ತಿರುವನಂತಪುರಂ : ಕೇರಳದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್, ಸಂಸದ ಶಶಿ ತರೂರ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯುಪಿ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರಿಗೆ ವೀಡಿಯೊ ಸಂದೇಶದಲ್ಲಿ ಆದಿತ್ಯನಾಥ್ ಅವರು ಚುನಾವಣೆಯಲ್ಲಿ ಯಾವುದೇ ತಪ್ಪುಗಳನ್ನು ಮಾಡಿದರೆ ಉತ್ತರ ಭಾರತದ ರಾಜ್ಯವು ಶೀಘ್ರದಲ್ಲೇ “ಕಾಶ್ಮೀರ, ಬಂಗಾಳ ಅಥವಾ ಕೇರಳ” ಆಗಬಹುದು ಎಂದು ಎಚ್ಚರಿಸಿದ್ದರು.
ಈ ಬಗ್ಗೆ ಮೂರೂ ರಾಜ್ಯಗಳ ಹಲವು ವಿಪಕ್ಷಗಳ ನಾಯಕರು ಯೋಗಿ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ತಿರುಗೇಟು ನೀಡಿದ ಸಿಪಿಐ(ಎಂ)ನ ಹಿರಿಯ ನಾಯಕ , ಕೇರಳ ಸಿಎಂ ವಿಜಯನ್, ಉತ್ತರ ಭಾರತದ ರಾಜ್ಯವು ಕೇರಳದಂತೆ ಅಭಿವೃದ್ಧಿಯಾದರೆ, ಜನರು ಶಾಂತಿ ಮತ್ತು ಉತ್ತಮ ಜೀವನ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ.
ಆದಿತ್ಯನಾಥ್ ಭಯಪಡುವಂತೆ ಯುಪಿ ಕೇರಳಕ್ಕೆ ತಿರುಗಿದರೆ, ಅದು ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಜೀವನಮಟ್ಟವನ್ನು ಅನುಭವಿಸುತ್ತದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜವನ್ನು ಹೊಂದಿರುತ್ತದೆ. ಉತ್ತರ ಪ್ರದೇಶದ ಜನರು ಇದನ್ನೇ ಬಯಸುತ್ತಾರೆ ಎಂದು ಕೇರಳ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವು ಅದ್ಭುತಗಳನ್ನು ಮಾಡುವುದರಿಂದ ಯುಪಿಗೆ “ಅದೃಷ್ಟವಿರಬೇಕು” ಎಂದು ಶಶಿ ತರೂರ್ ತಿರುಗೇಟು ನೀಡಿದ್ದಾರೆ.