ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ 7 ತಿಂಗಳ ಬಳಿಕ ಕಾಶ್ಮೀರದಲ್ಲಿ ಸೋಮವಾರದಿಂದ ಶಾಲೆಗಳು ಪುನರಾರಂಭಗೊಂಡಿದೆ. ಸರ್ಕಾರ ಎಲ್ಲಾ ಶಾಲೆಗಳನ್ನು 2019ರ ನವೆಂಬರ್ ನಲ್ಲಿಯೇ ಪುನರಾರಂಭ ಮಾಡಲು ಪ್ರಯತ್ನಿಸಿತ್ತು. ಆದರೆ ಕೆಲವೇ ಕೆಲವು ಶಾಲೆಗಳು ಮಾತ್ರ ಆರಂಭಗೊಂಡಿದ್ದವು ಎಂದು ವರದಿ ತಿಳಿಸಿದೆ.
ಸಾಮಾನ್ಯವಾಗಿ ಕಾಶ್ಮೀರದಲ್ಲಿ ಮೂರು ತಿಂಗಳು ಚಳಿಗಾಲದ ರಜೆಯ ಅವಧಿ ಇದಾಗಿದೆ. ಆದರೆ 2019ರ ಆಗಸ್ಟ್ ನಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಂದ ದೂರವೇ ಉಳಿಯುವಂತಾಗಿತ್ತು.
ಚಳಿಗಾಲದ ರಜೆಯ ನಂತರ ಶಾಲೆ ಪುನರಾರಂಭಗೊಂಡಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ತುಂಬಾ ಖುಷಿಯಿಂದ ಆಗಮಿಸಿದ್ದರು. ತುಂಬಾ ದೀರ್ಘಕಾಲದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಗೆ ಬರಲು ತಯಾರಿ ನಡೆಸುತ್ತಿದ್ದರು. ಇದೀಗ ವಿದ್ಯಾರ್ಥಿಗಳು ಹೆಚ್ಚಿನ ಸಮಯ ವ್ಯರ್ಥ ಮಾಡುವುದು ಬೇಕಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮಗೆ ತುಂಬಾ ಖುಷಿಯಾಗಿದೆ. ನಾವು ತುಂಬಾ ಸಮಯವನ್ನು ಕಳೆದುಕೊಂಡು ಬಿಟ್ಟೆವು. ನಾವು ಪ್ರಥಮ ಪಿಯುಸಿ ವಿದ್ಯಾರ್ಥಿಗಳು. ಕಾಲೇಜು ಪುನರಾರಂಭವಾಗಿರುವುದು ತುಂಬಾ ಸಂತಸದ ವಿಚಾರ ಎಂದು ನಿಡಾ ತಾರಿಖ್ ಪ್ರತಿಕ್ರಿಯೆ ನೀಡಿದ್ದಾಳೆ.
ನಾವು ಶಾಲೆಗೆ ಹೋಗುತ್ತೇವೆ ಎಂಬುದನ್ನು ನಾನು ನಂಬಿರಲಿಲ್ಲವಾಗಿತ್ತು. ಕಳೆದ ಏಳು ತಿಂಗಳಿನಿಂದ ನಾವು ಶಾಲೆಯನ್ನು ಮರೆತೇ ಬಿಟ್ಟಿದ್ದೇವೆ. ಇದೀಗ ಕಳೆದ ಒಂದು ತಿಂಗಳಿನಿಂದ ನಾವು ಏನು ಕಲಿತಿದ್ದೇವೆ ಎಂಬುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೇವೆ ಎಂದು ಮತ್ತೊಬ್ಬ ವಿದ್ಯಾರ್ಥಿ ಗಾಝಾನ್ ಮನೀರ್ ತಿಳಿಸಿದ್ದಾನೆ ಎಂದು ವರದಿ ವಿವರಿಸಿದೆ.