ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಸಾಮಾನ್ಯ ಅದಿವೇಶನದಲ್ಲಿ ಮತ್ತೆ ಕಾಶ್ಮೀರ ವಿಷಯವನ್ನು ಕೆದಕಿರುವ ಪಾಕಿಸ್ಥಾನವನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕ್ಷುದ್ರ ರಾಜಕೀಯ ಲಾಭಕ್ಕಾಗಿ ಯಾವುದೇ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡು ಕಾಶ್ಮೀರ ವಿಷಯವನ್ನು ಎತ್ತುವುದು ಪಾಕಿಸ್ಥಾನಕ್ಕೆ ಅಭ್ಯಾಸವಾಗಿ ಹೋಗಿದೆ ಎಂದು ಭಾರತ ಪಾಕಿಗೆ ತಪರಾಕಿ ಕೊಟ್ಟಿದೆ.
ಸ್ವಯಂ ಆಡಳಿತೆಯ ಹಕ್ಕನ್ನು ರಾಷ್ಟ್ರದ ಭೌಗೋಳಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಕಡೆಗಣಿಸಿ ಪ್ರಯೋಗಿಸುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಭಾರತ ಪಾಕಿಸ್ಥಾನಕ್ಟೆ ಕಡ್ಡಿ ಮುರಿದ ರೀತಿಯಲ್ಲಿ ಉತ್ತರ ನೀಡಿದೆ.
ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರು “ಕಾಶ್ಮೀರಿ ಜನರ ಸ್ವಯಂ ಆಡಳಿತೆಯ ಹಕ್ಕನ್ನು ದಶಕಗಳಿಂದ ದಮನಿಸಿಕೊಂಡು ಬರಲಾಗಿದೆ” ಎಂದು ಹೇಳಿದುದಕ್ಕೆ ಪ್ರತಿಯಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಅವರು, “ಸ್ವಯಂ ಆಡಳಿತೆಯ ಹಕ್ಕು ದೇಶವೊಂದರ ಭೌಗೋಳಿಕ ಸಾರ್ವಭೌಮತೆಯನ್ನು ಕಡೆಗಣಿಸುವ ರೀತಿಯಲ್ಲಿ ಪ್ರಯೋಗಿಸಲಾಗದು” ಎಂದು ಹೇಳಿದರು.
ಕಾಶ್ಮೀರಿ ಜನರಿಗೆ ತಮ್ಮ ಸ್ವಯಂ ಆಡಳಿತೆಯ ಹಕ್ಕನ್ನು ಅಭಿವ್ಯಕ್ತಿಸುವ ಅವಕಾಶ ದೊರಕುವ ವರೆಗೆ ಕಾಶ್ಮೀರ ಪ್ರಶ್ನೆಯು ವಿಶ್ವಸಂಸ್ಥೆಯ ಅಜೆಂಡಾದಲ್ಲಿ ಇರುತ್ತದೆ ಎಂದು ಪಾಕ್ ರಾಯಭಾರಿ ಮಲೀಹಾ ಹೇಳಿದರು.
ವಿಶ್ವಸಂಸ್ಥೆಯ ಮೇಲುಸ್ತುವಾರಿಯಲ್ಲಿ ಕಾಶ್ಮೀರದಲ್ಲಿ ಜನರ ಸ್ವಯಂ ಆಡಳಿತೆಗೆ ಸಂಬಂಧಿಸಿದಂತೆ ಜನಮತಗಣನೆ ನಡೆಯಬೇಕಿದೆ ಎಂದು ಮಲೀಹಾ ಆಗ್ರಹಿಸಿದರು.
ಇದಕ್ಕೆ ಉತ್ತರವಾಗಿ ತ್ರಿಪಾಠಿ ಅವರು “ಪಾಕಿಸ್ಥಾನವು ಈ ಅಧಿವೇಶನದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಅನಪೇಕ್ಷಿತ ಉಲ್ಲೇಖ ಮಾಡಿರುವುದನ್ನು ನಾವು ತಿರಸ್ಕರಿಸುತ್ತೇವೆ ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯಅಂಗ ಎಂಬುದನ್ನು ಪುನರಪಿ ಸಾರುತ್ತೇವೆ’ ಎಂದು ಖಡಕ್ ಮಾತುಗಳಲ್ಲಿ ಹೇಳಿದರು.