ಹೊಸದಿಲ್ಲಿ: ಕಾಸರಗೋಡಿನಿಂದ ತಿರುವನಂತಪುರದವರೆಗೆ ಉದ್ದೇಶಿತ ಸೆಮಿ ಹೈಸ್ಪೀಡ್ ರೈಲು ಯೋಜನೆಯನ್ನು ಕೈಗೊಳ್ಳಲು ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದೆ.
ಇದನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಫೇಸ್‌ಬುಕ್ ಮೂಲಕ ಖಚಿತ ಪಡಿಸಿದ್ದಾರೆ. ಸೆಮಿ ಹೈಸ್ಪೀಡ್ ರೈಲು ಯೋಜನೆಗೆ ಸಮ್ಮತಿ ಕುರಿತಂತೆ ಕೇಂದ್ರ ರೈಲ್ವೇ ಸಚಿವಾಲಯ ಆದೇಶವನ್ನು ಜಾರಿಗೊಳಿಸಿದ್ದು, ಇದನ್ನು ಕೇರಳ ಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿದೆ ಎಂದು ವಿಜಯನ್ ಹೇಳಿದ್ದಾರೆ.
ಈ ಯೋಜನೆ ಕೇಂದ್ರ ಮತ್ತು ರಾಜ್ಯಗಳ ಜಂಟಿ ಯೋಜನೆಯಾಗಿದ್ದು, ಸಿಲ್ವರ್ ಲೈನ್ ಎಂದು ಕರೆಯಲಾಗಿದೆ. ಕಾಸರಗೋಡು-ತಿರುವನಂತಪುರ ಮಧ್ಯೆ ರೈಲ್ವೇ ಲೈನ್ ಇರಲಿದ್ದು ಈಗಿನ 12 ಗಂಟೆ ಪ್ರಯಾಣದ ಅವಧಿ ಬದಲಿಗೆ ಕೇವಲ 4 ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ.
ಕೇರಳ ರೈಲ್ವೇ ಅಭಿವೃದ್ಧಿ ಕಾರ್ಪೋರೇಶನ್ ಈ ಯೋಜನೆಯನ್ನು ಜಾರಿಗೊಳಿಸಲಿದ್ದು 540 ಕಿ.ಮೀ. ಉದ್ದಕ್ಕೆ ಎರಡು ಹಳಿಗಳನ್ನು ಹಾಕಲಾಗುತ್ತದೆ. ಇದು ಕೇರಳದ ಆರ್ಥಿಕತೆಯನ್ನು ಉದ್ದೀಪಿಸುವ ಉದ್ದೇಶವನ್ನು ಹೊಂದಿದೆ. ಒಂದು ವರ್ಷದ ಅಧ್ಯಯನ ಬಳಿಕ ಯೋಜನೆ ಬಗ್ಗೆ ಕೇರಳ ಸಚಿವ ಸಂಪುಟ ಸಮ್ಮತಿ ನೀಡಿತ್ತು. ಇತ್ತೀಚಿಗೆ ಜಪಾನ್‌ಗೆ ಭೇಟಿ ನೀಡಿದ್ದ ವೇಳೆ ಸಿಎಂ ವಿಜಯನ್ ಅಲ್ಲಿನ ತಜ್ಞರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರು.
ಯೋಜನೆ ಜಾರಿ ವೇಳೆ 50 ಸಾವಿರ ಉದ್ಯೋಗ ಸೃಷ್ಟಿಯ ಭರವಸೆ ಹೊಂದಲಾಗಿದೆ. ಆ ಬಳಿಕ 11 ಸಾವಿರ ಮಂದಿಗೆ ಇದು ಉದ್ಯೋಗ ಕಲ್ಪಿಸಲಿದೆ. ಈ ರೈಲ್ವೇ ದಾರಿ 11 ಜಿಲ್ಲೆಗಳನ್ನು ಹಾದು ಹೋಗಲಿದೆ. ಗಂಟೆಗೆ 200 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸಲಿದ್ದು, ಕೇರಳ ಪ್ರವಾಸೋದ್ಯಮದ ದಿಕ್ಕು ಇದರಿಂದ ಬದಲಾಗಲಿದೆ ಎಂದು ಹೇಳಲಾಗಿದೆ.