ಕಾಶ್ಮೀರ: “ಕಾಶ್ಮೀರಿ ಹಿಂದೂಗಳು ಮತ್ತು ವಲಸಿಗರೇ ಕೂಡಲೇ ಜಮ್ಮು ಮತ್ತು ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ ನಿಮ್ಮನ್ನು ಬಲವಂತವಾಗಿ ಕಣಿವೆ ರಾಜ್ಯದಿಂದ ಹೊರದಬ್ಬಬೇಕಾಗುತ್ತದೆ,’ ಎಂದು ಲಷ್ಕರ್-ಎ- ತೊಯ್ಬಾದ ಸಹ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಬಹಿರಂಗವಾಗಿ ಬೆದರಿಕೆ ಹಾಕಿದೆ.
ಅಘಾತಕಾರಿ ಅಂಶವೆಂದರೆ, ಸೂಕ್ಷ್ಮ ಮಾಹಿತಿಯಾದ ಕಾಶ್ಮೀರಿ ಹಿಂದೂಗಳು ಮತ್ತು ವಲಸಿಗರ ಪಟ್ಟಿಯನ್ನು ಸಂಘಟನೆ ಬಿಡುಗಡೆಗೊಳಿಸಿದೆ.
“ಕಾಶ್ಮೀರಿ ಹಿಂದೂಗಳು ಮತ್ತು ವಲಸಿಗರು ಕಣಿವೆ ರಾಜ್ಯದ ಉದ್ಯೋಗಗಳು ಮತ್ತು ಜಮೀನನ್ನು ಕಸಿಯುತ್ತಿದ್ದಾರೆ. ಕಣಿವೆಯ ವಾತಾವರಣವನ್ನು ಹಾಳು ಮಾಡುತ್ತಿರುವ ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು,’ ಎಂದು ಟಿಆರ್‌ಎಫ್ ಬೆದರಿಕೆ ಹಾಕಿದೆ. “ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಹಿಂದೂತ್ವ ಅಜೆಂಡಾ ಸ್ಥಾಪಿಸಲು ಹೊರಟಿದೆ. ಆದರೆ ಯಾವುದೇ ಕಾರಣಕ್ಕೂ ಇದು ಸಂಭವಿಸಲು ನಾವು ಬಿಡುವುದಿಲ್ಲ,’ ಎಂದು ಟಿಆರ್‌ಎಫ್ ಹೇಳಿದೆ.
ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೇ ಕಾಶ್ಮೀರಿ ಹಿಂದೂಗಳು ಮತ್ತು ವಲಸಿಗರ ಪಟ್ಟಿ ಹೇಗೆ ಸೋರಿಕೆಯಾಯಿತು ಎಂಬುದರ ಕುರಿತು ವಿಚಾರಣೆ ಆರಂಭಿಸಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಬೆದರಿಕೆ ಹಿನ್ನೆಲೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.