Advertisement

ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !

12:06 AM Nov 06, 2024 | Team Udayavani |

ಕಟಪಾಡಿ: ಎಲ್ಲಿಯ ಕಾಶ್ಮೀರ, ಎಲ್ಲಿಯ ಕರಾವಳಿ! ಅಲ್ಲಿ ಕಡುಶೀತ. ಇಲ್ಲಿ ವರ್ಷದ ಹೆಚ್ಚಿನ ಅವಧಿಯಲ್ಲಿ ಧಗಧಗ ಸೆಕೆ! ಆದರೂ ಶೀತಲ ವಾತಾವರಣಕ್ಕೆ ಸೂಕ್ತವಾಗಿರುವ ಕಾಶ್ಮೀರಿ ಕೇಸರಿಯನ್ನು ಕರಾವಳಿಯಲ್ಲಿ ಬೆಳೆಯುವ ಹೊಸ ಪ್ರಯೋಗದಲ್ಲಿ ಐಟಿ ಉದ್ಯೋಗಿ ಯುವಕರು ಯಶಸ್ವಿಯಾಗಿದ್ದಾರೆ.

Advertisement

ಕೆ.ಜಿ.ಗೆ 4ರಿಂದ 7 ಲಕ್ಷ ರೂ. ಬೆಲೆ ಬಾಳುವ ಈ ಕಾಶ್ಮೀರಿ ಕೇಸರಿಯನ್ನು ಕರಾವಳಿ ಭಾಗದಲ್ಲಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದವರು ಸಾಫ್ಟ್‌ ವೇರ್‌ ಡೆವಲಪಿಂಗ್‌ ಉದ್ಯಮಿಗಳಾದ ಅನಂತ್‌ಜಿತ್‌ ಉಡುಪಿ, ಅಕ್ಷತ್‌ ಬಿ.ಕೆ. ಮಣಿಪಾಲ ಅವರು. ಕಾಲೇಜು ಹಂತದಿಂದ ಸ್ನೇಹಿತರಾಗಿದ್ದ ಇವರು ಜತೆಯಾಗಿಯೇ ಐಟಿ ಉದ್ಯೋಗಿಗಳಾಗಿದ್ದು, ಬಳಿಕ ಸ್ವಂತ ಕಂಪೆನಿ ಆರಂಭಿಸಿದ್ದಾರೆ. ಈಗ ಅವರು ಹೊಸ ಪ್ರಯೋಗದ ತವಕದೊಂದಿಗೆ ಕೇಸರಿ ಬೆಳೆದಿದ್ದಾರೆ. ಉಡುಪಿ ಬೈಲೂರಿನ ಅನಂತ್‌ಜಿತ್‌ ವಾಸದ ಮನೆಯ ಮೇಲ್ಮಹಡಿಯಲ್ಲಿ ಅವರ ಕೇಸರಿ ಕೃಷಿ ನಡೆಯುತ್ತಿದೆ.

180 ಚದರ ಅಡಿ ಕೋಣೆ
ಅನಂತ್‌ಜಿತ್‌ ಮತ್ತು ಅಕ್ಷತ್‌ ಬಿ.ಕೆ. ಅವರು ಮಹಡಿಯಲ್ಲಿರುವ 180 ಚದರ ಅಡಿ ಕೋಣೆಯನ್ನು ಬಳಸಿಕೊಂಡು ತಂಪನೆಯ ವಾತಾವರಣ ಸೃಷ್ಟಿಸಿ ಕೇಸರಿ ಬೆಳೆಯುತ್ತಿದ್ದಾರೆ. ಕ್ರೊಕಸ್‌ ಸ್ಯಾಟಿವಸ್‌ನ ಹೂವಿನಿಂದ ಪಡೆಯುವ ಮಸಾಲೆ ಕೇಸರಿ ಕ್ರೋಕಸ್‌ ಇದರ ಉತ್ತಮ ಗುಣಮಟ್ಟದ ಗಡ್ಡೆಯನ್ನು ಕಾಶ್ಮೀರದ ಬೆಳೆಗಾರರ ಮೂಲಕವೇ ತರಿಸಿಕೊಂಡು ಕೃಷಿ ಮಾಡಿದ್ದಾರೆ. ಮೊದಲಿಗೆ ಸ್ಥಳೀಯ ಮಣ್ಣಿನಲ್ಲಿ ಕೇಸರಿ ಗಡ್ಡೆ ಬೆಳೆಯುವ ಪ್ರಯತ್ನ ನಡೆಸಿದ್ದರು. ಅದು ಸಫ‌ಲವಾಗಿರಲಿಲ್ಲ.

6 ಡಿಗ್ರಿ ಸೆ. ಉಷ್ಣಾಂಶ ಬೇಕು
ಕೇಸರಿ ಬೆಳೆಗೆ ಅತ್ಯಂತ ಮುಖ್ಯವಾಗಿ ಬೇಕಿರುವುದು ತಂಪಿನ ವಾತಾವರಣ. ಸುಮಾರು ಆರು ಡಿಗ್ರಿ ಉಷ್ಣಾಂಶವನ್ನು ನಿರಂತರವಾಗಿ ಕಾಪಿಟ್ಟುಕೊಳ್ಳಬೇಕು. ಇದಕ್ಕಾಗಿ ಎ.ಸಿ., ಚಿಲ್ಲರ್‌ ಮತ್ತು ಹ್ಯುಮಿಡಿಫೈರ್‌ ಯಂತ್ರಗಳನ್ನು ಬಳಸಲಾಗಿದೆ. ಗಡ್ಡೆಗಳನ್ನು ಇರುವೆ ದಾಳಿ ಮತ್ತು ಇಲಿಯ ಕಾಟದಿಂದ ಮುಕ್ತಗೊಳಿಸ ಬೇಕಾಗುತ್ತದೆ. ಜತೆಗೆ ಕೋಣೆಯೊಳಗೆ ಹೋಗುವಾಗ ಕೈಯನ್ನು ಸ್ಯಾನಿಟೈಸ್‌ ಮಾಡಿಕೊಳ್ಳಬೇಕು. ಇಷ್ಟೆಲ್ಲ ವ್ಯವಸ್ಥೆ ಮಾಡಲು 10 ಲಕ್ಷ ರೂ.ಗೂ ಅಧಿಕ ಬಂಡವಾಳ ಹೂಡಲಾಗಿದೆ ಎನ್ನುತ್ತಾರೆ ಗೆಳೆಯರು. ಇದಕ್ಕಾಗಿ ಎಂಟು ಲಕ್ಷ ರೂ. ಬ್ಯಾಂಕ್‌ ಸಾಲ ಪಡೆದಿದ್ದಾರೆ.

ಕೇಸರಿಯನ್ನು ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಕೆಲವು ಕಡೆಗಳಲ್ಲಿ ಈಗಾಗಲೇ ಪ್ರಯೋಗಾತ್ಮಕವಾಗಿ ಬೆಳೆಯಲಾಗುತ್ತಿದೆ.

Advertisement

ಎಷ್ಟು ಧಾರಣೆ, ಮಾರಾಟ ಹೇಗೆ?
ಕಾಶ್ಮೀರಿ ಕೇಸರಿ ಒಂದು ಗ್ರಾಂಗೆ 400 ರೂ. ಸ್ಥಳೀಯವಾಗಿ ಧಾರಣೆ ಇದೆ. ಕಾಶ್ಮೀರಕ್ಕೆ ಕೊಂಡೊಯ್ದು ಗ್ರೇಡಿಂಗ್‌ ಮಾಡಿಸಿದಲ್ಲಿ ಒಂದು ಗ್ರಾಂಗೆ 700 ರೂ. ಬೆಲೆ ಬಾಳುತ್ತದೆ.

ಎಲ್ಲೆಲ್ಲಿ ಬಳಕೆ?
ಹೂವಿಗೂ ಬೇಡಿಕೆ!
ಕೇಸರಿ ಅತ್ಯಂತ ಶಕ್ತಿಶಾಲಿ ಬಲವರ್ಧಕ. ಹೀಗಾಗಿ ಗರ್ಭಿಣಿಯರು ಹಾಲಿನಲ್ಲಿ ಹಾಕಿ ಕುಡಿಯುತ್ತಾರೆ. ಉಳಿದಂತೆ ಮಸಾಲೆ ತಯಾರಿ ಹಾಗೂ ಸಿಹಿತಿಂಡಿಯಲ್ಲಿ ಬಳಸುತ್ತಾರೆ. ಕೇಸರಿ ನೈಸರ್ಗಿಕ ಬಣ್ಣಕಾರಕವಾಗಿದೆ. ಅದರ ಹೂವಿನ ದಳಗಳಿಗೂ ಔಷಧ ಮತ್ತು ಬಣ್ಣ ತಯಾರಿಯಲ್ಲಿ ಬೇಡಿಕೆ ಇದೆ. ಒಂದು ಕೆ.ಜಿ. ಹೂವಿನ ದಳಗಳಿಗೆ 20 ಸಾವಿರ ರೂ. ಬೆಲೆ ಇದೆ.

ಎಷ್ಟು ಕೇಸರಿ ಸಿಗುತ್ತದೆ?
ಒಂದು ಗಡ್ಡೆ ಬೆಳೆದು ಅದು ಹೂ ಬಿಡುತ್ತದೆ. ಆ ಹೂವಿನಲ್ಲಿ ಮೂರು ಶಲಾಕಾಗ್ರ (ಸ್ಟಿಗ್ಮಾ) ಹೊರ ಬರುತ್ತವೆ. ಆ ಸಣ್ಣ ಸಣ್ಣ ಕುಸುಮಗಳೇ ಕೇಸರಿ. ಒಂದು ಹೂವಿನಲ್ಲಿ ಮೂರು ಕೇಸರಿ ತುಣುಕು ಮಾತ್ರ ಸಿಗುತ್ತದೆ. 50 ಕೆ.ಜಿ. ಕೇಸರಿ ಗಡ್ಡೆ ಬೆಳೆಸಿದರೆ ಸುಮಾರು 30 ಗ್ರಾಂ ಕೇಸರಿಯನ್ನು ಪಡೆಯಲು ಸಾಧ್ಯ ಎನ್ನುತ್ತಾರೆ ಅನಂತ್‌ಜಿತ್‌ ಮತ್ತು ಅಕ್ಷತ್‌. ಈ ಯುವಕರು ಇದುವರೆಗೆ 37 ಗ್ರಾಂ ಕೇಸರಿ ಪಡೆದಿದ್ದು, 50 ಗ್ರಾಂ ಸಂಗ್ರಹದ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಕುಂಕುಮ ಮತ್ತು ಹಳದಿ ಬಣ್ಣದ ಎರಡು ಕೇಸರಿಗಳನ್ನು ಬೆಳೆಯಲಾಗುತ್ತಿದೆ.

ಇನ್ನಷ್ಟು ಪ್ರಯೋಗ ನಡೆಯಬೇಕಿದೆ ಕರಾವಳಿಯಲ್ಲಿ ಕೇಸರಿ ಬೆಳೆ ಯುವ ಹೊಸ ಪ್ರಯತ್ನ ಮಾಡಿದ್ದೇವೆ. ಆಸಕ್ತಿಯಿಂದ ಮುಂದಡಿ ಇಟ್ಟಿದ್ದು, 10 ಲಕ್ಷ ರೂ. ಬಂಡವಾಳ ಹೂಡಲಾಗಿದೆ. ಈಗಾಗಲೇ ಇಳುವರಿ ಬರುತ್ತಿದೆ. ಅದನ್ನು ಬ್ರ್ಯಾಂಡ್‌ ಮೂಲಕ ಮಾರಾಟಕ್ಕೂ ಆರಂಭ ಮಾಡಿದ್ದೇವೆ. ಇದರಲ್ಲಿ ಇನ್ನಷ್ಟುಪ್ರಯತ್ನಗಳು ನಡೆಯಬೇಕಾ ಗಿದೆ.
-ಅನಂತ್‌ಜಿತ್‌ ಉಡುಪಿ, ಅಕ್ಷತ್‌ ಬಿ.ಕೆ. ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next