ಬ್ಯಾಂಕಾಕ್/ವಾಷಿಂಗ್ಟನ್: ಕಾಶ್ಮೀರ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಬಿದ್ದರೆ ಮಧ್ಯಪ್ರವೇಶಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅದರ ಅಗತ್ಯವೇ ಇಲ್ಲವೆಂದು ಹೇಳಿದ್ದಾರೆ. ಥೈಲ್ಯಾಂಡ್ ಪ್ರವಾಸದ ವೇಳೆಯೇ ಈ ಬೆಳವಣಿಗೆ ನಡೆದಿದೆ. ಈ ಬಗ್ಗೆ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಜೈಶಂಕರ್ ‘ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಅಗತ್ಯ ಬಿದ್ದರೆ ಪಾಕಿಸ್ಥಾನದ ಜತೆಗೆ ನೇರವಾಗಿ ಮಾತನಾಡುತ್ತೇವೆ. ಈ ನಿಟ್ಟಿನಲ್ಲಿ ಭಾರತ ಸರಕಾರದ ಅಭಿಪ್ರಾಯವನ್ನು ಅಮೆರಿಕದ ವಿದೇಶಾಂಗ ಸಚಿವರಿಗೆ ನೇರವಾಗಿ ತಿಳಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
9ನೇ ಪೂರ್ವ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನ, ಆಸಿಯಾನ್-ಇಂಡಿಯಾ ಸಚಿವ ಮಟ್ಟದ ಸಮ್ಮೇಳನ, 26ನೇ ಆಸಿಯಾನ್ ಪ್ರಾದೇಶಿಕ ವಿಭಾಗಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಲು ಜೈಶಂಕರ್ ಥೈಲ್ಯಾಂಡ್‌ನಲ್ಲಿ ಇದ್ದಾರೆ.
ಮತ್ತದೇ ರಾಗ: ಇದಕ್ಕೂ ಮೊದಲು ವಾಷಿಂಗ್ಟನ್‌ನಲ್ಲಿ ಗುರುವಾರ ಮಾತನಾಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ಥಾನ ಕೇಳಿಕೊಂಡಲ್ಲಿ ಖಂಡಿತವಾಗಿಯೂ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿಕೆ ನೀಡಿದ್ದರು. ಇನ್ನೊಂದೆಡೆ, ಪಾಕಿಸ್ಥಾನ ಕೂಡ ತನ್ನ ಪ್ರಯತ್ನ ಮುಂದುವರಿಸಿದ್ದು, ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಭಾರತದ ಮೇಲೆ ತನ್ನ ಪ್ರಭಾವ ಬೆಳೆಸಿ ಅಮೆರಿಕ ಒತ್ತಡ ಹೇರಬೇಕು ಎಂದು ಹೇಳಿದೆ.