ಹುಬ್ಬಳ್ಳಿ: ಗಣರಾಜ್ಯೋತ್ಸವ ಸಂದರ್ಭ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿ ಬೆಂಗಳೂರಿಗೆ ಬಂದಿದ್ದರೆನ್ನಲಾದ ನಾಲ್ವರು ಕಾಶ್ಮೀರಿ ಉಗ್ರರು ಅಲ್ಲಿಂದ ತಲೆಮರೆಸಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಸೇರಿ ರಾಜ್ಯದೆಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಕಾಶ್ಮೀರಿ ಉಗ್ರರು ಬೆಂಗಳೂರಿಗೆ ಬಂದಿದ್ದಾರೆಂಬ ಮಾಹಿತಿ ಆಧರಿಸಿ ಭಯೋತ್ಪಾದಕ ನಿಗ್ರಹ ದಳ ಸಿಬ್ಬಂದಿ ಉಗ್ರರ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದರು.
ಆದರೆ ಉಗ್ರರು ಗುರುವಾರ (ಜ. 25) ರಾತ್ರಿ 11:30ರ ಸುಮಾರಿಗೆ ಬೆಂಗಳೂರಿನಿಂದ ಬೇರೆಡೆಗೆ ತೆರಳಿದ್ದಾರೆ ಎನ್ನಲಾಗಿದೆ. ಎಲ್ಲಿಗೆ ಹೋಗಿದ್ದಾರೆ ಹಾಗೂ ಎಲ್ಲಿ ಅವಿತುಕೊಂಡಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಇಲ್ಲದ ಕಾರಣ ಅವರ ಪತ್ತೆಗಾಗಿ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ವಿಧ್ವಂಸಕ ಕೃತ್ಯವೆಸಗುವ ಮುನ್ನವೇ ಅವರನ್ನು ಸೆರೆ ಹಿಡಿಯಲು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಸೇರಿ ರಾಜ್ಯದ ಎಲ್ಲ ವಿಮಾನ ನಿಲ್ದಾಣ,ರೈಲ್ವೆ ನಿಲ್ದಾಣ ಸೇರಿ ಆಯಕಟ್ಟಿನ ಎಲ್ಲ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ.
ಹೆದ್ದಾರಿಗಳಲ್ಲಿ ಸಂಚರಿಸುವ ಹಾಗೂ ರೈಲ್ವೆ -ವಿಮಾನ ನಿಲ್ದಾಣ ಪ್ರವೇಶಿಸುವ ಎಲ್ಲ ವಾಹನಗಳು ಹಾಗೂ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸುತ್ತಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್)ಸಿಬ್ಬಂದಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ವಿಮಾನ ನಿಲ್ದಾಣ ಪ್ರವೇಶಿಸುವ ಪ್ರತಿಯೊಂದು ವಾಹನ ಹಾಗೂ ಪ್ರಯಾಣಿಕರ ಲಗೇಜ್ ಅನ್ನು ತಪಾಸಣೆಗೊಳಪಡಿಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ. ದಿನದ 24 ತಾಸು ಕಣ್ಗಾವಲು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.