ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದ ಗಿರೀಶ್ ಚಂದ್ರ ಮುರ್ಮು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಾಗ 2019 ಅಕ್ಟೋಬರ್ 31 ರಂದು ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಇವರು ಅಧಿಕಾರ ವಹಿಸಿಕೊಂಡಿದ್ದರು.
ತಡರಾತ್ರಿ ಈ ಬೆಳವಣಿಗೆ ನಡೆದಿದ್ದು ಒಂದು ವರ್ಷದ ಅವಧಿ ಪೂರ್ಣಗೊಳ್ಳಲು ಎರಡು ತಿಂಗಳು ಬಾಕಿಯಿರುವಾಗಲೇ ರಾಜಿನಾಮೆ ನೀಡಿದ್ದಾರೆ.
ಕಾಶ್ಮೀರದ ರಾಜ್ ಭವನದಿಂದ ಮುರ್ಮು ನಿರ್ಗಮಿಸುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾಗಿದ್ದು. ಅದಾಗ್ಯೂ ಪ್ರಸ್ತುತ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿರುವ ರಾಜೀವ್ ಮಹರ್ಷಿ ಇದೇ ವಾರ ನಿವೃತ್ತರಾಗಲಿದ್ದು. ಹೀಗಾಗಿ ಮಂದಿನ ಸಿಎಜಿ ತಾವೇ ಆಗಿರುವುದರಿಂದ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ನೀಡಿದ್ಧಾರೆ ಎನ್ನುತ್ತಿವೆ ಮೂಲಗಳು.
ಗಿರೀಶ್ ಚಂದ್ರ ಮುರ್ಮು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರವಾನಿಸಿದ್ದಾರೆ. ಆದರೆ, ಇನ್ನೂ ರಾಮನಾಥ್ ಕೋವಿಂದ್ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿಲ್ಲ ಎನ್ನಲಾಗುತ್ತಿದೆ.
ಮುರ್ಮು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿದ್ದರು. ಮಾತ್ರವಲ್ಲದೆ ಮೋದಿ ಪ್ರಧಾನಿಯಾದ ನಂತರ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಲ್ಲಿ ನಿಯೋಜನೆಗೊಂಡಿದ್ದರು.