ಉಡುಪಿ: ಕೇವಲ 11 ದಿನಗಳ ಹಸುಳೆಗಿದ್ದ ಅಪರೂಪದ ಹೃದಯ ಸಂಬಂಧಿ ಸಮಸ್ಯೆಯನ್ನು ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ನಿವಾರಿಸುವ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ವಿಶೇಷ ಸಾಧನೆ ಮಾಡಿದೆ.
11 ದಿನಗಳ ಹಿಂದೆ ಜನಿಸಿದ ಈ ಶಿಶುವಿನ ಹೃದಯದಲ್ಲಿ ಟಿಜಿಎ- ಟ್ರಾನ್ಸ್‌ಪೊಸಿಷನ್ ಆಫ್ ದಿ ಗ್ರೇಟ್ ಆರ್ಟರೀಸ್ (ಪ್ರಧಾನ ಅಪಧಮನಿಗಳ ಸ್ಥಾನಪಲ್ಲಟ) ಎಂಬ ಅಪರೂಪದ ಸಮಸ್ಯೆ ಇರುವುದನ್ನು ಕೆಎಂಸಿ ವೈದ್ಯರು ಪತ್ತೆಹಚ್ಚಿ ಅನಂತರ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಈಗ ಮಗು ಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಹ್ಮಾವರದ ಹರೀಶ್ ಅವರ ಪತ್ನಿ ಪೂರ್ಣಿಮಾ ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ನವಜಾತ ಶಿಶುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಸರಕಾರಿ ಆಸ್ಪತ್ರೆಯ ವೈದ್ಯರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಮಣಿಪಾಲ ಕೆಎಂಸಿಯ “ಶಿಶುಗಳ ತೀವ್ರ ನಿಗಾ ಘಟಕ’ದಲ್ಲಿ ಶಿಶುರೋಗ ತಜ್ಞ ಡಾ| ಲೆಸ್ಲಿ ಲೂಯಿಸ್ ಮತ್ತು ಹೃದ್ರೋಗ ತಜ್ಞ ಡಾ| ಪದ್ಮಕುಮಾರ್ ಅವರು ತಪಾಸಣೆ ನಡೆಸಿ ಮಗು ಗಂಭೀರ ಹಾಗೂ ಅಪರೂಪವಾದ ಟಿಜಿಎ ಸಮಸ್ಯೆಯಿಂದ ಬಳಲುತ್ತಿರುವುದನ್ನು ಪತ್ತೆ ಹಚ್ಚಿದರು. ಮಗುವನ್ನು ಸುಸಜ್ಜಿತ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆರೈಕೆ ನೀಡಿದ ಬಳಿಕ ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಅಲ್ಲಿ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಟಾಮ್ ದೇವಾಸಿಯಾ ಅವರ ನಿರ್ದೇಶನದಲ್ಲಿ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ| ಅರವಿಂದ ಬಿಷ್ಣೋಯ್ ಅವರು ಸಂಕೀರ್ಣವಾದ ಟಿಜಿಎ ಸರಿಪಡಿಸುವ ಶಸ್ತ್ರಚಿಕಿತ್ಸೆ ನಡೆಸಿದರು ಎಂದು ಡಾ| ಅವಿನಾಶ್ ವಿವರಿಸಿದರು.
ಅತ್ಯಾಧುನಿಕ ತಂತ್ರಜ್ಞಾನ: ಶಿಶುವಿಗಿದ್ದ ಸಮಸ್ಯೆಗೆ ನಾನು ಮತ್ತು ನಮ್ಮ ವೈದ್ಯರ ತಂಡ ಸೂಕ್ತವಾಗಿ ಸ್ಪಂದಿಸಿ ಅಪರೂಪದ ಈ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದೇವೆ. ಕೆಎಂಸಿಯಲ್ಲಿ ಈಗ ಲಭ್ಯ ಇರುವ “ಫೀಟಲ್ ಇಕೋ ಕಾರ್ಡಿಯಾಲಜಿ’ ಎಂಬ ಅತ್ಯಾಧುನಿಕ ಉಪಕರಣದಿಂದ ಇಂತಹ ಸಮಸ್ಯೆ ಪತ್ತೆ ಹಚ್ಚುವುದು ಸಾಧ್ಯವಾಯಿತು ಎಂದು ಡಾ| ಅರವಿಂದ್ ಬಿಷ್ಣೋಯ್ ತಿಳಿಸಿದರು.
ಡಾ| ಲೆಸ್ಲಿ ಲೂಯಿಸ್ ಮಾತನಾಡಿ, ಪ್ರಸ್ತುತ ಮಣಿಪಾಲ ದಲ್ಲಿಯೇ ಫೀಟಲ್ ಇಕೋ ಕಾರ್ಡಿಯಾಲಜಿ ತಂತ್ರಜ್ಞಾನ ಮತ್ತು ವಿಶೇಷ ತಜ್ಞ ವೈದ್ಯರು ಲಭ್ಯರಿದ್ದಾರೆ. ಈ ಚಿಕಿತ್ಸೆಗೆ 3-5 ಲ. ರೂ. ವೆಚ್ಚವಾಗುತ್ತದೆ ಎಂದು ಹೇಳಿದರು.ಡಾ| ಟಾಮ್ ದೇವಾಸಿಯಾ ಉಪಸ್ಥಿತರಿದ್ದರು.
2-3 ವಾರ ಮಾತ್ರ ಬದುಕುತ್ತಿತ್ತು
ಮಣಿಪಾಲದ ಕೆಎಂಸಿ ಈಗ ವಯಸ್ಕರು ಮತ್ತು ಮಕ್ಕಳ ಹೃದ್ರೋಗ ಚಿಕಿತ್ಸೆಗೆ ಸುಸಜ್ಜಿತ ತಂತ್ರಜ್ಞಾನ, ತಜ್ಞ ವೈದ್ಯರ ತಂಡವನ್ನು ಹೊಂದಿದೆ. ಇದರ ಪರಿಣಾಮವಾಗಿ ಇಂತಹ ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಾಗಿದೆ. ಈ ಶಸ್ತ್ರಚಿಕಿತ್ಸೆ ಸಕಾಲದಲ್ಲಿ ನಡೆಯದೇ ಹೋಗಿದ್ದರೆ ಮಗು ಕೇವಲ 2ರಿಂದ 3 ವಾರಗಳ ಕಾಲ ಮಾತ್ರ ಬದುಕುತ್ತಿತ್ತು.
ಡಾ| ಲೆಸ್ಲಿ ಲೂಯಿಸ್, ಶಿಶುರೋಗ ತಜ್ಞರು
ಜೀವ ಉಳಿಯಿತು; ಆರ್‌ಪಿಎಸ್‌ಕೆ ನೆರವಾಯಿತು
ಕೆಎಂಸಿಯ ವೈದ್ಯರು ಮಗನ ಜೀವ ಉಳಿಸಿದರು. ಇಲ್ಲಿನ ವೈದ್ಯರು, ದಾದಿಯರು ನಮ್ಮ ಮಗುವಿನ ಜೀವ ಉಳಿಸಲು ಕಷ್ಟಪಟ್ಟಿದ್ದಾರೆ. ಸರಕಾರಿ ಆಸ್ಪತ್ರೆಯಿಂದ ನಮ್ಮನ್ನು ಕೂಡಲೇ ಕೆಎಂಸಿಗೆ ಕಳುಹಿಸಿದ ವೈದ್ಯರಿಗೂ ಕೃತಜ್ಞತೆಗಳು. ಶಸ್ತ್ರಚಿಕಿತ್ಸೆಗೆ ಖರ್ಚಾಗುವ 4-5 ಲ. ರೂ. ಭರಿಸಲು ಅಸಾಧ್ಯವಾಗಿತ್ತು. ಆದರೆ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ (ಆರ್‌ಬಿಎಸ್‌ಕೆ) ಯಿಂದಾಗಿ ನಮಗೆ ಶಸ್ತ್ರಚಿಕಿತ್ಸೆಯ ವೆಚ್ಚದ ಹೊರೆ ಬೀಳಲಿಲ್ಲ.
ಹರೀಶ್, ಶಸ್ತ್ರಚಿಕಿತ್ಸೆಗೊಳಗಾದ ಹಸುಳೆಯ ತಂದೆ