ಶ್ರೀನಗರ: ಕಳೆದ ಮೂರು ದಿನಗಳಿಂದ ಭಾರತದ ಸ್ವರ್ಗ ಕಾಶ್ಮೀರ ಸಂಪೂರ್ಣ ಹೆಪ್ಪುಗಟ್ಟಿದ್ದು, ಕೆಲವೆಡೆ ತಾಪಮಾನ -13.7 ಡಿಗ್ರಿ ಸೆಲ್ಸಿಯಸ್‌ಗೆ ಜಾರಿದೆ. ಪ್ರಪಂಚದ ಅತೀ ಶೀತ ಪ್ರದೇಶ ಅಂಟಾರ್ಟಿಕಾಕ್ಕಿಂತ ಕಾಶ್ಮೀರದಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ.
ಅಂಟಾರ್ಟಿಕಾದಲ್ಲಿ ಈಗಿನ ತಾಪಮಾನ -2.2 ಡಿ. ಸೆ. ಆದರೆ, ಕಾಶ್ಮೀರ ಲೇಹ್ ವಲಯದಲ್ಲಿ -13.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಹೀಗಾಗಿ ಅಂಟಾರ್ಟಿಕಾ ಕ್ಕಿಂತ ಕಾಶ್ಮೀರ ತಂಪು ಪ್ರದೇಶ ಎನಿಸಿಕೊಂಡಿದೆ ಎಂದು www.skymetweather.com ಖಾಸಗಿ ಹವಾಮಾನ ಸಂಸ್ಥೆಯ ವೆಬ್‌ಸೈಟ್ ಹೇಳಿದೆ.
ಕಾಶ್ಮೀರದ ಜನಪ್ರಿಯ ಪ್ರವಾಸಿತಾಣ ಗುಲ್ಮಾರ್ಗ್ ಸಂಪೂರ್ಣವಾಗಿ ಮಂಜು, ಹಿಮಪಾತದಿಂದ ಮುಚ್ಚಿ ಹೋಗಿದ್ದು, ಇಲ್ಲಿನ ಸ್ಕೆ „ ರೆಸಾರ್ಟ್‌ನಲ್ಲಿ -10.6 ಡಿ. ಸೆ. ಉಷ್ಣಾಂಶವಿದೆ. ಪಹಲ್ಗಾಂವ್, ಕುಪ್ವಾರದಲ್ಲಿ ಹಿಮಪಾತ ಮುಂದು ವರಿದಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕಾರ್ಗಿಲ್‌ನಲ್ಲಿ -10 ಡಿ.ಸೆ. ದಾಖಲಾಗಿದೆ. ಕಣಿವೆಯ ಹಲವೆಡೆ ಇದೇ ಸ್ಥಿತಿಯಿದ್ದು, ಸಂಚಾರ ತೀರಾ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಶ್ರೀನಗರದ ದಾಲ್ ಸರೋವರ ಹೆಪ್ಪುಗಟ್ಟಿದೆ.
ಜನಜೀವನ ಸುಧಾರಿಸಲು ಸರಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಕಣಿವೆಯ ಹಲವೆಡೆಯ ರಸ್ತೆಗಳಲ್ಲಿ ಮಂಜುಗಡ್ಡೆಯನ್ನು ತೆರವುಗೊಳಿಸಲಾಗಿದೆ. ಆದರೂ ಕೆಲವೆಡೆಯ ನಿಧಾನಗತಿಯ ಕಾರ್ಯಾಚರಣೆಯ ಬಗ್ಗೆ ಆಕ್ರೋಶಗಳು ಕೇಳಿಬಂದಿವೆ. ಕೆಲವು ಹಳ್ಳಿಗಳಂತೂ ಮಂಜಿನಿಂದ ಪೂರ್ತಿ ಮುಸುಕಿದ್ದು, ಮೇಲಿನಿಂದ ನೋಡಿದಾಗ ಮೋಡ ಕವಚಿದಂತಿದೆ. ಶ್ರೀನಗರದ ಹೊರವಲಯದ ಹಳ್ಳಿಯ ಮುಸ್ಲಿಮ್ ಕುಟುಂಬಗಳು ರಸ್ತೆಯ ಉದ್ದಕ್ಕೂ ಕುಡಿಯುವ ನೀರು ಇಟ್ಟುಕೊಂಡು ಮಾರುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇನ್ನು ಹಿಮಾಚಲ ಪ್ರದೇಶ, ಉತ್ತರಾಖಂಡದ ಹಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿಮಪಾತ ಮುಂದುವರಿದಿದ್ದು, ತಾಪಮಾನ ಶೂನ್ಯಕ್ಕಿಂತವೂ ಕಡಿಮೆ ದಾಖಲಾಗಿದೆ. ರಾಜಸ್ಥಾನ, ದಿಲ್ಲಿ, ಉತ್ತರಪ್ರದೇಶ, ಬಿಹಾರದಲ್ಲೂ ನಡುಗುವ ಚಳಿ ಇದೆ. ಇದರಿಂದ ರಸ್ತೆ, ರೈಲು ಸಂಚಾರ ವ್ಯತ್ಯಯವಾಗಿದೆ. ಪಾಶ್ಚಾತ್ಯ ಹವಾಮಾನ ವೈಪರಿತ್ಯ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಮಾಸ್ಕೋ ಹಿಂದಿಕ್ಕಿದ ಮನಾಲಿ!
ಹಿಮಾಚಲ ಪ್ರದೇಶದ ಮನಾಲಿಯಲ್ಲೂ ಹಿಮಪಾತ ಮುಂದುವರಿದಿದ್ದು ಇಲ್ಲಿ ತಾಪಮಾನ -6 ಡಿ.ಸೆ. ದಾಖಲಾಗಿದೆ. ಇದು ರಷ್ಯಾದ ರಾಜಧಾನಿ ಮಾಸ್ಕೋ ಗಿಂತ ಕನಿಷ್ಠ ಎಂದು ಸ್ಕೈವೆದರ್.ಕಾಂ ಹೇಳಿದೆ. ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಒಂದೆರಡು ದಿನದಲ್ಲಿ ಹಿಮಪಾತ ಕಡಿಮೆ ಆಗುವ ಬಗ್ಗೆ ಹವಾಮಾನ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.