Advertisement

ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆದ “ಕುಂದಾಪುರ’ದ ಕಾಶೀನಾಥ್‌

11:03 AM Jan 19, 2018 | Team Udayavani |

ಕುಂದಾಪುರ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕರಾಗಿದ್ದ ಕಾಶೀನಾಥ್‌ ಅವರು ಮೂಲತಃ ಕುಂದಾಪುರದ ಕೋಣಿ ಯಲ್ಲಿ ಹುಟ್ಟಿದ್ದು, ಕೋಟೇಶ್ವರದ ಗೋಪಾಡಿಯ ಬೆಳ್ತಕ್ಕಿ ಮನೆಯಲ್ಲಿ ಅವರ ಮೂಲ ಮನೆಯಿದೆ. ಕ್ಯಾನ್ಸರ್‌ ಕಾಯಿಲೆ ಯಿಂದ ಬಳಲುತ್ತಿದ್ದ ಕಾಶೀನಾಥ್‌ (63) ಅವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಇಹಲೋಕ ತ್ಯಜಿಸಿದ್ದಾರೆ.
ಕೋಟೇಶ್ವರದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾಶೀನಾಥ್‌, ಬಾಲ್ಯದ ಕೆಲಕಾಲ ಮಾತ್ರ ಕೋಣಿಯಲ್ಲಿ ವಾಸವಿದ್ದು, ಬಳಿಕ ಇಲ್ಲಿರುವ ಮನೆ, ಜಾಗವನ್ನು ಬೇರೆಯ ವರಿಗೆ ಮಾರಿ ಬೆಂಗಳೂರಿನಲ್ಲಿ ನೆಲೆಸಿದ್ದರು. 

Advertisement

ಕುಟುಂಬದ ವಿವರ: ತಂದೆ ಜಿ. ವಾಸುದೇವ ರಾವ್‌ ಪ್ರಾರಂಭದಲ್ಲಿ ಕುಂದಾಪುರದಲ್ಲಿ ಹೊಟೇಲ್‌ ಉದ್ಯಮ, ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಆಬಳಿಕ ಬೆಂಗಳೂರಿನಲ್ಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತಾಯಿ ಸರಸ್ವತಿ. ಅಣ್ಣ ಸತ್ಯನಾರಾಯಣ, ತಮ್ಮಂದಿರು ದತ್ತಾತ್ರೇಯ, ರವಿ, ಉಮಾಪತಿ, ತಂಗಿ ಗಾಯತ್ರಿ, ಪತ್ನಿ ಚಂದ್ರಪ್ರಭಾ, ಪುತ್ರ, ನಟ ಅಲೋಕ್‌ (ಅಭಿಮನ್ಯು), ಪುತ್ರಿ ಅಮೃತವರ್ಷಿಣಿ ದುಬಾೖಯಲ್ಲಿದ್ದಾರೆ.

ಬಾವಿ ನೀರು ಕೊಂಡು ಹೋಗಿದ್ದರು:  ಕೆಲ ವರ್ಷಗಳ ಹಿಂದೆ ಬಸ್ರೂರಿನಲ್ಲಿ ಸಮ್ಮಾನ ಸ್ವೀಕರಿಸಲು ಬಂದಿದ್ದಾಗ ಕಾಶೀನಾಥ್‌ ತಮ್ಮ ಮೂಲ ಮನೆಗೆ ಬಂದಿದ್ದು, ಮನೆಯವ ರೊಂದಿಗೆ ಮಾತನಾಡಿ, ಅವರಿದ್ದಾಗ ಇದ್ದ ಬಾವಿಯ ನೀರು ಸೇದಿ 2 ಬಾಟಲಿ ನೀರು ತೆಗೆದುಕೊಂಡು ಹೋಗಿದ್ದರು. ಆಗಿದ್ದ ತುಳಸಿ ಕಟ್ಟೆ, ಹತ್ತಿ ಮರ ಈಗಲೂ ಹಾಗೆಯೇ ಇದೆ.

80-90ರ ದಶಕದಲ್ಲಿ ಕನ್ನಡ ಚಿತ್ರರಂಗದ ದಿಸೆಯನ್ನು ಬದಲಿಸಿದ ಕಾಶೀನಾಥ್‌, ಕಡಿಮೆ ವೆಚ್ಚದಲ್ಲಿ ಪ್ರೇಕ್ಷಕರನ್ನು ಮೆಚ್ಚುವ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆಯಿದೆ. ಹಾಸ್ಯ, ಸಿಂಪಲ್‌ ಡೈಲಾಗ್‌, ಡಬಲ್‌ ಮೀನಿಂಗ್‌ ಚತುರ, ಹದಿಹರೆಯದ ಮನಸ್ಸುಗಳ ಜೀವನಾನುಭವನ್ನು ಅಷ್ಟೇ ಚೆನ್ನಾಗಿ ಕಟ್ಟಿ ಕೊಡುವ ಮೂಲಕ ಹೊಸ ಟ್ರೆಂಡ್‌ ಹುಟ್ಟುಹಾಕಿದ ಕಾಶೀ 43 ಸಿನೆಮಾಗಳಲ್ಲಿ ನಟಿಸಿದ್ದು, 11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.

ಕರಾವಳಿಗರಿಗೆ ಪ್ರಾಶಸ್ತ್ಯ: ಕಾಶೀನಾಥ್‌ ಅನೇಕ ಪ್ರತಿಭಾನ್ವಿತರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕರಾವಳಿಗರಿಗೆ ಹೆಚ್ಚಿನ ಮಣೆ ಹಾಕುತ್ತಿದುದ್ದು ವಿಶೇಷ. ನಟ, ನಿರ್ದೇಶಕರಾಗಿ ಹೆಸರು ಗಳಿಸಿದ ಕುಂದಾಪುರ ಸಮೀಪದ ತೆಕ್ಕಟ್ಟೆಯ ಉಪೇಂದ್ರ, ಸಂಗೀತ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಟ್ಲ ಮೂಲದ ವಿ. ಮನೋಹರ್‌, 7 ಸಿನೆಮಾಗಳಲ್ಲಿ ಅವರೊಂದಿಗೆ ನಟಿಸಿ, 3 ಚಿತ್ರಗಳಲ್ಲಿ ಸಹಕರಿಸಿದ ಉಪ್ಪುಂದದ ಓಂ ಗಣೇಶ್‌, ನಟಿ ಭವ್ಯಾ ಹೀಗೆ ಅನೇಕ ಕರಾವಳಿಗರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

Advertisement

ಕುಂದಗನ್ನಡದ ಮೇಲೆ ಒಲವು: ಚಿಕ್ಕಂದಿನಲ್ಲೇ ಬೆಂಗಳೂರಿಗೆ ಹೋದರೂ ತಾಯಿ ಕುಂದಗನ್ನಡದಲ್ಲೇ ಮಾತನಾಡುತ್ತಿದ್ದರಿಂದ ಕಾಶೀನಾಥ್‌ಗೂ ಕುಂದಗನ್ನಡದ ಬಗ್ಗೆ ವಿಶೇಷ ಒಲವು, ಅಭಿಮಾನವಿತ್ತು. ಹೊಸ ದಾಖಲೆ ಸೃಷ್ಟಿಸಿದ “ಅನುಭವ’, “ಅನಂತನ ಆವಾಂತರ’ (ಚಿತ್ರದ ಹೆಚ್ಚಿನ ಭಾಗ ಕುಂದಾಪುರ ಭಾಗದಲ್ಲೇ ಚಿತ್ರೀಕರಣವಾ ಗಿತ್ತು.) ಇನ್ನೂ ಹಲವು ಚಿತ್ರಗಳಲ್ಲಿ ಕುಂದಾಪುರ ಕನ್ನಡ
ಬಳಸಿಕೊಂಡಿದ್ದಾರೆ. ಇಲ್ಲಿನ ಖಾದ್ಯಗಳಿಗೂ ಮನಸೋತಿ ದ್ದರು. ಅವರಿಗೆ ಕಡುಬು, ಕೇಸುವಿನ ಎಲೆ ಪಲ್ಯ ಇಷ್ಟವಂತೆ.

ವಾರದ ಹಿಂದೆ ಬಂದಿದ್ದ ಪುತ್ರ, ಸೊಸೆ: ಕಾಶೀನಾಥ್‌ ಅವರು ಹುಟ್ಟಿದ್ದು ಕೋಣಿಯಲ್ಲಾದರೂ ಕೋಟೇಶ್ವರ ಸಮೀಪದ ಗೋಪಾಡಿಯ ಬೆಳ್ತಕ್ಕಿ ಮನೆಯಲ್ಲಿ ಅವರ ತಂದೆ, ಕುಟುಂಬದ ಮೂಲ ಮನೆ ಇದೆ. ಇಲ್ಲಿ ಅವರ ಅಜ್ಜ, ಅಪ್ಪ, ಕಾಶೀನಾಥ್‌ ಅವರೆಲ್ಲ ಬಾಲ್ಯ ಕಳೆದ ಹಳೆ ಮನೆಯ ಗೋಡೆ ಮಾತ್ರ ಈಗ ಇದೆ. ಇಲ್ಲಿ ಅವರ ಕುಟುಂಬದ ನಾಗಬನವಿದ್ದು, ಕಳೆದ ಗುರುವಾರ ಕಾಶೀನಾಥ್‌ ಪುತ್ರ ಅಭಿಮನ್ಯು ಹಾಗೂ ಸೊಸೆ ಬಂದು ನಾಗಬನಕ್ಕೆ ಪೂಜೆ ಸಲ್ಲಿಸಿ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next