ರಾಮದುರ್ಗ: ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯದ ಸತ್ಯ ಘಟನೆ ಆಧಾರಿಸಿ ತಯಾರಿಸಲಾದ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಎಲ್ಲರೂ ನೋಡಬೇಕಾದ ಅವಶ್ಯಕತೆ ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಕೃಷ್ಣಾ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 1990 ರ ದಶಕದಲ್ಲಿ ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯದ ಸತ್ಯ ಈಗ ಚಲನಚಿತ್ರದ ಮೂಲಕ ಬಹಿರಂಗಗೊಂಡಿದೆ ಎಂದು ಹೇಳಿದರು.
ಈ ಚಲನಚಿತ್ರದ ಬಗ್ಗೆ ವಿರೋಧ ಪಕ್ಷಗಳು ಅಪಸ್ವರ ಎತ್ತಿದರೂ ಸತ್ಯವನ್ನು ಮುಚ್ಚಿಡಲಾಗದು. ಪಂಡಿತರ ಅಂದಿನ ಪರಿಸ್ಥಿತಿ ನೋಡಿದರೆ ಕರುಳು ಕಿವುಚಿ ಬರುತ್ತದೆ. ಅಮಾನುಷವಾಗಿ ಹಿಂದೂ ಪಂಡಿತರ ಹತ್ಯೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಕೃತ್ಯಗಳು ನಡೆದರೂ ಕೆಲ ಧರ್ಮ ಓಲೈಕೆಯ ರಾಜಕಾರಣಿಗಳು ಸತ್ಯ ಒಪ್ಪುವ ಮನಸ್ಥಿತಿಯಲ್ಲಿಲ್ಲ. ಹಿಂದೂಗಳು ತಪ್ಪದೇ ಈ ಚಿತ್ರವನ್ನು ನೋಡಲೇಬೇಕು ಎಂದರು.
ತಾಲೂಕಿನ ಜನತೆಯ ಅನುಕೂಲಕ್ಕಾಗಿ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ 3 ಗಂಟೆಯ ಒಂದು ಪ್ರದರ್ಶನವನ್ನು ಉಚಿತವಾಗಿ ತೋರಿಸಲಾಗುತ್ತಿದ್ದು, ಸಾರ್ವಜನಿಕರು ಸತ್ಯ ಆಧಾರಿತ ಈ ಚಿತ್ರವನ್ನು ನೋಡುವಂತೆ ಕರೆ ನೀಡಿದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಇಲ್ಲಿಯವರೆಗೂ ಜನರಿಗೆ ಮಂಕುಬೂದಿ ಎರಚಿತ್ತಾ ಬಂದಿರುವ ಕಾಂಗ್ರೆಸ್ ಈಗ ಸತ್ಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸದಾ ಒಂದು ಜಾತಿಯನ್ನು ಓಲೈಸಿಕೊಂಡು ಹಿಂದುಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಉದಾಸೀನತೆ ತೋರುವ ಅವರ ಕೃತ್ಯಗಳು ಇಂತಹ ಚಿತ್ರಗಳ ಮೂಲಕ ಬಹಿರಂಗವಾಗುತ್ತಿವೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ರಾಜೇಶ ಬೀಳಗಿ, ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಸದಸ್ಯರಾದ ನಾಗರಾಜ ಕಟ್ಟಿಮನಿ, ಚಂದ್ರಕಾಂತ ಹೊಸಮನಿ, ಮಾಜಿ ಜಿ.ಪಂ ಸದಸ್ಯ ಮಾರುತಿ ತುಪ್ಪದ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹಳ್ಳಿ, ಮುಖಂಡರಾದ ಪ್ರಭಾಕರ ಬಣಗಾರ, ಕುಮಾರ ಈಳಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.