Advertisement

Kashmir; ಈಗ ಲೆ| ಗವರ್ನರ್‌ಗೆ ಹೆಚ್ಚಿನ ಅಧಿಕಾರ!: ವಿಪಕ್ಷಗಳ ಆಕ್ರೋಶ

12:15 AM Jul 14, 2024 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆ ಎಂಬಂತೆ, ಜಮ್ಮು-ಕಾಶ್ಮೀರ ಮರುವಿಂಗಡನೆ ಕಾಯ್ದೆ-2019ಕ್ಕೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ತಂದಿದ್ದು, ಅದರಂತೆ ಇನ್ನು ಮುಂದೆ ಮುಖ್ಯಮಂತ್ರಿಗಿಂತ ಹೆಚ್ಚಿನ ಅಧಿಕಾರ ಲೆ| ಗವರ್ನರ್‌ಗೆ ಇರಲಿದೆ.

Advertisement

ಕಣಿವೆ ರಾಜ್ಯವು ಶೀಘ್ರದಲ್ಲೇ ಚುನಾವಣೆ ಎದುರಿಸಲಿರುವಂತೆಯೇ ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್‌, ಪಿಡಿಪಿ, ಎನ್‌ಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಣ್ಣಿಸಿವೆ. ಈ ತಿದ್ದುಪಡಿಗೆ ರಾಷ್ಟ್ರಪತಿ ಮುರ್ಮು ಅವರು ಅಂಕಿತ ಹಾಕುವುದರೊಂದಿಗೆ ಜು.12ರಿಂದಲೇ ಇದು ಜಾರಿಯಾದಂತಾಗಿದೆ.

ಸಂಪೂರ್ಣ ಸ್ವಾಯುತ್ತ ರಾಜ್ಯವಾಗಿದ್ದ ಜಮ್ಮು- ಕಾಶ್ಮೀರ, 2019ರ ಮರುವಿಂಗಡನೆ ಕಾಯ್ದೆಯ ಮೂಲಕ ಕೇಂದ್ರಾಡಳಿತ ಪ್ರದೇಶವಾಗಿ ಬದಲಾಗಿತ್ತು. ಈಗ ಅಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂತಿಮ ಅಧಿಕಾರವನ್ನು ಎಲ್‌ಜಿಗೆ ನೀಡಲಾಗಿದೆ.

ಲೆ|ಗವರ್ನರ್‌ಗೆ ಏನೇನು ಅಧಿಕಾರ?: ಹೊಸ ತಿದ್ದುಪಡಿಯ ಪ್ರಕಾರ, ಪೊಲೀಸ್‌, ಸಾರ್ವಜನಿಕ ಆದೇಶ, ಅಖೀಲ ಭಾರತ ಸೇವೆ, ಭ್ರಷ್ಟಾಚಾರ ನಿಗ್ರಹ ಬ್ಯೂರೋಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರಸ್ತಾವನೆಗಳಿಗೆ ಇನ್ನು ಮುಂದೆ ಹಣಕಾಸು ಇಲಾಖೆಯ ಅನುಮೋದನೆಗೂ ಮೊದಲು ಲೆ| ಗವರ್ನರ್‌ರ ಅನುಮತಿ ಪಡೆಯುವುದು ಕಡ್ಡಾಯ. ಪೊಲೀಸ್‌ ಇಲಾಖೆ, ಐಎಎಸ್‌, ಐಪಿಎಸ್‌ನಂತಹ ಅಖೀಲ ಭಾರತೀಯ ಸೇವೆಗೆ ಸೇರಿದ ಅಧಿಕಾರಿಗಳ ನೇಮಕ, ವರ್ಗಾವಣೆ ಪ್ರಸ್ತಾವನೆಯೂ ಮೊದಲು ಲೆ| ಗವರ್ನರ್‌ ಬಳಿಗೆ ಬರಬೇಕು. ವಿವಿಧ ಪ್ರಕರಣಗಳಲ್ಲಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದು ಲೆ| ಗವರ್ನರ್‌ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರಬೇಕಾಗುತ್ತದೆ.

ಅಡ್ವೊಕೇಟ್‌ ಜನರಲ್‌, ಇತರ ಕಾನೂನು ಅಧಿಕಾರಿ ಗಳ ನೇಮಕ, ಭ್ರಷ್ಟಾಚಾರ ನಿಗ್ರಹ ಮಂಡಳಿಗೆ ಸಂಬಂಧಿಸಿದ ನಿರ್ಧಾರಗಳನ್ನೂ ಲೆ| ಗವರ್ನರ್‌ ಅವರೇ ತೆಗೆದುಕೊಳ್ಳಲಿದ್ದಾರೆ. ಈ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಾದೇಶಿಕ ಸರಕಾರ ಮಾಡಿದರೂ ಅದನ್ನು ಬದಲಿಸುವ, ತಿರಸ್ಕರಿಸುವ ಅಧಿಕಾರ ಲೆ| ಗವರ್ನರ್‌ಗಿರುತ್ತದೆ. ಹಾಗೆಯೇ ಕಾರಾಗೃಹಕ್ಕೆ ಸಂಬಂಧಿಸಿದ ವಿಚಾರಣ ಇಲಾಖೆಯಲ್ಲೂ ಲೆ| ಗವರ್ನರ್‌ರಿಗೇ ಅಂತಿಮ ಅಧಿಕಾರವಿರುತ್ತದೆ.

Advertisement

ರಾಜ್ಯ ಸ್ಥಾನಮಾನ ಸದ್ಯಕ್ಕಿಲ್ಲ ಎಂಬ ಸುಳಿವು: ಕಾಂಗ್ರೆಸ್‌
ಲೆ| ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿರುವ ಕೇಂದ್ರ ಸರಕಾರದ ನಿರ್ಧಾರವು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್‌ ಬಣ್ಣಿಸಿದೆ. ಅಲ್ಲದೆ ಇದು ಜಮ್ಮು -ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನ ಕನಸಾಗಿಯೇ ಉಳಿಯಲಿದೆ ಎಂಬ ಸುಳಿವನ್ನು ಇದು ನೀಡಿದೆ. ಸದ್ಯಕ್ಕಂತೂ ರಾಜ್ಯ ಸ್ಥಾನಮಾನ ಸಿಗುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಕೇಂದ್ರ ಸರಕಾರ ಸ್ಪಷ್ಟಪಡಿಸಿದಂತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹೇಳಿದ್ದಾರೆ. ಕಾಂಗ್ರೆಸ್‌ ಮಾತ್ರವಲ್ಲದೆ ನ್ಯಾಶನಲ್‌ ಕಾನ್ಫರೆನ್ಸ್‌, ಅಪ್ನಿ ಪಾರ್ಟಿ, ಪಿಡಿಪಿ ಕೂಡ ಭಾರೀ ವಿರೋಧ ವ್ಯಕ್ತಪಡಿಸಿವೆ. ಇದು ಕಾಶ್ಮೀರದ ಜನರ ಸಂಪೂರ್ಣ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ. ಈ ನಿರ್ಧಾರವನ್ನು ಎಲ್ಲ ಪಕ್ಷಗಳು ಒಗ್ಗೂಡಿ ವಿರೋಧಿಸಬೇಕೆಂದು ಅಪ್ನಿ ಪಾರ್ಟಿ ಹೇಳಿದೆ. ಇದು ಜಮ್ಮು-ಕಾಶ್ಮೀರದ ಚುನಾಯಿತ ಸರಕಾರದ ಅಧಿಕಾರವನ್ನು ಕಿತ್ತುಕೊಳ್ಳುವ ಹುನ್ನಾರ ಇದು ಎಂದು ಪಿಡಿಪಿ ಹೇಳಿದೆ.

ಗುಮಾಸ್ತನ ನೇಮಕಕ್ಕೂ ಸಿಎಂ ಭಿಕ್ಷೆ ಬೇಡಬೇಕಾದ ಸ್ಥಿತಿ: ಒಮರ್‌ ಅಬ್ದುಲ್ಲಾ
ಮಾಜಿ ಸಿಎಂ, ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಒಮರ್‌ ಅಬ್ದುಲ್ಲಾ ಅವರು ಪ್ರತಿಕ್ರಿಯಿಸಿ, “ಕಾಶ್ಮೀರದ ಜನರಿಗೆ ಇದಕ್ಕಿಂತ ಹೆಚ್ಚಿನದ್ದನ್ನು ಪಡೆಯುವ ಅರ್ಹತೆಯಿದೆ. ಒಬ್ಬ ಗುಮಾಸ್ತನ ನೇಮಕಕ್ಕೂ ಲೆಫ್ಟಿನೆಂಟ್‌ ಗವರ್ನರ್‌ರ ಮುಂದೆ ಭಿಕ್ಷೆ ಬೇಡಬೇ ಕಾದಂಥ ಅಧಿಕಾರರಹಿತ, ರಬ್ಬರ್‌ ಸ್ಟಾಂಪ್‌ ಮುಖ್ಯಮಂತ್ರಿ ಬೇಕಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ ಕೇಂದ್ರದ ಈ ನಿರ್ಧಾರ ಜಮ್ಮು-ಕಾಶ್ಮೀರದಲ್ಲಿ ಸದ್ಯವೇ ಚುನಾವಣೆ ನಡೆಯುವ ಸುಳಿವನ್ನು ನೀಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next