Advertisement

ಕಣಿವೆಯ ಆಕಾಶದಲ್ಲೀಗ ಎರಡೇ ಬಣ್ಣ; ನೀಲಿ ಮತ್ತು ಬಿಳಿ

11:45 AM Oct 05, 2021 | ಅರವಿಂದ ನಾವಡ |
-ಅರವಿಂದ ನಾವಡಕಾಶ್ಮೀರಿಗರು ಮುಗ್ಧರು. ತಮ್ಮ ಬದುಕಿಗೆ ಬೇಕಾದಷ್ಟನ್ನು ಗಳಿಸಿಕೊಳ್ಳುವವರು. ನಿಜ, ಶಿಕ್ಷಣ ಎಲ್ಲರ ಮನೆ ಬಾಗಿಲಿಗೂ ತಲುಪಿಲ್ಲ. ಬಹಳಷ್ಟು ಯುವಜನರು ಶಿಕ್ಷಣವೆಂಬ ಗಿರಿಯ ತಪ್ಪಲಿಗೆ ಹೋಗಿದ್ದಾರೆ, ಮೇಲೇ ರಲು ಸಾಧ್ಯವಾಗಿಲ್ಲ. ಅದಕ್ಕೆ ಹಲವು ಕಾರಣಗಳಿರ ಬಹುದು. ತಮ್ಮದೇ ವ್ಯವಸಾಯ, ತೋಟಗಾರಿಕೆ ಬೆಳೆ, ಪ್ರವಾಸೋ ದ್ಯಮವನ್ನು ಆಧರಿಸಿ ಬದುಕು ಸಾಗಿಸುತ್ತಿದ್ದಾರೆ. ಇಂಥ ಹೊತ್ತಿ ನಲ್ಲಿ ಹಗಲುಗನಸು ಬಿತ್ತಿದವರು ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಹಿಂಬಾಲಕರು. ಈ ಅಭಿಪ್ರಾಯ ಹಲವರದ್ದು. ನೇರವಾಗಿಯಲ್ಲ; ಹಲವು ಪ್ರಶ್ನೆಗ ಳಿಗೆ ಸಿಗುವ ಚುಕ್ಕೆ ಉತ್ತರಗಳು. ಅವುಗಳನ್ನು ಜೋಡಿಸುತ್ತ ಹೋದರೆ ಚಿತ್ರ ಸ್ಪಷ್ಟವಾಗುತ್ತದೆ...
Now pay only for what you want!
This is Premium Content
Click to unlock
Pay with

-ಅರವಿಂದ ನಾವಡ

Advertisement

ಕಣಿವೆ ಪ್ರದೇಶದಲ್ಲಿ ಹಿಂದೆ ಬರೀ ಕಾರ್ಮೋಡವೇ. ಆಕಾಶದ ಯಾವ ಬಣ್ಣವೂ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ.ಒಮ್ಮೆ ನೀಲಾಕಾಶ ತೋರಿತಲ್ಲ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕಾರ್ಮೋಡ ಕವಿದು ಬಿಡುತ್ತಿತ್ತು. ಮತ್ತೆ ಬೆಳಕು ಹರಿಯುವಷ್ಟರಲ್ಲಿ ಎಷ್ಟೋ ರಾತ್ರಿಗಳು ಕಳೆದಿರುತ್ತಿದ್ದವು.

ಟೆಲಿವಿಷನ್‌ಗಳಲ್ಲಿ, ನ್ಯೂಸ್‌ ಏಜೆನ್ಸಿಸ್‌ಗಳಲ್ಲಿ ಎರಡು ವರ್ಷಗಳ ಹಿಂದೆ ಬರುತ್ತಿದ್ದ ದೃಶ್ಯಗಳು, ಫೋಟೋಗಳು ಇನ್ನೂ ನೆನಪಿನಲ್ಲಿವೆ. ಖಾಲಿ ಖಾಲಿ ರಸ್ತೆಗಳು, ರಸ್ತೆ ತುಂಬಾ ಬಿದ್ದಿರುವ ಕಲ್ಲು ಗಳು, ಗುರಾಣಿಯನ್ನು ಹಿಡಿದು ಕೊಂಡು ಪ್ರತಿಭಟನಕಾರರನ್ನು ಚದುರಿಸಲು ಹರಸಾಹಸ ಪಡುತ್ತಿರುವ ಸೇನೆ, ಪೊಲೀಸರು, ಭಯೋತ್ಪಾದಕರನ್ನು ಪತ್ತೆ ಹಚ್ಚು ವಲ್ಲಿ ನಿರತರಾದ ಸೇನಾ ಸಿಬಂದಿ, ಮತ್ಯಾವುದೋ ಘಟನೆಯಲ್ಲಿ ಗಾಯಗೊಂಡ ಸಿಬಂದಿ ಇತ್ಯಾದಿ. ಇದನ್ನು ಹೊರತುಪಡಿಸಿದರೆ ಮತ್ತೊಂದು ಕಡೆ ಕಣಿವೆಯ ಯಾವುದೋ ಕುಟುಂಬದ ಮನೆ ಎದುರು ಸೇರಿರುವ ಜನರು, ಮೇಲಂತಸ್ತಿನ ಕಿಟಕಿಯ ಮೂಲಕ ಹೊರಗೆ ನೋಡುತ್ತಿ ರುವ ಮಹಿಳೆಯರ ದುಃಖಭರಿತ ಮುಖಗಳು, ಯಾವುದೋ ಶವ ಯಾತ್ರೆಗೆ ಸೇರಿರುವ ಜನರು. ಹೀಗೆ ಇಂಥ ಚಿತ್ರಗಳೇ ಹೆಚ್ಚಾ ಗಿರುತ್ತಿದ್ದವು.

ಎಲ್ಲ ಸನ್ನಿವೇಶಗಳೂ ಕಾಶ್ಮೀರ ಕಣಿವೆಯ ವಿಭಿನ್ನ ಪರಿಸ್ಥಿತಿಯನ್ನು ಹೇಳುತ್ತಿದ್ದವು. ಸುಮಾರು ಮೂರು ಸಾವಿರ ಕಿ.ಮೀ. ದೂರದ ನಮ್ಮಲ್ಲಿ ಮೂಡುತ್ತಿದ್ದ ಗೊಂದಲ ಹಲವು. ಇಷ್ಟೊಂದು ಜನ ಹೀಗೇಕೆ ಪೊಲೀಸರಿಗೆ ಕಲ್ಲು ಹೊಡೆಯುತ್ತಾರೆ? ಇವರೆಲ್ಲ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದಾರಾ ಅಥವಾ ಭಯೋತ್ಪಾದಕರ, ಸಂಘಟನೆಗಳ ಕುತಂತ್ರಕ್ಕೆ ಬಲಿಯಾ ಗುತ್ತಿದ್ದಾರಾ ಅಥವಾ ನಾಡಿನೊಳಗೆ ಭಯೋತ್ಪಾದಕರ ಪರವಾಗಿರುವ ನಾಜೂಕಯ್ಯಗಳು ಜನರ ಮುಗ್ಧತೆ ಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರಾ ಇತ್ಯಾದಿ ಅನೇಕ ಪ್ರಶ್ನೆಗಳು ಏಳುತ್ತಿದ್ದವು.

ಕಾಶ್ಮೀರಿಗರು ಮುಗ್ಧರು. ತಮ್ಮ ಬದುಕಿಗೆ ಬೇಕಾದಷ್ಟನ್ನು ಗಳಿಸಿಕೊಳ್ಳುವವರು. ನಿಜ, ಶಿಕ್ಷಣ ಎಲ್ಲರ ಮನೆ ಬಾಗಿಲಿಗೂ ತಲುಪಿಲ್ಲ. ಬಹಳಷ್ಟು ಯುವಜನರು ಶಿಕ್ಷಣವೆಂಬ ಗಿರಿಯ ತಪ್ಪಲಿಗೆ ಹೋಗಿದ್ದಾರೆ, ಮೇಲೇ ರಲು ಸಾಧ್ಯವಾಗಿಲ್ಲ. ಅದಕ್ಕೆ ಹಲವು ಕಾರಣಗಳಿರ ಬಹುದು. ತಮ್ಮದೇ ವ್ಯವಸಾಯ, ತೋಟಗಾರಿಕೆ ಬೆಳೆ, ಪ್ರವಾಸೋ ದ್ಯಮವನ್ನು ಆಧರಿಸಿ ಬದುಕು ಸಾಗಿಸುತ್ತಿದ್ದಾರೆ. ಇಂಥ ಹೊತ್ತಿ ನಲ್ಲಿ ಹಗಲುಗನಸು ಬಿತ್ತಿದವರು ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಹಿಂಬಾಲಕರು. ಈ ಅಭಿಪ್ರಾಯ ಹಲವರದ್ದು. ನೇರವಾಗಿಯಲ್ಲ; ಹಲವು ಪ್ರಶ್ನೆಗ ಳಿಗೆ ಸಿಗುವ ಚುಕ್ಕೆ ಉತ್ತರಗಳು. ಅವುಗಳನ್ನು ಜೋಡಿಸುತ್ತ ಹೋದರೆ ಚಿತ್ರ ಸ್ಪಷ್ಟವಾಗುತ್ತದೆ.

Advertisement

ಎರಡು ವರ್ಷಗಳಲ್ಲಿ ಆಗಿ ರುವ ಬದಲಾವಣೆ ಅಭಿವೃದ್ಧಿಯ ದೃಷ್ಟಿಯಲ್ಲಿ ಎಂಥದ್ದು ಎಂಬು ದನ್ನು ಸ್ಪಷ್ಟವಾಗಿ ಹೇಳಲಾಗದು. ಆದರೆ ಆಕಾಶದ ಬಣ್ಣ ಬದಲಾ ಗಿದೆ. ಈಗ ಇರುವುದು ನೀಲಿ ಮತ್ತು ಬಿಳಿ.

ಕೆಲವು ಸರಕಾರಿ ಸಿಬಂದಿ, ಪೊಲೀಸರು ಮತ್ತು ನಾಗರಿಕರೊಂದಿಗೆ ಮಾತನಾಡಿದಾಗ ಸಿಕ್ಕ ಚುಕ್ಕೆಗಳು ಎಂಥ ಚಿತ್ರ ಕೊಡಬಲ್ಲದು ನೋಡಿ. “ಹಿಂದೆ ಭದ್ರತ ವ್ಯವಸ್ಥೆ ಎಂದರೆ ಪ್ರಮುಖವಾಗಿ ಪೊಲೀಸರು ಮತ್ತು ಸೇನೆ ನಾಲ್ಕು ಬಗೆಯ ರೂಪಗಳನ್ನು ಎದುರಿಸಬೇಕಿತ್ತು. ಭಯೋತ್ಪಾದಕರು, ಭಯೋತ್ಪಾದಕರಿಗೆ ನೆರವು ನೀಡುವವರು, ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಳ್ಳುತ್ತ ದ್ವಿಪಾತ್ರ ನಿರ್ವಹಿಸುತ್ತಿರುವವರು ಹಾಗೂ ನಾಗರಿಕರು. ಭಯೋತ್ಪಾದಕರು ಗೊತ್ತಿರುವ ಶತ್ರುಗಳು. ಅವರ ರೂಪದ ಬಗ್ಗೆ, ಚಟುವಟಿಕೆ ಬಗ್ಗೆ ತಿಳಿದೇ ಇದೆ. ಅವರ ಕಾರ್ಯತಂತ್ರಗಳಿಗೆ ಪ್ರತಿತಂತ್ರ ಹೂಡುವುದು ಸಾಧ್ಯ. ಆದರೆ ಸವಾಲು ಇರುವುದು ಅಲ್ಲಿಯೇ.

ಇದನ್ನೂ ಓದಿ:ಕೈ ಕೊಟ್ಟ ವಾಟ್ಸಾಪ್, ಫೇಸ್ ಬುಕ್, ಇನ್‍ಸ್ಟಾಗ್ರಾಂ | ಬಳಕೆದಾರರ ಪರದಾಟ

“ನಾವು ಭಯೋತ್ಪಾದಕರನ್ನು ಸ್ಪಷ್ಟವಾದ ಕಾರ್ಯ ತಂತ್ರಗಳಿಂದಲೇ ಹತ್ತಿಕ್ಕುತ್ತೇವೆ. ಭಯೋತ್ಪಾದಕರಿಗೆ ನೆರವು ನೀಡುವವರನ್ನೂ ಒಂದಲ್ಲ ಒಂದು ರೀತಿಯಲ್ಲಿ ಪತ್ತೆ ಹಚ್ಚಿ ಬಿಡುತ್ತೇವೆ. ಆದರೆ ಭಯೋತ್ಪಾದಕರ ಪರ ಮೃದು ಧೋರಣೆ ಹೊಂದಿ ಅವರನ್ನು ಸ್ವಾತಂತ್ರ್ಯ ಹೋರಾಟಗಾರ ರೆಂದು ಬಿಂಬಿಸುವವರಿಗೆ ನಿರ್ದಿಷ್ಟ ರೂಪವಿಲ್ಲ. ನಮ್ಮೆದುರು ಒಂದು ವೇಷ, ಅವರೊಂದಿಗೆ ನಿಜ ವೇಷ. ಸಮಾಜದೊಳಗೇ ಇದ್ದುಕೊಂಡು ಪ್ರತೀ ಆಗು ಹೋಗಿನ ಕುರಿತು ಭಯೋತ್ಪಾದಕರಿಗೆ ಮಾಹಿತಿ ಕೊಡುತ್ತಾರೆ. ಇದರಿಂದ ನಮ್ಮ ಕಾರ್ಯತಂತ್ರಗಳು ವಿಫ‌ಲ ವಾಗುತ್ತವೆ. ನಿಜವಾದ ಶತ್ರುಗಳನ್ನು ಹತ್ತಿಕ್ಕುವಲ್ಲಿ ಎಡವುತ್ತೇವೆ’ ಎನ್ನುತ್ತಾರೆ ಸಿಬಂದಿಯೊಬ್ಬರು.

“ಈ ಸಮಸ್ಯೆಯನ್ನು ಭದ್ರತ ವ್ಯವಸ್ಥೆ ಹಲವು ವರ್ಷ ಗಳಿಂದ ಎದುರಿಸಿದೆ. ಹಲವೆಡೆ ಯಶಸ್ವಿಯಾಗಿದೆ, ಕೆಲವೆಡೆ ಪೆಟ್ಟನ್ನೂ ತಿಂದಿದೆ. ನಿಮಗೆ ಅಚ್ಚರಿ ಎನಿಸಬಹುದು. ಒಬ್ಬ ಆಡಳಿತ ವ್ಯವಸ್ಥೆಯ ಪರಮೋಚ್ಚ ಸ್ಥಾನದಲ್ಲಿದ್ದ ಹಿರಿಯ ರಾಜಕಾರಣಿಯೊಬ್ಬರು ಒಮ್ಮೆ ತುಂಬಿದ ನಾಗರಿಕರ ಸಭೆಯಲ್ಲಿ, ಎದುರಿಗೆ ಅವರ ಭದ್ರತೆಗೆ ನಿಯೋಜಿಸಿದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಯನ್ನು ಬೊಟ್ಟು ಮಾಡಿ ತೋರಿಸುತ್ತ, “ಈ ಪೊಲೀಸರು ನಿಮಗೆ ಹಿಂಸೆ ಕೊಡುತ್ತಿರುವುದು ಗಮನಕ್ಕೆ ಬಂದಿದೆ. ಇವರು ಮಾಡುತ್ತಿರುವುದು ಘನಘೋರ ತಪ್ಪು. ಇವರಿಂದ ಸ್ವಾತಂತ್ರ್ಯ ಕೊಡಿಸುತ್ತೇವೆ. ಇವರ ಅಗತ್ಯವೇ ಇಲ್ಲ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಂತೆ. ಇಂಥ ಪರಿಸ್ಥಿತಿಯಲ್ಲಿ ನಾಗರಿಕರು ಮತ್ತು ಉಳಿದವರು ಭದ್ರತ ಸಿಬಂದಿ ಯನ್ನು ಎಷ್ಟು ಲಘುವಾಗಿ ಪರಿಗಣಿಸಬಹುದು, ಜನರೆದುರು ಹಾಸ್ಯ ಮಾಡಿದರೆ ವ್ಯವಸ್ಥೆಯ ಸ್ಥಿತಿ ಏನಾಗಬೇಕು? ಇದು ಹಿಂದಿನ ಕಥೆ.

“ನನ್ನ ಮನೆಯಲ್ಲೇ ನನ್ನ ಸೋದರರೇ ಪ್ರಶ್ನಿಸಿದ್ದಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮನ್ನು ಅಪಹಾಸ್ಯ ಮಾಡುವವರನ್ನೇ, ಜನರನ್ನು ನಿಮ್ಮ ಮೇಲೆ ಎತ್ತಿಕಟ್ಟುವವರಿಗೇ ಭದ್ರತೆ ಕೊಡುತ್ತೀರಿ ಎಂದು ಲೇವಡಿ ಮಾಡಿದ್ದಿದೆ. ಆಗ ಮೌನವಷ್ಟೇ ಉತ್ತರವಾಗಿತ್ತು’ ಎಂದರು ಆ ಹಿರಿಯ ಸಿಬಂದಿ.

ಈಗ ಎಲ್ಲವೂ ಸ್ಪಷ್ಟವಾಗಿದೆ. ಭಯೋತ್ಪಾದಕರು ಮತ್ತು ನಾಗರಿಕರು. ಎರಡೇ ವರ್ಗಗಳು. ಮೂರನೇ ವೇಷ ಧರಿಸಿದ್ದ ನಾಜೂಕಯ್ಯಗಳಿಗೆ ಯಾವುದೋ ಒಂದು ಕಡೆಯನ್ನು ಆಯ್ದುಕೊಳ್ಳಬೇಕಾದ ಅನಿವಾ ರ್ಯತೆ ಸೃಷ್ಟಿಯಾಗಿದೆ. ಭಯೋತ್ಪಾದಕರ ಗುಂಪಿಗೆ ಸೇರಿದರೆ ಶಿಕ್ಷೆ ಅನಿವಾರ್ಯ. ನಾಗರಿಕರ ವರ್ಗಕ್ಕೆ ಸೇರಿ ವ್ಯವಸ್ಥೆಯನ್ನು ಒಪ್ಪಿಕೊಂಡರೆ, ಹಕ್ಕು-ಸೌಲಭ್ಯ ಎಲ್ಲವೂ ಲಭ್ಯ. ಇದು ಭಯೋತ್ಪಾದನ ಚಟುವಟಿಕೆ ಗಳನ್ನು ಹತ್ತಿಕ್ಕುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಆಗಿನ ಸವಾಲುಗಳೇ ಕಷ್ಟ. ನಾವು ಭಯೋತ್ಪಾದಕರ ಉಪಟಳದಿಂದ ಸಂತ್ರಸ್ತರಾದವರನ್ನೂ ಸಂತೈಸಬೇಕಿತ್ತು. ಜತೆಗೆ ಭಯೋತ್ಪಾದಕ ಸಂಘಟನೆಗಳ ಕುತಂತ್ರಕ್ಕೆ ಬಲಿಯಾಗಿ ತಮ್ಮ ಮನೆಯಲ್ಲಿ ಮಗನನ್ನೋ, ಆಣ್ಣನನ್ನೋ ಕಳೆದುಕೊಂಡ ಕುಟುಂಬಗಳ ಆಕ್ರೋಶ ವನ್ನೂ ಎದುರಿಸಬೇಕಿತ್ತು. ಅವರಿಗೂ ತಿಳಿಹೇಳಬೇಕಿತ್ತು. ಇದಕ್ಕಿಂತ ದೊಡ್ಡ ಸವಾಲು ಇದೆಯೇ?’ ಎಂದು ಕೇಳಿದವರು ಮತ್ತೊಬ್ಬರು.

ಈ ಸನ್ನಿವೇಶ ಹೀಗಿದೆ. ಭಯೋತ್ಪಾದಕರ ದಾಳಿ ಸಂದರ್ಭ ಕಷ್ಟ ಎದುರಿಸುವ ನಾಗರಿಕರು ಬೇರೆ. ಅವರು ಪರಿಣಾಮದ ಹಿಂದಿನ ಕಾರಣವನ್ನು ಮತ್ತು ಕಾರಣಕರ್ತರನ್ನು ಸ್ಪಷ್ಟವಾಗಿ ಗುರುತಿಸಬಲ್ಲರು. ಅಂಥವರು ಆ ಘಟನೆಯ ಕಾರಣಕರ್ತರಾದ ಭಯೋ ತ್ಪಾದಕರಿಗೆ ನೆರವು ನೀಡುವುದಿಲ್ಲ. ಅದರೆ ಕೆಲವರ ಕುಟುಂಬದಲ್ಲಿನ ಯುವಕರ‌ನ್ನು (ಹೆಚ್ಚು ಓದಿರುವು ದಿಲ್ಲ, ನಿರುದ್ಯೋಗಿಗಳು) ಈ ಭಯೋತ್ಪಾದಕ ಸಂಘಟನೆಗಳು, ಅವರ ಪರವಾಗಿರುವವರು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಬೇರೆ ಬೇರೆ ತಂತ್ರಗಳನ್ನು (ಬ್ರೈನ್‌ವಾಶ್‌ ಕೂಡ) ಬಳಸಿ ಆಡಳಿತದ ವಿರುದ್ಧ ಎತ್ತಿ ಕಟ್ಟುತ್ತಾರೆ. ಅವನ ತಲೆಯೊಳಗೆ ಭಯೋತ್ಪಾದನೆಯನ್ನು ಬಿತ್ತಲಾಗುತ್ತದೆ. ಒಬ್ಬ ಭಯೋತ್ಪಾದಕನ ಆಯುಷ್ಯ (ಭಯೋತ್ಪಾದನೆಗೆ ತೊಡಗಿದ ಬಳಿಕ) ಹೆಚ್ಚೆಂದರೆ ಎರಡರಿಂದ ಐದು ವರ್ಷಗಳು. ಅಷ್ಟರೊಳಗೆ ಪೊಲೀಸರ, ಸೇನೆಯ ಕಾರ್ಯಾಚರಣೆಯಲ್ಲಿ ಹತರಾಗುತ್ತಾರೆ.

ವಿಚಿತ್ರವೆಂದರೆ ಆತ ತನ್ನ ಕುಟುಂಬ ದಲ್ಲಿ ಸಹಜವಾಗಿರುತ್ತಾನೆ. ತಮ್ಮ ಸೋದರನ ಅಥವಾ ಮಗನ, ಕುಟುಂಬ ಸದಸ್ಯನ ಭಯೋತ್ಪಾದಕ ಚಟುವಟಿಕೆ ಬಗ್ಗೆ ಸಂಬಂಧಪಟ್ಟ ಕುಟುಂಬಕ್ಕೆ ತಿಳಿದಿರದು. ಭದ್ರತ ಸಿಬಂದಿಯ ಎನ್‌ಕೌಂಟರ್‌ನಲ್ಲಿ ಸತ್ತ ಕೂಡಲೇ ಕುಟುಂಬದವರು, “ನಮ್ಮವನು ಅಂಥವನು ಅಲ್ಲವೇ ಅಲ್ಲ. ತಮ್ಮ ಅಮಾಯಕ ಮಗನನ್ನು/ಸೋದರನನ್ನು/ ಕುಟುಂಬ ಸದಸ್ಯನನ್ನು ಪೊಲೀಸರು ಕೊಂದರು’ ಎಂದು ಹಗೆ ಸಾಧಿಸತೊಡ ಗುತ್ತಾರೆ. ಇವರನ್ನು ಸಂತೈಸುವುದು ಮತ್ತು ತಿಳಿ ಹೇಳುವುದು ಅತ್ಯಂತ ಕಷ್ಟದ ಕೆಲಸ. ಈ ಪರಿಸ್ಥಿತಿಯನ್ನೇ ಭಯೋತ್ಪಾದಕರು, ಭಯೋತ್ಪಾದಕ ಸಂಘಟನೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದವು. ಈ ಸಂಗತಿಯನ್ನು ಹಲವು ಭಯೋತ್ಪಾದಕರ ಹತ್ಯೆ ಸಂದರ್ಭದಲ್ಲಿ ಗಮನಿಸಬಹುದು. ಇದನ್ನು ಒಪ್ಪದವರೂ ಇದ್ದಾರೆ. ಅದು ಬೇರೆ ಮಾತು.

ಅಂಥ ಕಣಿವೆಯಲ್ಲೀಗ ಅಭಿವೃದ್ಧಿ ಚರ್ಚೆಯಲ್ಲಿದೆ. ಮೂಲ ಸೌಕರ್ಯ ಹೆಚ್ಚಿಸುವ ಘೋಷಣೆಗಳು ಕೇಳಿಬರುತ್ತಿವೆ. ಭಾರತದ ಸ್ವಿಟ್ಜರ್‌ಲ್ಯಾಂಡ್‌ (ಪ್ರವಾಸೋ ದ್ಯಮ ಕ್ಷೇತ್ರದಲ್ಲಿ) ಅನ್ನಾಗಿ ರೂಪಿಸುವ ಕಾಮಗಾರಿ ಗಳೂ ಪ್ರಗತಿಯಲ್ಲಿವೆ. ಹಾಗೆಂದು ಈ ಅಭಿವೃದ್ಧಿ ಗಾಳಿ ನಕಲಿ ಎನ್ನುವವರೂ ಇದ್ದಾರೆ.

ಅಂದಹಾಗೆ ಕೆಲವೇ ದಿನಗಳಲ್ಲಿ ಕಾಶ್ಮೀರದಲ್ಲಿ ಅರಳುವ ಕೇಸರಿಯ ಹೂವಿನ ಬಣ್ಣ ಬದಲಾಗಿಲ್ಲ. ವರ್ಷಕ್ಕೊಮ್ಮೆ ಅರಳುವ ಅಪರೂಪದ ಹೂವಿಗೆ/ಬೆಳೆಗೆ ರೈತರು ಮತ್ತೆ ಸಜ್ಜಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.