ನವದೆಹಲಿ:ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್ ಮೂಲಕ ಪಾಕಿಸ್ತಾನ ಸೇನಾ ಬೆಂಬಲಿತ ಉಗ್ರರು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವುದನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತವಾಗಿ ಛೀಮಾರಿ ಹಾಕಿಸಿಕೊಳ್ಳುತ್ತಿರುವ ಪಾಕಿಸ್ತಾನ ಉಗ್ರರಿಗೆ ಬೆಂಬಲ ನೀಡುವುದನ್ನು ಮುಂದುವರಿಸಿದೆ. ಉತ್ತರ ಕಾಶ್ಮೀರದ ಕೇರನ್ ಸೆಕ್ಟರ್ ನಲ್ಲಿ ನಿಯೋಜಿಸಲಾಗಿರುವ ಭಾರತೀಯ ಸೇನಾಪಡೆ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡುವ ಭಯೋತ್ಪಾದಕರ ಕೃತ್ಯವನ್ನು ವಿಫಲಗೊಳಿಸಿದೆ. ನಾಲ್ಕು ಎಕೆ 74, ಎಂಟು ಮ್ಯಾಗಝೈನ್ಸ್, 240 ಎಕೆ 47 ರೈಫಲ್ ನ ಮದ್ದುಗುಂಡನ್ನು ವಶಪಡಿಸಿಕೊಂಡಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಕಳುಹಿಸಿರುವ ಶಸ್ತ್ರಾಸ್ತ್ರ ಸಾಗಾಟದ ಬಗ್ಗೆ ನಮ್ಮ ಸೇನಾಪಡೆ ಪತ್ತೆ ಹಚ್ಚಿತ್ತು. ಇದರಿಂದಾಗಿ ಪಾಕಿಸ್ತಾನದ ಉದ್ದೇಶ ಏನು ಎಂಬುದು ಸ್ಪಷ್ಟವಾಗಿದೆ. ಉಗ್ರರಿಗೆ ಬೆಂಬಲ ನೀಡುವ ಮೂಲಕ ನಾವು ಅವರ ವಿರುದ್ಧ ಹೋರಾಡುತ್ತಲೇ ಇರಬೇಕು ಎಂಬ ಉದ್ದೇಶ ಪಾಕ್ ಹೊಂದಿದೆ ಎಂದು ಹೇಳಿದೆ.
ಇದನ್ನೂ ಓದಿ:ಗಿಲ್, ಕಾರ್ತಿಕ್ ಅಮೋಘ ಅರ್ಧಶತಕ: ಪಂಜಾಬ್ ಗೆ 165 ರನ್ ಗಳ ಗುರಿ ನೀಡಿದ ಕೋಲ್ಕತ್ತಾ !
ಶುಕ್ರವಾರ ರಾತ್ರಿ ಗಡಿ ನಿಯಂತ್ರಣ ರೇಖೆ ಪ್ರದೇಶದ ಕಿಶನ್ ಗಂಗಾ ನದಿ ಪಾತ್ರದ ಬಳಿ ಚಲನವಲನವನ್ನು ಸೇನಾಪಡೆ ಪತ್ತೆಹಚ್ಚಿತ್ತು. ಕೂಡಲೇ ಜಂಟಿ ಕಾರ್ಯಾಚರಣೆ ನಡೆಸಲು ಸೇನಾಪಡೆ ಸೂಚನೆ ನೀಡಿತ್ತು. ರಾತ್ರಿ 10ಗಂಟೆಗೆ ಗಡಿ ಗಸ್ತು ತಂಡ ಸ್ಥಳಕ್ಕೆ ಹೋದಾಗ 2, 3 ಉಗ್ರರು ಕೆಲವು ಶಸ್ತ್ರಾಸ್ತ್ರಗಳನ್ನು ರಬ್ಬರ್ ಟ್ಯೂಬ್ ಒಳಗೆ ಇಟ್ಟು ಸಾಗಿಸಲು ಯತ್ನಿಸುತ್ತಿರುವುದು ಕಂಡು ಬಂದಿತ್ತು.
ಕಿಶನ್ ಗಂಗಾ ನದಿ ಪಾತ್ರದ ಸಮೀಪ ಸಿಕ್ಕ ಎರಡು ಬ್ಯಾಗ್ ಗಳಲ್ಲಿ ಎಕೆ 74 ರೈಫಲ್ಸ್, 240 ಎಕೆ ರೈಫಲ್ ನ ಮದ್ದುಗುಂಡು ದೊರಕಿರುವುದಾಗಿ ಸೇನಾಮೂಲಗಳು ತಿಳಿಸಿವೆ.