Advertisement

ಉಭಯ ಜಿಲ್ಲೆಯ ವಿವಿಧೆಡ ಕನ್ನಡದ ಕಂಪು ಬೀರಿದ ಕೋಟಿ ಕಂಠ ಗಾಯನ

12:43 AM Oct 29, 2022 | Team Udayavani |

ಮಣಿಪಾಲ: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಾಹೆ ವಿ.ವಿ.ಯು ಜಿಲ್ಲಾಡಳಿತದ ಸಹಯೋಗದೊಂದಿಗೆ ಗ್ರೀನ್ಸ್‌ನಲ್ಲಿ ಹಮ್ಮಿಕೊಂಡಿದ್ದ ಕೋಟಿಕಂಠ ಗಾಯನದಲ್ಲಿ ವೈದ್ಯರು, ವೈದ್ಯ, ದಂತವೈದ್ಯ ವಿದ್ಯಾರ್ಥಿಗಳು, ಅರೆವೈದ್ಯಕೀಯ ಕೋರ್ಸ್‌ಗಳು, ನರ್ಸ್‌ ಹೀಗೆ 5 ಸಾವಿರಕ್ಕೂ ಅಧಿಕ ಮಂದಿ ಬಿಳಿಕೋಟು, ಸ್ಟೆತೊಸ್ಕೋಪ್‌ಗ್ಳೊಂದಿಗೆ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

Advertisement

ನಾಡಗೀತೆಯೊಂದಿಗೆ ಆರಂಭ ವಾದ ಕೋಟಿಕಂಠ ಗಾಯನವು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಗೀತೆಯೊಂದಿಗೆ ಸಮಾಪನಗೊಂಡಿತು. ಅನಂತರ ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹೊರ ರಾಜ್ಯ ಮತ್ತು ವಿದೇಶದ ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡು, ಕನ್ನಡದ ಹಾಡಿಗೆ ದನಿಯಾಗಿರುವುದು ಇನ್ನೊಂದು ಆಕರ್ಷಣೆಯಾಗಿತ್ತು.

ಶಾಸಕ ಕೆ. ರಘುಪತಿ ಭಟ್‌, ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಕೆಎಂಸಿ ಡೀನ್‌ ಡಾ| ಶರತ್‌ ರಾವ್‌, ಮಾಹೆಯ ಹಿರಿಯ ಅಧಿಕಾರಿಗಳಾದ ಡಾ| ಗಿರಿಧರ ಕಿಣಿ, ರಾಘವೇಂದ್ರ ಯು., ಕ| ಪ್ರಕಾಶ್ಚಂದ್ರ, ಡಾ| ಅನಿಲ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

ಆಳ್ವಾಸ್‌ನಲ್ಲಿ ಹೊಮ್ಮಿತು ಕನ್ನಡ ಪ್ರೇಮದ ಹೊನಲು
ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಾಗಿ
ಮೂಡುಬಿದಿರೆ: “ಕೋಟಿ ಕಂಠ ಗಾಯನ -ನನ್ನ ನಾಡು ನನ್ನ ಹಾಡು’ ಕಾರ್ಯಕ್ರಮದನ್ವಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿ ಯಿಂದ ಏಕಕಾಲದಲ್ಲಿ 8 ಕಡೆ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಕನ್ನಡಾ ಭಿಮಾನದ ಗೀತೆಗಳನ್ನು ಹಾಡುವ ಮೂಲಕ ಚಾರಿತ್ರಿಕ ದಾಖಲೆ ನಿರ್ಮಾಣವಾಯಿತು.

ಪ್ರತಿಷ್ಠಾನದ ಪ.ಪೂ. ಹಾಗೂ ಪದವಿ ಕಾಲೇಜಿನಿಂದ 12,076, ಆಯುರ್ವೇದ, ನ್ಯಾಚುರೋಪತಿ, ಎಂಜಿನಿಯರಿಂಗ್‌ ಹಾಗೂ ಹೋಮಿ ಯೋಪಥಿ ಕಾಲೇಜುಗಳಿಂದ 4,234, ಆಳ್ವಾಸ್‌ ಸಿಬಿಎಸ್‌ಇ, ಸ್ಟೇಟ್‌ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಂದ 3,500, ನರ್ಸಿಂಗ್‌ ಕಾಲೇಜಿನಿಂದ 400 ಮಂದಿ ಪಾಲ್ಗೊಂಡರು.

Advertisement

ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಜಯ್‌ ಭಾರತ ಜನನಿಯ ತನುಜಾತೆ’ ಹಾಗೂ ‘ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೋಳ ನಾರಾಯಣ ರಾವ್‌ ಅವರ ಉದಯ ವಾಗಲಿ ನಮ್ಮ ಚಲುವ ಕನ್ನಡನಾಡು’, ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಡಾ| ಡಿ.ಎಸ್‌.ಕರ್ಕಿ ಅವರ “ಹಚ್ಚೇವು ಕನ್ನಡದ ದೀಪ’, ಹಾಗೂ ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಹಾಡಲಾಯಿತು.

ನೆರೆದಿದ್ದ ಎಲ್ಲರಿಗೂ ಕನ್ನಡ ಸಂಕಲ್ಪ ವಿಧಿಯನ್ನು ಬೋಧಿಸಲಾಯಿತು. ಪ್ರತಿಷ್ಠಾನದ ಎಲ್ಲ ಕಾಲೇಜುಗಳ ಪ್ರಾಚಾರ್ಯರು, ಬೋಧಕ- ಬೋಧ ಕೇತರ ವರ್ಗದವರು ಪಾಲ್ಗೊಂ ಡರು. ಪ.ಪೂ. ಕಾಲೇಜಿನ ಕಲಾ ವಿಭಾಗದ ಡೀನ್‌ ವೇಣುಗೊಪಾಲ ಶೆಟ್ಟಿ ನಿರೂಪಿಸಿದರು.

ಪಣಂಬೂರು ಕಡಲ ಕಿನಾರೆಯಲ್ಲಿ ಗಾಯನ
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು-ನುಡಿಯ ಹಿರಿಮೆ ಸಾರುವ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿ. ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪಣಂಬೂರು ಕಡಲ ಕಿನಾರೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ. ಪಂ. ಸಿಇಒ ಡಾ| ಕುಮಾರ್‌ ಅವರ ನೇತೃತ್ವದಲ್ಲಿ ಗೀತ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ. ತೀರ್ಥರಾಮ ಅಂಬೆಕಲ್ಲು, ಎಸ್‌ಪಿ ಹೃಷಿಕೇಶ್‌ ಭಗವಾನ್‌ ಸೋನಾವಣೆ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಾಣಿಕ್ಯ, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ವಿವಿಧ ಇಲಾಖೆಗಳ ಅಧಿಕಾರಿಗಳು, ನೂರಾರು ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ಜಿ. ಸ್ವಾಗತಿಸಿ, ವಂದಿಸಿದರು.

50 ಬೋಟ್‌ಗಳ ಯಾನದಲ್ಲಿ ಮೊಳಗಿತು ಗಾಯನ
ಮಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗ ವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ಕೋಟಿ ಕಂಠ ಗಾಯನವು ಮಂಗಳೂರು ನಗರ ದಲ್ಲಿ ಅರ್ಥ ಪೂರ್ಣವಾಗಿ ಜರಗಿತು. ಅರಬಿ ಸಮುದ್ರದ ಅಲೆಗಳ ನಿನಾದದಲ್ಲಿ 50ರಷ್ಟು ಬೋಟ್‌ಗಳ ಒಂದೂವರೆ ತಾಸಿನ ಕಡಲ ಯಾನದಲ್ಲಿ ಕೋಟಿ ಕಂಠ ಗಾಯನ ಮೂಡಿ ಬಂತು.

ಬೋಳೂರಿನ ಸುಲ್ತಾನ್‌ ಬತ್ತೇರಿಯಿಂದ ಹೊರಟ ಬೋಟ್‌ಗಳು ತೋಟಬೆಂಗ್ರೆ ಅಳಿವೆ ಬಾಗಿಲು ವರೆಗೆ8 ಕಿ.ಮೀ. ಸಾಗುವ ಮೂಲಕ ಕನ್ನಡದ6 ಹಾಡುಗಳನ್ನು ಹಾಡಲಾಯಿತು. 5 ಪರ್ಸಿನ್‌ ಬೋಟ್‌ ಗಳು, 10 ಆಳ ಸಮುದ್ರ ಮೀನು ಗಾರಿಕೆ ಬೋಟ್‌ಗಳು, 25 ನಾಡದೋಣಿಗಳು, 10 ಕರೆ ಫಿಶಿಂಗ್‌ ಬೋಟ್‌ಗಳು ಹಾಗೂ 4 ಫೆರಿ ಬೋಟ್‌ಗಳಲ್ಲಿ ಕೋಟಿ ಕಂಠ ಗಾಯನ ಮೂಡಿತು. ಎಲ್ಲ ಬೋಟ್‌ಗಳು ಶೃಂಗಾರಗೊಂಡು ಕನ್ನಡದ ಜತೆಗೆ ತುಳು ಬಾವುಟವೂ ರಾರಾಜಿಸಿದ್ದು ವಿಶೇಷವೆನಿಸಿತು.

ಶಾಸಕ ಕಾಮತ್‌ ಮಾತನಾಡಿ, ಕೋಟಿ ಕಂಠ ಗಾಯನವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇದೊಂದು ಮಹತ್ವದ ದಿನವಾಗಿ ನಾಡಿನ ಜನತೆಯ ಮನದಾಳದಲ್ಲಿ ಸದಾ ಉಳಿಯಲಿದೆ ಎಂದರು. ಕನ್ನಡ ಧ್ವಜಗಳೊಂದಿಗೆ ತುಳು ಧ್ವಜವನ್ನೂ ಹಾರಿಸಲಾಗಿದ್ದು, ಜತೆಗೆ ಕನ್ನಡ ಹಾಡುಗಳ ಅನಂತರ ತುಳು ಹಾಡನ್ನು ಕೂಡ ಹಾಡುವ ಮೂಲಕ ಒಕ್ಕೂಟ ವ್ಯವಸ್ಥೆಯ ತತ್ವವನ್ನು ಸಾರಲಾಗಿದೆ ಎಂದವರು ಹೇಳಿದರು.
ಉಪಮೇಯರ್‌ ಪೂರ್ಣಿಮಾ, ಮನಪಾ ಸದಸ್ಯರು, ಮೀನುಗಾರಿಕೆ ಇಲಾಖಾ ಅಧಿಕಾರಿಗಳು, ಆಸಕ್ತರು ಸಹಿತ 500ಕ್ಕೂ ಅಧಿಕ ಮಂದಿ ಕೋಟಿ ಕಂಠ ಗಾಯನದಲ್ಲಿ ಭಾಗವಹಿಸಿದ್ದರು.

ಕೋಟಿ ಕಂಠ ಗಾಯನಕ್ಕೂ ಮುನ್ನ ಸುಲ್ತಾನ್‌ ಬತ್ತೇರಿಯ ಕಡಲ ಕಿನಾರೆಯಲ್ಲಿ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಮೂಹಗಾನ, ದೇಶಭಕ್ತಿಗೀತೆ, ನಾಡಗೀತೆಗಳ ಗಾಯನ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next