ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲೆಂದು ಜಮ್ಮು-ಕಾಶ್ಮೀರದ ಯುವಕ ಫಹಿಮ್ ನಜೀರ್ 900 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾನೆ.
ಶ್ರೀನಗರದ ಸಲ್ಮಾರ್ ಪ್ರದೇಶದ ನಿವಾಸಿ ಫಹಿಮ್, ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದಾನೆ. ಕೆಲ ವರ್ಷಗಳ ಹಿಂದೆ ರ್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಮೋದಿ, ಮಸೀದಿಯಿಂದ ಅಜಾನ್ ಶಬ್ಧ ಕೇಳುತ್ತಿದ್ದಂತೆ ಕೆಲವೊತ್ತು ಮಾತು ನಿಲ್ಲಿಸಿ ಮೌನಿಯಾದರು. ಅವರು ಅಂದು ನಮ್ಮ ಧರ್ಮಕ್ಕೆ ಭಕ್ತಿ ಹಾಗೂ ಗೌರವ ನೀಡಿದರು. ಇದು ನನ್ನಲ್ಲಿ ತುಂಬಾ ಪರಿಣಾಮ ಬೀರಿ, ಪ್ರಧಾನಿ ಅವರ ಅಭಿಮಾನಿಯಾಗುವಂತೆ ಮಾಡಿತು ಎಂದಿದ್ದಾನೆ ಫಹಿಮ್.
ಈ ಹಿಂದೆ ಎರಡು ಬಾರಿ ದೆಹಲಿಗೆ ತೆರಳಿದ್ದರೂ ಕೂಡ ಮೋದಿಯವರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗಲೂ ಕೂಡ ಭದ್ರತೆ ಕಾರಣವಾಗಿ ಭೇಟಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಕಾಲ್ನಡಿಗೆ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದೇನೆ. ಈ ಸಾರಿ ಮೋದಿಯವರನ್ನು ಭೇಟಿಯಾಗಬಹುದೆಂದು ನಾನು ಅಂದುಕೊಂಡಿದ್ದೇನೆ ಎಂದು ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿ ಉಧಮಪುರ್ ಬಳಿ ಮಾಧ್ಯಮಕ್ಕೆ ಹೇಳಿದ್ದಾನೆ.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ಧತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಫಹಿಮ್, ಕೇಂದ್ರ ಸರ್ಕಾರದ ಈ ನಿರ್ಧಾರ ಶ್ಲಾಘನೀಯ. ಕೇಂದ್ರಾಡಳಿತ ಪ್ರದೇಶವಾದ ನಂತರ ಜಮ್ಮು-ಕಾಶ್ಮೀರ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಿದೆ. ಈ ಮೊದಲು ಅಭಿವೃದ್ಧಿ ಮಂದಗತಿಯಲ್ಲಿ ಸಾಗಿತ್ತು. ಆದರೆ, 370 ಹಾಗೂ 35ಎ ವಿಧಿಯನ್ನು ಹಿಂಪಡೆದ ಬಳಿಕ ಸಾಕಷ್ಟು ಬದಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮೋದಿ ಆಡಳಿತಕ್ಕೆ ಕಣಿವೆ ರಾಜ್ಯದ ಸಾಕಷ್ಟು ಯುವಕರು ಸಂತಸಗೊಂಡಿದ್ದಾರೆ ಎಂದಿದ್ದಾರೆ ಫಹಿಮ್.
ಒಂದು ವೇಳೆ ಮೋದಿಯವರು ಭೇಟಿಯಾದರೆ ಏನು ಕೇಳುತ್ತಿರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಫಹಿಮ್, ಜಮ್ಮು-ಕಾಶ್ಮೀರದಲ್ಲಿರುವ ನಿರುದ್ಯೋಗದ ಸಮಸ್ಯೆಯನ್ನು ಪ್ರಧಾನಿಯವರ ಗಮನಕ್ಕೆ ತರುತ್ತೇನೆ. ಇಲ್ಲಿಯ ಯುವಕರಿಗೆ ಉದ್ಯೋಗ ಕಲ್ಪಿಸುವಂತೆ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.