ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶೇ. 40ರಷ್ಟು ಉದ್ಯಮಗಳು ಚಟುವಟಿಕೆ ಸ್ಥಗಿತಗೊಳಿಸಿ ಮುಚ್ಚುವ ಸ್ಥಿತಿಗೆ
ತಲುಪಿವೆ. ಕೂಡಲೇ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ಅಧ್ಯಕ್ಷ ಆರ್.ರಾಜು ಆಗ್ರಹಿಸಿದ್ದಾರೆ.
ಲಾಕ್‌ಡೌನ್ ನಿಂದ ಕೈಗಾರಿಕೆಗಳು ಮುಚ್ಚಿರುವುದರಿಂದ ಲಕ್ಷಾಂತರ ಮಂದಿ ನೌಕರರು ಬೀದಿಪಾಲಾಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕೈಗಾರಿಕೆಗಳ ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ಸಿ ಬಿಲ್ ಪಾವತಿ ಕಾಲಾವಕಾಶ ವಿಸ್ತರಿಸಬೇಕು. ಅವಧಿ ಸಾಲ, ಓವರ್ ಡ್ರಾಫ್ಟ್, ಒಸಿಸಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆ/ ಡಾಕ್ಯುಮೆಂಟೇಷನ್ ಶುಲ್ಕ ಮನ್ನಾ ಮಾಡಬೇಕು. ಪ್ಯಾಕಿಂಗ್ ಕ್ರೆಡಿಟ್ ಅವಧಿಯನ್ನು 30 ದಿನಗಳಿಂದ 180 ದಿನಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಜ.1ರಿಂದ ಪೂರ್ವಾನ್ವಯವಾಗುವಂತೆ ಎಲ್.ಸಿ/ ಬಿ.ಜಿ. ಮೇಲಿನ ಕಮಿಷನ್ ಇಳಿಕೆ ಮಾಡಬೇಕು. ದುಡಿಮೆ ಬಂಡವಾಳ ಸೇರಿದಂತೆ ಮುಂದೂಡಲ್ಪಟ್ಟ ಅವಧ ಸಾಲ ಪಾವತಿ, ಇಎಂಐ, ಬಡ್ಡಿ ಸಂಬಂಧ ಘೋಷಿಸಲಾದ ವಿನಾಯ್ತಿಯನ್ನು ಯಥಾಸ್ಥಿತಿಗೆ ಮರಳುವ ದಿನದಿಂದ ನಿಗದಿತ ಅವಧಿಗೆ ವಿಸ್ತರಿಸಬೇಕು ಎಂದು ಕೋರಿದ್ದಾರೆ. ಸರಕುಗಳ ಆಮದಿನ ಮೇಲಿನ ಹೆಚ್ಚುವರಿ ದಂಡ ಮನ್ನಾ ಮಾಡಬೇಕು. ಎಸ್‌ಎಂಇ ವಲಯದ ಉದ್ಯಮಿಗಳಿಗೆ ಅವಧಿ ಸಾಲ/ ಓಡಿ/ ಸಿಸಿ ಮೇಲಿನ ಬಡ್ಡಿಯನ್ನು 3 ತಿಂಗಳ ಕಾಲ ಮನ್ನಾ ಮಾಡಬೇಕು ಎಸ್‌ಎಂಇಗಳ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಬ್ಯಾಂಕ್‌ಗಳು ಸಹಾಯ ಕೇಂದ್ರ ತೆರೆಯಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ. 2020ರ ಮಾರ್ಚ್‌ನಿಂದ ಒಂದು ವರ್ಷ ಕಾಲ ವಿದ್ಯುತ್ ನಿಗದಿತ ಮಾಸಿಕ ಶುಲ್ಕ ಮನ್ನಾ ಮಾಡಿ ವಿದ್ಯುತ್ ಬಳಕೆ ಆಧಾರದ ಮೇಲೆ ಬಿಲ್ ಮೊತ್ತಸಂಗ್ರಹಿಸಬೇಕು. ಎಲ್.ಟಿ- 5 ಹಾಗೂ ಎಚ್.ಟಿ- ಎ ವರ್ಗದಡಿ ವಿದ್ಯುತ್ ಶುಲ್ಕ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.
ಎಸ್‌ಎಂಇ ವಲಯದ ಉದ್ಯಮಗಳಿಗೆ ವಿದ್ಯುತ್ ತೆರಿಗೆ/ ವಿಳಂಬ ಪಾವತಿ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ದಂಡ ಮತ್ತು ಬಡ್ಡಿ ವಿಧಿಸದೆ ಜಿಎಸ್‌ಟಿ- 9 ಎಬಿಸಿ ಸಲ್ಲಿಕೆ ದಿನಾಂಕ ವಿಸ್ತರಿಸಬೇಕು. ಇ-ಸರಕುಪಟ್ಟಿ ದಿನಾಂಕ ವಿಸ್ತರಿಸಬೇಕು. ಎಸ್ ಎಂಇಗಳಿಗೆ ಮಾರ್ಚ್, ಏಪ್ರಿಲ್, ಮೇ ತಿಂಗಳಿಗೆ ಜಿಎಸ್‌ಟಿ ಪಾವತಿಯನ್ನು ದಂಡ ಮತ್ತು ಬಡ್ಡಿ ವಿಧಿಸದೆ 3 ತಿಂಗಳು ಮುಂದೂಡಬೇಕು ಎಂದು ಕೋರಿದ್ದಾರೆ.
ಕಾರ್ಮಿಕರಿಗೆ ಸಂಬಂಧಪಟ್ಟಂತೆ 6 ತಿಂಗಳು ಇಎಸ್‌ಐ, ಪಿಎಫ್ ವಂತಿಗೆ ಪಾವತಿ ಮನ್ನಾ ಮಾಡಬೇಕು. ವೇತನ ಪಾವತಿಗಾಗಿ ಲಾಕ್‌ಡೌನ್ ಸಮಯದಲ್ಲಿ ಕೆಲಸ ದಿನದ ಸಂಖ್ಯೆಯನ್ನು 25 ದಿನ ಎಂದು ಪರಿಗಣಿಸಬೇಕು. ಶೇ. 70ರಷ್ಟು ವೇತನವನ್ನು ಇಎಸ್‌ಐಸಿ ಅಥವಾ ಕಲ್ಯಾಣ ನಿಧಿ ಮೂಲಕ ಪಾವತಿಸಲು ಶಿಫಾರಸು ಮಾಡಬೇಕು. ಲಾಕ್‌ಡೌನ್ ನಷ್ಟ ಸರಿದೂಗಿಸಲು ಕೆಲಸದ
ಸಮಯವನ್ನು 10 ಗಂಟೆಗೆ ಹೆಚ್ಚಿಸಬೇಕು ಎಂದು ಆರ್.ರಾಜು ಮನವಿ ಮಾಡಿದ್ದಾರೆ.