ಬೆಂಗಳೂರು : ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿರುವುದರಿಂದಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲೆ ಪ್ರಭಾವ ಬೀರಿದೆ.
ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಇಂಧನದ ಮೇಲಿನ ಸುಂಕವನ್ನು ಕಡಿಮೆಗೊಳಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮನವಿ ಮಾಡಿಕೊಂಡಿದೆ.
ಅನೇಕ ಮಾರಾಟಗಾರರು, ಸಣ್ಣ ಉದ್ಯಮದಾರರು ತಮ್ಮ ಖರೀದಿದಾರರೊಂದಿಗೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲಾವಧಿಗೆ ಒಡಂಬಡಿಕೆ ಮಾಡಿಕೊಂಡು ಸಹಿ ಹಾಕಿರುತ್ತಾರೆ. ಒಂದೆಡೆ ಕೋವಿಡ್-19 ಕಾರಣದಿಂದಾಗಿ ವ್ಯಾಪಾರ ಕಡಿಮೆಯಾದರೆ, ಮತ್ತೊಂದೆಡೆ ಪ್ರತಿನಿತ್ಯ ದಿನಬಳಕೆ ವಸ್ತುಗಳು, ಇಂಧನ ಬೆಲೆ ಹೆಚ್ಚಾಗುತ್ತಿದೆ. ಇದರಿಂದ ಜೀವನ ನಡೆಸುವುದು ಸಂಕಷ್ಟದ ಸಂಗತಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ:ಕರಿಬೇವು ಬೆಳೆದು ಕೈತುಂಬ ಆದಾಯ
ಇನ್ನೂ ಹಲವು ಕಾರ್ಮಿಕರು ಪ್ರಯಾಣಕ್ಕಾಗಿ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಇಂಧನದ ಬೆಲೆ ಏರಿಕೆಯಿಂದಾಗಿ ಕಾರ್ಮಿಕ ವೇತನವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳೂ ಸಹ ಬಂದಿವೆ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಕಾರ್ಮಿಕರು ಸಾರಿಗೆ ಸಂಸ್ಥೆಗಳು ಕೂಡಾ ಟಿಕೆಟ್ ಸರ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕಾಸಿಯಾ ತಿಳಿಸಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು, ಕೂಡಲೇ ಈಗಿರುವ ಶೇ. 35 ಮಾರಾಟ ತೆರಿಗೆ ಮತ್ತು ಪ್ರತಿ ಲೀಟರ್‌ಗೆ ವಿಧಿಸುತ್ತಿರುವ ರೂ. 32.90 ಅಬಕಾರಿ ಸುಂಕವನ್ನು ಕಡಿಮೆ ಮಾಡುವಂತೆ ಕಾಸಿಯಾ ಆಡಳಿತಾಧಿಕಾರಿ ಪಿ. ಶಶಿಧರ್ ಒತ್ತಾಯಿಸಿದ್ದಾರೆ.