ಕಳೆದ ಕೆಲ ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ಆ್ಯಕ್ಷನ್, ಪ್ಯಾನ್ ಇಂಡಿಯಾ, ಫ್ಯಾಮಿಲಿ ಡ್ರಾಮ, ಸಾಮಾಜಿಕ ಕಳಕಳಿ, ಇಂತಹ ಸಿನಿಮಾಗಳೇ ಹೆಚ್ಚಾಗಿದ್ದವು. ಹೀಗಾಗಿ ಹಾರರ್-ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾಗಳು ಅಪರೂಪ ಎಂಬಂತಾಗಿದ್ದವು. ಈ ಅಪರೂಪಕ್ಕೆ ಎಂಬಂತೆ ಔಟ್ ಆ್ಯಂಡ್ ಔಟ್ ಹಾರರ್-ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರದ “ಕಸ್ತೂರಿ ಮಹಲ್’ ಸಿನಿಮಾ ತೆರೆಗೆ ಬಂದಿದೆ.
ಪುರಾತತ್ವ ಶಾಸ್ತ್ರ ಇಲಾಖೆಯಲ್ಲಿ ಕೆಲಸ ಮಾಡುವ ಮೇಘಾಳಿಗೆ, ತಾನು ಸ್ಥಳ ಪರೀಶಿಲನೆಗೆ ಹೋದ ಕಡೆಯಲ್ಲಾ ಒಂದೊಂದು ವಸ್ತುವನ್ನು ಕದ್ದು ತರುವ ಅಭ್ಯಾಸ. ಹೀಗೆ ಅಭ್ಯಾಸ ಬಲದಿಂದ ಒಂದು ಅರಮನೆಯಿಂದ ಮೇಘಾ ಡೈರಿಯೊಂದನ್ನು ತರುತ್ತಾಳೆ. ಕಥೆ ಪ್ರಾರಂಭವಾಗುವುದೇ ಆ ಡೈರಿ ಮನೆಗೆ ಬಂದ ಮೇಲೆ. ಹಾಗಾದರೆ ಆ ಡೈರಿ ಬಂದ ಮೇಲೆ ಎನೆಲ್ಲಾ ಆಗುತ್ತದೆ. ಆ ಡೈರಿ ಅಲ್ಲಿ ಅಂತದ್ದೇನಿದೆ ಅನ್ನುವ ಅಂಶ ತಿಳಿಯಲು ಸಿನಿಮಾವನ್ನು ನೋಡಬೇಕು.
“ಕಸ್ತೂರಿ ಮಹಲ್’ ಹಾರರ್-ಸಸ್ಪೆನ್ಸ್ ಸಿನಿಮಾವಾಗಿದ್ದು, ಸಾಮಾನ್ಯ ಹಾರರ್ ಸಿನಿಮಾಗಳಂತೆ ಇಲ್ಲು ಒಂದಷ್ಟು ದಶಕಗಳ ಇತಿಹಾಸ, ದೌರ್ಜನ್ಯ, ಹೂತಿಟ್ಟ ಸೇಡು, ಮರೆಯಾದ ಪ್ರೀತಿ, ಎಲ್ಲವು ಇದೆ. ಇತರ ಹಾರರ್ ಸಬ್ಜೆಕ್ಟ್ ಗಿಂತ ಹೊಸದಾಗಿದೆ ಎಂದು ಅನಿಸದಿದ್ದರೂ, ಮುಂದೆ ಏನಾಗಬಹುದು ಅನ್ನೋ ಕುತೂಹಲವಂತೂ ಸಿನಿಮಾದ ಉದ್ದಕ್ಕೂ ಇದೆ. ಸಿನಿಮಾದ ಓಪನಿಂಗ್ ಶಾಟ್‌ನಿಂದಲೇ ಪ್ರಾರಂಭವಾದ ಹಾರರ್ ಪಯಣ ಸಿನಿಮಾದ ಕೊನೆಯವರೆಗೂ ನೋಡುಗರಿಗೆ ಕಾಣಸಿಗುತ್ತದೆ.
ಹಿರಿಯ ನಿರ್ದೇಶಕ ದಿನೇಶ್ ಬಾಬು ಅವರ “ಕಸ್ತೂರಿ ಮಹಲ್’ ಪ್ರಯತ್ನ ಮೆಚ್ಚುವಂತದ್ದು. ಸಿನಿಮಾದಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಲಿಂಕ್ ಇಟ್ಟುಕೊಂಡಿದ್ದು, ಕಥೆಯ ಬಂಡಿಯನ್ನು ಕ್ಲೈಮ್ಯಾಕ್ಸ್ ದಡಕ್ಕೆ ಸೇರಿಸುವಲ್ಲಿ ಸಿನಿಮಾ ಯಶಸ್ವಿಯಾಗಿದೆ.
ಇನ್ನು ಇಡೀ ಸಿನಿಮಾದ ಕೇಂದ್ರ ಬಿಂದು ನಾಯಕಿ ಶಾನ್ವಿ ಶ್ರೀವಾಸ್ತವ್. ತೆರೆ ಮೇಲೆ ಎರಡು ಶೇಡ್‌ನಲ್ಲಿ ಶಾನ್ವಿ ಕಾಣಿಸಿಕೊಂಡಿದ್ದು, ತದ್ವಿರುದ್ಧದ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಇನ್ನು ರಂಗಾಯಣ ರಘು ನಟನೆ ಚಿತ್ರಕ್ಕೆ ಬೂಸ್ಟ್ ನೀಡುವಂತಿದೆ. ಅಲ್ಲಲ್ಲಿ ಬರುವ ರಂಗಾಯಣ ರಘು ಪಂಚಿಂಗ್ ಕಾಮಿಡಿ ಪ್ರೇಕ್ಷಕರ ಮೊಗದಲ್ಲಿ ಒಂದು ಕ್ಷಣ ನಗು ತರಿಸುತ್ತದೆ. ಉಳಿದಂತೆ ಸ್ಕಂದ, ಶ್ರುತಿ ಪ್ರಕಾಶ್, ಕೆಂಪೇಗೌಡ ಹಾಗೂ ಇತರ ಪಾತ್ರಗಳು ಕಥೆಗೆ ಪೂರಕವಾಗಿದೆ. ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಪಿಕೆಎಚ್ ದಾಸ್ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ.
ವಾಣಿ ಭಟ್ಟ