ಅನಾಹೇಮ್ (ಅಮೆರಿಕ): ಭಾರತದ ಯಶಸ್ವಿ ಶಟ್ಲರ್‌ಗಳಾದ ಪಾರುಪಳ್ಳಿ ಕಶ್ಯಪ್ ಮತ್ತು ಎಚ್‌ಎಸ್ ಪ್ರಣಯ್ ಅವರು ಯುಎಸ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಕೂಟದ ಸೆಮಿಫೈನಲಿಗೇರಿದ್ದಾರೆ.
ಕಶ್ಯಪ್ ತನ್ನ ದೇಶದವರೇ ಆದ ಸಮೀರ್ ವರ್ಮ ಅವರನ್ನು 40 ನಿಮಿಷಗಳ ಹೋರಾಟದಲ್ಲಿ 21-13, 21-16 ಗೇಮ್‌ಗಳಿಂದ ಸೋಲಿಸಿ ಅಂತಿಮ ನಾಲ್ಕರ ಸುತ್ತಿಗೇರಿದರು. ಅಲ್ಲಿ ಅವರು ಕೊರಿಯದ ಕ್ವಾಂಗ್ ಹೀ ಹಿಯೊ ಅವರನ್ನು ಎದುರಿಸಲಿದ್ದಾರೆ. ಕಶ್ಯಪ್ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕೂಟವೊಂದರ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಅವರು ಕೊರಿಯ ಓಪನ್‌ನ ಸೆಮಿಫೈನಲ್ ತಲುಪಿದ್ದರು.
ದ್ವಿತೀಯ ಶ್ರೇಯಾಂಕದ ಪ್ರಣಯ್ ಜಪಾನಿನ ಕಾಂತ ಸುನೆಯಾಮ ಅವರನ್ನು ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿ ಸೆಮಿಫೈನಲ್ ತಲುಪಿದರು. ಅವರು ಈ ಋತುವಿನಲ್ಲಿ ಎರಡನೇ ಬಾರಿ ಸೆಮಿಫೈನಲ್ ತಲುಪಿದ್ದರು. ಕಳೆದ ತಿಂಗಳು ಅವರು ಇಂಡೋನೇಶ್ಯ ಸೂಪರ್ ಸೀರೀಸ್‌ನ ಸೆಮಿಫೈನಲ್ ತಲುಪಿದ್ದರು.
ಒಂದು ತಾಸಿನ ಹೋರಾಟದಲ್ಲಿ 10-21, 21-15, 21-18 ಗೇಮ್‌ಗಳಿಂದ ಜಯಭೇರಿ ಬಾರಿಸಿದ ಪ್ರಣಯ್ ಸೆಮಿಫೈನಲ್‌ನಲ್ಲಿ ವಿಯೆಟ್ನಾಂನ ಟಿಯೆನ್ ಮಿನ್ ಗುಯೆನ್ ಅವರನ್ನು ಎದುರಿಸಲಿದ್ದಾರೆ. ಗುಯೆನ್ ಮತ್ತು ಪ್ರಣಯ್ 2012ರ ಬ್ಯಾಡ್ಮಿಂಟನ್ ಏಶ್ಯ ಕೂಟದಲ್ಲಿ ಒಮ್ಮೆ ಮುಖಾಮುಖೀಯಾಗಿದ್ದು ಗುಯೆನ್ ಜಯ ಸಾಧಿಸಿದ್ದರು.
ಮೂರನೇ ಶ್ರೇಯಾಂಕದ ಮನು ಅತ್ರಿ ಮತ್ತು ಸುಮೀತ್ ಅವರು ಜಪಾನಿನ ಹಿರೋಕಿ ಒಕಮುರ ಮತ್ತು ಮಸಾಯುಕಿ ಒನೊಡೆರ ಅವರನ್ನು 21-18, 22-20 ಗೇಮ್‌ಗಳಿಂದ ಸೋಲಿಸಿ ಮುನ್ನಡೆದನರು. ಮುಂದಿನ ಸುತ್ತಿನಲ್ಲಿ ಅವರು ಅಗ್ರ ಶ್ರೇಯಾಂಕದ ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ಅವರನ್ನು ಎದುರಿಸಲಿದ್ದಾರೆ.