Advertisement

ಗರಿಕೇಮಠ ಅರ್ಕಗಣಪತಿ ಸನ್ನಿಧಿ: ಕಾಶೀ ಗಂಗಾರತಿ

12:48 AM Jan 23, 2023 | Team Udayavani |

ಕೋಟ: ಕಾಶಿಯಲ್ಲಿ ಸೂರ್ಯಾಸ್ತದ ಬಳಿಕ ಗಂಗಾ ನದಿ ತೀರದಲ್ಲಿ ಭಕ್ತಿಪರವಶವಾಗಿ ನಡೆಯುವ ಗಂಗಾ ಆರತಿಯನ್ನು ಹೋಲುವ ಕಾಶೀ ಗಂಗಾ ಮಹಾರತಿ ಧಾರ್ಮಿಕ ಕಾರ್ಯಕ್ರಮ ಗರಿಕೇಮಠದ ಅರ್ಕಗಣಪತಿ ಸನ್ನಿಧಿಯಲ್ಲಿ ರವಿವಾರ ಸಂಜೆ ನೆರವೇರಿತು.

Advertisement

ಈ ಕಾರ್ಯಕ್ರಮಕ್ಕಾಗಿ ಗರಿಕೇಮಠದಲ್ಲಿ ವಿಶೇಷ ರೀತಿಯಲ್ಲಿ ಕೃತಕ ಗಂಗಾ ತಟವನ್ನು ಸೃಷ್ಟಿಸಲಾಗಿತ್ತು. ವಿಶೇಷವಾಗಿ ಹಾಕಲಾದ ಬೃಹತ್‌ ವೇದಿಕೆಯಲ್ಲಿ ಪುರೋಹಿತರಿಂದ ಧಾರ್ಮಿಕ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಕಾಶಿಯಿಂದ ತಂದ ಪವಿತ್ರ ಗಂಗಾ ಜಲವನ್ನು ಕೃತಕ ಗಂಗಾತಟಕ್ಕೆ ಅರ್ಪಿಸುವ ಮೂಲಕ ಗಂಗಾ ಪೂಜೆ ನೆರವೇರಿಸಿದರು.

ಅನಂತರ ಕ್ಷೇತ್ರದ ಭಕ್ತರು ಗಂಗಾರತಿ ಸಂಕಲ್ಪ ನೆರವೇರಿಸಿದರು. ವೇದ- ಮಂತ್ರ ಘೋಷದೊಂದಿಗೆ ವಾರಣಾಸಿಯ ದಶಾಶ್ವಮೇಧಘಾಟ್‌ನ ಪ್ರಸಿದ್ಧ ಗಂಗಾರತಿ ತಂಡವಾದ ಪಂ. ಹೇಮಂತ ಜೋಶಿಯವರ ನೇತೃತ್ವದಲ್ಲಿ ಗಂಗಾರತಿ ನೆರವೇರುತ್ತಿದ್ದಂತೆ ಸಾವಿರಾರು ಮಂದಿ ಭಕ್ತರು ಪುಳಕಿತಗೊಂಡು ಹರ- ಹರ ಮಹಾದೇವ ಘೋಷದೊಂದಿಗೆ ಗಂಗಾರತಿಗೆ ನಮಿಸಿದರು.

ವಿವಿಧ ಗಣ್ಯರು, ಸಾವಿರಾರು ಮಂದಿ ಭಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕ್ಷೇತ್ರದ ಮುಖ್ಯಸ್ಥ ಜಿ.ರಾಮಪ್ರಸಾದ್‌ ಅಡಿಗ ನೇತೃತ್ವ ವಹಿಸಿದ್ದರು.

ಗಂಗೆಯೇ ಭಕ್ತರಲ್ಲಿಗೆ: ಎಡನೀರು ಶ್ರೀ
ಕಾಶಿಗೆ ಹೋಗಿ ಗಂಗೆಯನ್ನು ಸಂದರ್ಶಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಇಂದು ಕಾಶೀ ಗಂಗಾ ಮಹಾರತಿ ಕಾರ್ಯಕ್ರಮ ಮೂಲಕ ಕಾಶಿಯೇ ಗರಿಕೇಮಠಕ್ಕೆ ಬಂದಂತಾಗಿದೆ ಎಂದು ಕಾರ್ಯಕ್ರಮದಲ್ಲಿ ಎಡನೀರು ಮಠದ ಶೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ತಿಳಿಸಿದರು. ಇಡಗುಂಜಿ ಕ್ಷೇತ್ರದ ಪ್ರಧಾನ ಅರ್ಚಕ ವಿ| ವಿಷ್ಣು ಎಲ್‌. ಭಟ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next