Advertisement
ನಗರಸಭೆಯ ವಿದ್ಯಾಭ್ಯಾಸ ಸಂಸ್ಥೆಗಳ ಪ್ರಾಥಮಿಕ ಸೌಕರ್ಯಗಳು, ಗುಣಮಟ್ಟ ಉತ್ತಮಗೊಳಿಸಲು ಮುತುವರ್ಜಿ ವಹಿಸಲಿದೆ. ಸರ್ವಶಿಕ್ಷಾ ಅಭಿಯಾನ್ ಯೋಜನೆಗೆ 20 ಲಕ್ಷ ರೂ. ನೀಡಲು ಉದ್ದೇಶಿಸಿದೆ. ಹೊಸ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿಗಳಿಗೆ ಅಗತ್ಯದ ಸಹಾಯ ನೀಡಲಾಗುವುದು. ಅಲ್ಲದೆ ಉತ್ತಮ ಗುಣ ಮಟ್ಟದ ಶಾಲೆಗಳಿಗೆ ಪ್ರೋತ್ಸಾಹ ಯೋಜನೆಗಳನ್ನು ರೂಪಿಸಲಾಗುವುದು. ವಿದ್ಯಾಲಯಗಳಿಗೆ ಅಗತ್ಯದ ಪೀಠೊಪ ಕರಣಗಳು, ಕಂಪ್ಯೂಟರ್‌ಗಳು ಮತ್ತು ಅಗತ್ಯದ ಉಪಕರಣಗಳನ್ನು ನೀಡಲಾಗುವುದು. ನಗರಸಭೆಗೆ ಹಸ್ತಾಂತರಿಸಿದ ವಿದ್ಯಾ ಲಯಗಳ ರಕ್ಷಣೆಗೆ ಸುತ್ತುಗೋಡೆಯನ್ನು ನಿರ್ಮಿಸಲು 30 ಲಕ್ಷ ರೂ. ಕಾದಿರಿಸಲಾಗಿದೆ. ಕುಡಿಯುವ ನೀರು ವ್ಯವಸ್ಥೆಗೆ ಅಗತ್ಯದ ಕ್ರಮ ತೆಗೆದುಕೊಳ್ಳಲಾಗುವುದು. ಬೋರ್‌ವೆಲ್ ಕಾಮಗಾರಿಯೊಂದಿಗೆ ಬಾವಿ ರಿಚಾರ್ಜ್ ಮಾಡಲಾಗುವುದು. ನಗರದ ಪ್ರಧಾನ ಒಳಚರಂಡಿಗಳನ್ನು ಸಂಯೋಜಿಸಿ ಸಮಗ್ರ ಒಳ ಚರಂಡಿ ಯೋಜನೆ ರೂಪಿಸಲಾಗುವುದು. ನಾಯಕ್ಸ್ ರಸ್ತೆಯಲ್ಲಿ ಒಳ ಚರಂಡಿ ಕಾಮಗಾರಿಯ ಟೆಂಡರ್ ನಡೆದಿದೆ. ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು.
ನಗರಸಭೆಯ 38 ವಾರ್ಡ್‌ಗಳಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ತಲಾ 8 ಲಕ್ಷ ರೂ. ವ್ಯಯಿಸಲಾಗುವುದು. ಇದಕ್ಕಾಗಿ 3.04 ಕೋಟಿ ರೂ. ಕಾದಿರಿಸಲಾಗಿದೆ. ಕೃಷಿ ವಲಯದ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ಯೋಜನೆಯಲ್ಲಿ 30 ಲಕ್ಷ ರೂ. ಕಾದಿರಿಸಲಾಗಿದೆ. ಭತ್ತ, ತೆಂಗು ಕೃಷಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುವುದು. ಮೀನು ಕಾರ್ಮಿಕರ ಕ್ಷೇಮಗಳಿಗೆ ಅಗತ್ಯದ ಕ್ರಮ, ಮೀನು ಕಾರ್ಮಿಕರ ಮಕ್ಕಳಿಗೆ ಅಗತ್ಯದ ಪೀಠೊಪಕರಣಗಳು, ಮೀನು ಕಾರ್ಮಿಕರಿಗೆ ಬಲೆಗಳು, ಬೋಟ್‌ಗಳನ್ನು ನೀಡಲಾಗುವುದು. ಮನೆ ದುರಸ್ತಿಗೆ ಸಹಾಯ ನೀಡಲಾಗುವುದು. ಪರಿಶಿಷ್ಟ ವರ್ಗ ಅಭಿವೃದ್ಧಿ
ನಗರದಲ್ಲಿ ವಾಸಿಸುವ 11 ಪರಿಶಿಷ್ಟ ವರ್ಗ ಕುಟುಂಬಗಳ ಅಭಿವೃದ್ಧಿಗೆ ಮೊತ್ತವನ್ನು ಕಾದಿರಿಸಲಾಗಿದೆ. ನಗರಸಭೆಯ ಪರಿಶಿಷ್ಟ ಜಾತಿ ಕಾಲನಿಗಳಿಗೆ ರಸ್ತೆ, ಕಾಲುದಾರಿ, ಚರಂಡಿ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು. ಪರಿಶಿಷ್ಟ ಜಾತಿ ಕುಟುಂಬಗಳಿಗೆ ವಿವಾಹ ಧನ ಸಹಾಯ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಪೀಠೊಪಕರಣ, ಕಂಪ್ಯೂಟರ್ ಸೌಲಭ್ಯ ನೀಡಲಾಗುವುದು.
Related Articles
ಯುವತಿಯರಿಗೆ ಸ್ವೋದ್ಯೋಗ ಉದ್ದೇಶದೊಂದಿಗೆ “ಪವರ್ ಲಾಂಡ್ರಿ ಯೂನಿಟ್’ ಆರಂಭಿಸಲಾಗುವುದು. ಇದಕ್ಕೆ 25 ಲಕ್ಷ ರೂ. ಖರ್ಚು ಅಂದಾಜಿಸಲಾಗಿದೆ. ಮಹಿಳೆಯರಿಗಾಗಿ ಶಿಲಾಡ್ಜ್ ನಿರ್ಮಿಸಲಾಗುವುದು. ಇದಕ್ಕಾಗಿ 35 ಲಕ್ಷ ರೂ. ಕಾದಿರಿಸಲಾಗಿದೆ. ಸ್ವೋದ್ಯೋಗ ಗುರಿಯೊಂದಿಗೆ “ಗ್ರೀನ್ ಪ್ರೊಟೋಕೋಲ್’ ಪ್ರಕಾರ ಯೋಜನೆ ರೂಪಿಸಲಾಗುವುದು. ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ, ಮೀನು ಮಾರುಕಟ್ಟೆ, ಜನರಲ್ ಆಸ್ಪತ್ರೆ ಪರಿಸರ, ರೈಲ್ವೇ ನಿಲ್ದಾಣ ಪರಿಸರ, ಕರಂದಕ್ಕಾಡ್, ಕೆಎಸ್‌ಆರ್‌ಟಿಸಿ ಜಂಕ್ಷನ್‌ಗಳಲ್ಲಿ ಶುಚಿತ್ವ ಮತ್ತು ಸುರಕ್ಷೆಯ ಗುರಿಯಿರಿಸಿ ಸಿಸಿಟಿವಿ ಕೆಮರಾಗಳನ್ನು ಸ್ಥಾಪಿಸಲು 8 ಲಕ್ಷ ರೂ. ವ್ಯಯಿಸಲಾಗುವುದು.
Advertisement
ನಗರಾಭಿವೃದ್ಧಿ ಯೋಜನೆ ನಗರದ ಪ್ರಧಾನ ರಸ್ತೆಗಳಲ್ಲಿ ದಿಕ್ಸೂಚಿ ಫಲಕಗಳನ್ನು ಸ್ಥಾಪಿಸುವುದಕ್ಕೆ ಈಗಾಗಲೇ ಟೆಂಡರ್ ನಡೆದಿದ್ದು ಕೆಲಸ ಕಾರ್ಯ ಪ್ರಗತಿಯಲ್ಲಿದೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ದಿಕ್ಸೂಚಿ ಫಲಕಗಳ ಸ್ಥಾಪನೆಗೆ 2018-19 ವರ್ಷದ ಬಜೆಟ್‌ನಲ್ಲಿ 5 ಲಕ್ಷ ರೂ. ಕಾದಿರಿಸಲಾಗಿದೆ. ಮುನಿಸಿ ಪಲ್ ಶಾಪಿಂಗ್ ಕಾಂಪ್ಲೆಕ್ಸ್ ಮಾರ್ಕೆಟ್ ನಿರ್ಮಾಣ, ಮುನಿಸಿಪಲ್ ಗೆಸ್ಟ್ ಹೌಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶಾಪಿಂಗ್ ಕಾಂಪ್ಲೆಕ್ಸ್- ಮಾರ್ಕೆಟ್ ಕಟ್ಟಡಕ್ಕೆ 3 ಕೋಟಿ ರೂ. ಮತ್ತು ಗೆಸ್ಟ್ ಹೌಸ್ ನಿರ್ಮಾಣಕ್ಕೆ 30 ಲಕ್ಷ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಪ್ರಸ್ತುತ ವರ್ಷ ಕಾಂಪ್ಲೆಕ್ಸ್‌ಗೆ 1 ಕೋಟಿ ರೂ., ಗೆಸ್ಟ್ ಹೌಸ್‌ಗೆ 15 ಲಕ್ಷ ರೂ. ಕಾದಿರಿಸಲಾಗಿದೆ. ಆರೋಗ್ಯ ಸಮಗ್ರ ಆರೋಗ್ಯ ಗುರಿಯೊಂದಿಗೆ ಜನರಲ್ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ಹೋಮಿಯೋ ಆಸ್ಪತ್ರೆ, ನಗರ ಸಭಾ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗುವುದು. ಜನರಲ್ ಆಸ್ಪತ್ರೆಯ ಕಾಶ್ವಲಿಟಿ ಬ್ಲಾಕ್ ಕಾಮಗಾರಿಗೆ 17,37,000 ರೂ. ಕಾದಿರಿಸಲಾಗಿದೆ. ಶತಮಾನದ ಹಿಂದಕ್ಕೆ ಕೊಂಡೊಯ್ದ ಬಜೆಟ್ : ಪಿ. ರಮೇಶ್
2018-19ನೇ ಸಾಲಿನ ಕಾಸರಗೋಡು ನಗರಸಭಾ ಬಜೆಟ್ ಕಾಸರಗೋಡು ನಗರವನ್ನು ಶತಮಾನದ ಹಿಂದಕ್ಕೆ ಕೊಂಡೊಯ್ದಿದೆ ಎಂದು ಪ್ರತಿಪಕ್ಷ ನಾಯಕ ಪಿ.ರಮೇಶ್ ಪ್ರತಿಕ್ರಿಯಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನಲ್ಲಿ ಇದರ ಪರಿಹಾರಕ್ಕೆ ಯಾವುದೇ ಯೋಜನೆಯಿಲ್ಲ. ಈ ವರ್ಷವೂ ಉಪ್ಪು ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೆಲವು ಯೋಜನೆಗಳು ಸಾಕಾರಗೊಳ್ಳವು. ಅವುಗಳೆಲ್ಲ ಸುಂದರ ಕನಸುಗಳು ಮಾತ್ರ. ಮಳೆ ನೀರು ಮತ್ತು ಚರಂಡಿ ನೀರು ಎಲ್ಲಿ ಹರಿದು ಹೋಗಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಕಾಸರಗೋಡು ನಗರದ ರಸ್ತೆ ಬದಿಯ ಅಲ್ಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ ಸಮಸ್ಯೆ ಪರಿಹರಿಸಲು ಬಜೆಟ್‌ನಲ್ಲಿ ಯಾವುದೇ ಯೋಜನೆಗಳಿಲ್ಲ. ನಗರದಲ್ಲಿ ಸಾರಿಗೆ ದುಸ್ತರವಾಗಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಯೋಜನೆಗಳಿಲ್ಲದ ಬಜೆಟ್ ಎಂದಿದ್ದಾರೆ. ಮರುಳು ಮಾಡುವ ಯೋಜನೆ : ದಿನೇಶ್ ಕೆ.
ಕಾಸರಗೋಡು ನಗರಸಭೆಯ ಬಜೆಟ್ ಜನರನ್ನು ಮರುಳು ಮಾಡಲು ಮಾತ್ರವೇ ಸಹಕಾರಿಯಾಗಲಿದೆ. ಬಜೆಟ್‌ನಲ್ಲಿ ಪ್ರಸ್ತಾವಿಸಿದ ಯೋಜನೆಗಳಿಗೆ ಸ್ಪಷ್ಟವಾದ ಇಚ್ಛಾಶಕ್ತಿಯಿಲ್ಲ. ಅಲ್ಲದೆ ಸ್ಪಷ್ಟತೆ ಕೂಡಾ ಇಲ್ಲ. ಕಾಸರಗೋಡು ನಗರವನ್ನು ಸೌಂದರ್ಯಗೊಳಿಸಲಾಗುವುದು ಎಂದಿದ್ದರೂ ಇದು ಯಾವ ಮಟ್ಟದಲ್ಲಿದೆ ಎಂಬುದನ್ನು ಎಲ್ಲೂ ಸೂಚಿಸುವುದಿಲ್ಲ. ಚರಂಡಿ, ಕುಡಿಯುವ ನೀರು, ತ್ಯಾಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿಲ್ಲ ಎಂದು ಕೌನ್ಸಿಲರ್ ಕೆ. ದಿನೇಶ್ ಪ್ರತಿಕ್ರಿಯಿಸಿದ್ದಾರೆ.