆಯಲ್ಲೇ “ಕಟಕ’ ಚಿತ್ರೀಕರಣ ಕೂಡಾ ಮಾಡಿರೋದು ವಿಶೇಷ. ಚಿತ್ರದಲ್ಲಿ ಒಂದು ಸಿನಿಮಾದಲ್ಲಿ ಬಹುತೇಕ ಹೊಸಬರೇ ನಟಿಸಿದ್ದಾರೆ. ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಸಚಿನ್ ಬಸ್ರೂರು ಛಾಯಾಗ್ರಹಣವಿದೆ. ಇಡೀ ಸಿನಿಮಾ ಕರಾವಳಿಯಲ್ಲಿ ಚಿತ್ರೀಕರಣವಾಗಿದೆ. ಚಿತ್ರ ಅಕ್ಟೋಬರ್ 13ಕ್ಕೆ ತೆರೆಕಾಣುತ್ತಿದೆ.