Advertisement
ಈರುಳ್ಳಿಯ ದರ ಕುಸಿದು ಕೃಷಿಕ ಕಂಗಾಲಾದ ದಿನಗಳವು. ಬೇಸಿಗೆಯ ಆರಂಭಕ್ಕೆ ಭರ್ಜರಿ ಬಿಸಿಲು ಶುರುವಾಗಿತ್ತು. ಮಳೆ ಕೈಕೊಟ್ಟು ಮುಂಗಾರಿಯಲ್ಲೇ ಬಯಲುಸೀಮೆಯ ಬಯಲು ಬೆಳೆಯಿಲ್ಲದೇ ಖಾಲಿ ಖಾಲಿ. ಬರದ ಸೀಮೆಯ ಹುಣಸೆ, ಕರಿಜಾಲಿ ಮರಗಳು ಯಾವತ್ತೂ ನಗುತ್ತಿದ್ದವು. ಆದರೆ ಈ ವರ್ಷ ಬರದ ಹೊಡೆತಕ್ಕೆ ಮರಗಳೂ ಸೋತಿವೆ. ಸವಣೂರು ದಾಟಿ ಇನ್ನೇನು ಗದಗ ಸಮೀಪಿಸುವಾಗ ಬಯಲಿನ ನಡುವೆ ಬೆರಗು ಹುಟ್ಟಿಸಿದಂತೆ ಅಲ್ಲಲ್ಲಿ ಈರುಳ್ಳಿ ಬೀಜೋತ್ಪಾದನೆಯ ಉಮೇದಿ. ಹೂವರಳಿ ಬೀಜ ಕಟ್ಟುವ ಕಾಲ. ಬಯಲಿನಲ್ಲಿ ಬೆಳೆ ಹಸಿರಿದೆಯೆಂದರೆ ಅಲ್ಲಿ ಆಳದ ಕೊಳವೆ ಬಾವಿಯ ನೀರಿದೆಯೆಂದು ಊಹಿಸಬಹುದು. ಹೊಲಕ್ಕಿಳಿದು ನೋಡಿದರೆ ಹುಳಕ್ ಎರಿಯ ಮಣ್ಣಿನಲ್ಲಿ ಹೊರ್ತಿಯ ಕೃಷಿಕ ಮಲ್ಲಪ್ಪ ಗುರುಸಿದ್ದಪ್ಪ ಹೊನ್ನಪ್ಪನವರ್(58) ಬದುಕು ಗೆಲ್ಲುವ ಸಾಹಸದಲ್ಲಿ ನಿರತರಾಗಿದ್ದರು.
Related Articles
Advertisement
ಕೃಷಿಯಲ್ಲಿ ಲಾಭ ಹುಡುಕಲು ಹೊಸ ಹೊಸ ಬೆಳೆ ಹುಡುಕುವುದು ಕೃಷಿ ನಂಬಿದವರ ಸಹಜ ಪ್ರಯತ್ನ. ಪಾರಂಪರಿಕವಾಗಿರುವ ಈರುಳ್ಳಿ, ಮೆಣಸು ಬೆಳೆಯುವುದು. ಬೀಜೋತ್ಪಾದನೆಯ ಆಸೆಗೆ ಕೊಳವೆ ಬಾವಿ ಕೊರೆಸುತ್ತ ನೀರು ಹುಡುಕುವುದು. ಅಕ್ಕಪಕ್ಕದ ಹೊಲಗಳನ್ನು ಕಡ್ತಕ್ಕೆ ಹಾಕಿಕೊಂಡು ಕೃಷಿ ವಿಸ್ತರಿಸುವ ಸಾಹಸ ನಡೆಸುತ್ತ ರೈತರು ಸಾಗಿದ್ದಾರೆ. ಗದಗದ ಹೊರ್ತಿಯ ಗುರುಸಿದ್ದಪ್ಪ ಬದುಕು ನಮ್ಮ ರೈತ ಸಮುದಾಯದ ಬದುಕಿನ ಶೈಲಿಯ ಒಂದು ಉದಾಹರಣೆ ಮಾತ್ರ. ಇರುಳ್ಳಿಯ ಬೆಲೆ ಕುಸಿದಾಗ ಇರುಳ್ಳಿ ಕೀಳದ ನಿರ್ಧಾರಗಳನ್ನು ನೂರಾರು ರೈತರು ಕೈಗೊಂಡಿದ್ದಾರೆ. ಕೊಯ್ಲಿಗೆ ನಷ್ಟ ಮಾಡಿಕೊಂಡು ಮಾರುಕಟ್ಟೆಗೆ ಸಾಗಿಸುವುದಾದರೂ ಏಕೆ? ಪ್ರಶ್ನೆ ರೈತರನ್ನು ಕಾಡುತ್ತದೆ. ಆದರೆ ದೂರದ ಸಂತೆಯಲ್ಲಿ ಖರೀದಿಗೆ ಹೊರಟ ನಾವು ಹತ್ತು ರೂಪಾಯಿ ಕಿಲೋ ಇರುಳ್ಳಿಯಿದ್ದರೆ ಐದು ರೂಪಾಯಿಗೆ ಸಿಗುತ್ತದೆಯೇ? ಚೌಕಾಶಿ ಮಾಡುತ್ತೇವೆ. ನಮಗೆ ಯಾರಿಗೂ ದೂರದ ಹೊರ್ತಿಯ ಗುರುಸಿದ್ದಪ್ಪರ ಕಷ್ಟ ಕಾಣಿಸುವುದಿಲ್ಲ. ಅಗ್ಗಕ್ಕೆ ಸಿಕ್ಕರೆ ಎಲ್ಲರಿಗೂ ಬೇಕು. ಆದರೆ ಕೃಷಿಕ ಬದುಕುವುದು ಹೇಗೆಂದು ಯೋಚಿಸುವುದಿಲ್ಲ. ನಮಗೆ ಅನ್ನ ನೀಡುವವರ ಬಗ್ಗೆ ಯೋಚಿಸಿದಷ್ಟು ಒತ್ತಡದಲ್ಲಿ ಮುಳುಗಿದ್ದೇವೆ.
ಈಗ 41 ಡಿಗ್ರಿ ಉರಿ ಬಯಲು ನಾಡಿಗೆಲ್ಲ ವ್ಯಾಪಿಸಿದೆ. ಒಂದು ತಾಸು ವಿದ್ಯುತ್ ಕೈಕೊಟ್ಟರೆ ಸಾವು ಬಂದಂತೆ ಚಡಪಡಿಸುವವರು, ಉರಿಬಿಸಿಲ ತಗಡಿನ ಮನೆಯಲ್ಲಿ ರೈತರು ಹೇಗಿದ್ದಾರೆಂದು ನೋಡಬೇಕು. ಬೀದರ್‌ನ ತುದಿಗೋ, ಕೋಲಾರದ ಮೂಲೆಗೂ ಪಯಣಿಸಿ ಬರಬೇಕು. ಬರದ ತಾಂಡವಾಡುವ ಭಯಾನಕ ಬಯಲಿನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಕೃಷಿಕರು ಬೆಳೆಗೆ ನೀರುಣಿಸುತ್ತ ತಾವು ಬದುಕಿ ನಮಗೆ ಅನ್ನ ನೀಡುವ ಪ್ರಯತ್ನ ನಡೆಸಿದ್ದು ಕಾಣಿಸುತ್ತದೆ. ವಿಶೇಷವೆಂದರೆ ಕೃಷಿಯಲ್ಲಿ ಗೆದ್ದು ಹಣ ಕಾಣುವವರು ನೂರರಲ್ಲಿ ಐದು ರೈತರೂ ಇಲ್ಲ. ಗಳಿಸಿದ ಹಣವನ್ನು ನೀರು ಹುಡುಕಲು ಕೊಳವೆ ಬಾವಿಗೆ ಚೆಲ್ಲುವವರು ಈಗ ಎಲ್ಲೆಡೆ ಸಿಗುತ್ತಾರೆ. ಮುಂದೆ ಮಳೆ ಸರಿದು ಬೆಳೆ ಚೆನ್ನಾಗಿ ಆಗುತ್ತದೆಂಬ ಕನಸು ಕಾಣುತ್ತ ಉಳುಮೆ ನಡೆಸುವವರು ಹೊಲದಲ್ಲಿ ಧೈರ್ಯದಲ್ಲಿ ನಿಂತಿದ್ದಾರೆ. ಇವರ ಹುಂಬು ಧೈರ್ಯ ನಮಗೆ ಅನ್ನ ನೀಡುತ್ತಿದೆ. ಎಕರೆಗೆ 50 ಚೀಲ ಭತ್ತ ಬೆಳೆಯುವ ಗಂಗಾವತಿ, ಸಿಂಧನೂರಿನವರು ನೀರಿಲ್ಲದೇ 15 ಚೀಲ ಬೆಳೆದರೂ ಅದು ನಮ್ಮ ತಟ್ಟೆಯ ಅನ್ನವಾಗುತ್ತದೆ. ನಷ್ಟ ವರ್ಷದಿಂದ ವರ್ಷಕ್ಕೆ ಹೀಗೆ ಮುಂದುವರಿಯುತ್ತ ಹೋದರೆ ಕಟ್ಟಕಡೆಗೆ ಕೃಷಿಕ ಎಲ್ಲಿರಬೇಕು? ಪರೀಕ್ಷೆ ಶುರುವಾಗಿದೆ. ನಾವು ಸತ್ಯ ದರ್ಶನಕ್ಕೆ ಹೋಗದೇ ಸೋತವರ ತುತ್ತು ಕಸಿಯುತ್ತ ಕುಳಿತರೆ ನಾಳೆ ಏನಾಗಬಹುದು? ಯೋಚಿಸಬೇಕು. ನಿಮ್ಮ ಕಿಸೆಯ ಕಾಸು ತೆಗೆದು ರೈತರ ಹೊಲಗಳಿಗೆ ಕೃಷಿ ಹೊಂಡ, ಕೆರೆ ರಚನೆಗೆ ನೆರವಾಗಬೇಕು. ಒಮ್ಮೆ ಮಳೆ ಸುರಿದು ಅವುಗಳಲ್ಲಿ ನೀರು ತುಂಬಿದರೆ ಎಲ್ಲರಿಗೂ ನೆಮ್ಮದಿ ದೊರೆಯಬಹುದು.
ಶಿವಾನಂದ ಕಳವೆ