ಭಾರತೀಯರು ತಮ್ಮ ಕೇಶಕ್ಕೆ ನೀಡುವ ಮಹತ್ವದ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಸಮಾಜದಲ್ಲಿ ಶ್ರೀಮಂತ ವರ್ಗ ಹಾಗೂ ಮಧ್ಯಮ ವರ್ಗಗಳಿಗೆ ಮಾತ್ರವೇ ಎಟುಕುವಂತಿದ್ದ ಶಾಂಪೂವನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಿದ ಶ್ರೇಯ, ಕ್ಯಾವಿನ್ ಕೇರ್ ಸಂಸ್ಥೆಯದ್ದು. ದಶಕಗಳ ಹಿಂದೆ ಅದು ತನ್ನ 1 ರೂ. ಬೆಲೆಯ “ಚಿಕ್’ ಶಾಂಪೂ ಪ್ಯಾಕೆಟ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಅದುವರೆಗೂ ಐಷಾರಾಮಿ ವಸ್ತು ಎಂದೇ ಬಿಂಬಿತವಾಗಿದ್ದ ಶಾಂಪೂ ಕುರಿತಾದ ಅಭಿಪ್ರಾಯವನ್ನೇ ಸಂಸ್ಥೆ, ಜಾಹೀರಾತು ಸರಣಿಗಳ ಮೂಲಕ ಬದಲಿಸಿಬಿಟ್ಟಿತ್ತು. ಪಾಶ್ಚಿಮಾತ್ಯರಿಗಿಂತ ಹೆಚ್ಚಿನ ಪ್ರಮಾಣದ ಶಾಂಪೂ ಭಾರತದಲ್ಲಿ ಖರ್ಚಾಗುತ್ತದೆ ಎಂಬ ಮಾಹಿತಿ, ಸಂಶೋಧನೆಯೊಂದರಿಂದ ಹೊರಬಿದ್ದಿತ್ತು. ಅದಕ್ಕೆ, ಭಾರತೀಯರ ಕೇಶ ಉದ್ದವಿರುವುದೇ ಕಾರಣವಿರಬಹುದು ಎಂಬುದೊಂದು ತರ್ಕ. ಉತ್ತರ ಭಾರತೀಯರು ಪ್ಯಾಕೆಟ್‌ಗಳಿಗಿಂತ ಹೆಚ್ಚಾಗಿ ಬಾಟಲಿ ಶಾಂಪೂಗಳನ್ನು ಖರೀದಿಸಲು ಇಷ್ಟಪಟ್ಟರೆ, ದಕ್ಷಿಣಭಾರತೀಯರು ಪ್ಯಾಕೆಟ್‌ಗಳು ಪ್ರಿಯರು. ಅಂದ ಹಾಗೆ, ಶಾಂಪೂವಿನ ಆವಿಷ್ಕಾರವಾಗಿದ್ದು ಭಾರತದಲ್ಲಿ ಎಂಬ ಸಂಗತಿ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. “ಶಾಂಪೂ’ ಎಂಬ ಪದದ ಮೂಲವೇ ಸಂಸ್ಕೃತದ “ಚಂಪೊ’. ಅದರ ಅರ್ಥ ಮಸಾಜ್ ಮಾಡುವುದು ಎಂದಾಗುತ್ತದೆ.