ಕಾಸರಗೋಡು: ಸಮಗ್ರ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದ್ದರೂ ಕಳೆದ ಹಣಕಾಸು ವರ್ಷದಲ್ಲಿ ಜಿಲ್ಲೆಯ ರೈಲು ನಿಲ್ದಾಣಗಳ ಪೈಕಿ ಕಾಸರಗೋಡು ಮತ್ತು ನೀಲೇಶ್ವರ ರೈಲು ನಿಲ್ದಾಣಗಳಲ್ಲಿ ವರಮಾನ ಹೆಚ್ಚಳದ ಜೊತೆಗೆ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸಿದ್ದಾರೆ. ನೀಲೇಶ್ವರ ರೈಲ್ವೇ ಪ್ಯಾಸೆಂಜರ್ ಅಸೋಸಿಯೇಶನ್‌ಗೆ ಮಾಹಿತಿ ಹಕ್ಕು ಪ್ರಕಾರ ರೈಲ್ವೇ ನೀಡಿದ ಅಂಕಿಅಂಶಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿದೆ.
2018-19ನೇ ಹಣಕಾಸು ವರ್ಷದಲ್ಲಿ ಕಾಸರಗೋಡು ರೈಲು ನಿಲ್ದಾಣದಲ್ಲಿ ಲಭಿಸಿದ ಒಟ್ಟು ವರಮಾನ 21,67,99,230 ರೂ. 2017-18 ರಲ್ಲಿ ಒಟ್ಟು ವರಮಾನ 20,29,04,330 ರೂ. ಆಗಿತ್ತು. ಅಂದರೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಹಿಂದಿನ ವರ್ಷಕ್ಕಿಂತ 1,38,94,900 ರೂ. ಹೆಚ್ಚಳವಾಗಿದೆ. 2018-19 ನೇ ಸಾಲಿನಲ್ಲಿ ಕಾಸರಗೋಡು ರೈಲು ನಿಲ್ದಾಣದಿಂದ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 24,98,762.
ಜಿಲ್ಲೆಯ ಇನ್ನೊಂದು ಪ್ರಮುಖ ರೈಲು ನಿಲ್ದಾಣ ನೀಲೇಶ್ವರ. ಈ ನಿಲ್ದಾಣದಲ್ಲಿ 2018-19ನೇ ಹಣಕಾಸು ವರ್ಷದಲ್ಲಿ 4,53,83,854 ರೂ. ವರಮಾನ ಲಭಿಸಿತ್ತು. ಇದು 2017-18ನೇ ವರ್ಷದಲ್ಲಿ 4,14,57,760 ರೂ. ಆಗಿತ್ತು. ಅಂದರೆ ಹಿಂದಿನ ವರ್ಷಕ್ಕಿಂತ ಕಳೆದ ವರ್ಷ 39,26,094 ರೂ. ವರಮಾನ ಹೆಚ್ಚಳವಾಗಿದೆ.
ಇದೇ ಸಂದರ್ಭದಲ್ಲಿ 2018-19 ನೇ ವರ್ಷದಲ್ಲಿ ನೀಲೇಶ್ವರ ರೈಲು ನಿಲ್ದಾಣದಿಂದ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 11,69,275 ಆಗಿದೆ.
ಹೀಗಿದ್ದರೂ ಕಾಸರಗೋಡು ಜಿಲ್ಲೆಯ ಇತರ ರೈಲು ನಿಲ್ದಾಣಗಳಲ್ಲಿ ವರಮಾನದಲ್ಲಿ ಕಡಿಮೆಯಾಗಿದೆ.
ಕಾಸರಗೋಡು ಬಿಟ್ಟರೆ ಅಭಿವೃದ್ಧಿಯಲ್ಲಿ ಮುನ್ನಡೆ ಯನ್ನು ಸಾಧಿಸುತ್ತಿರುವ ಜಿಲ್ಲೆಯ ಪ್ರಮುಖ ನಿಲ್ದಾಣವಾಗಿರುವ ಕಾಂಞಂಗಾಡ್‌ನಲ್ಲಿ ವರಮಾನ ಕಡಿಮೆಯಾಗಿದೆ. 2017-18 ನೇ ಸಾಲಿನಲ್ಲಿ 15,09,20,160 ರೂ. ವರಮಾನ ಲಭಿಸಿದ್ದರೆ, 2018-19ನೇ ಹಣಕಾಸು ವರ್ಷದಲ್ಲಿ ಇದು 15,08,60,992 ರೂ.ಗಳಿಗೆ ಇಳಿಯಿತು. ಅಂದರೆ 59,168 ರೂ. ಕಡಿಮೆಯಾಗಿದೆ. ಚೆರ್ವತ್ತೂರು ರೈಲು ನಿಲ್ದಾಣದಲ್ಲಿ 2017-18ನೇ ಸಾಲಿನಲ್ಲಿ 3,72,81,780 ರೂ. ವರಮಾನ ಲಭಿಸಿದ್ದರೆ, 2018-19ನೇ ಹಣಕಾಸು ವರ್ಷದಲ್ಲಿ 3,61,33,083 ರೂ.ಗಳಿಗೆ ಇಳಿಯಿತು.
ಹೊಸ ನಿಲುಗಡೆಯಿಂದ ವರಮಾನ ಹೆಚ್ಚಳ
2018 ಜನವರಿ 30 ರಂದು ಮಂಜೂರು ಮಾಡಿದ ಚೆನ್ನೈ ಸೂಪರ್‌ಫಾಸ್ಟ್ ರೈಲು ಗಾಡಿಗೆ ನಿಲುಗಡೆ ನೀಡಿದ್ದು, ವರ್ಷಾಂತ್ಯದಲ್ಲಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಗಾಡಿಗೆ ನಿಲುಗಡೆ ನೀಡಿದ್ದು ನೀಲೇಶ್ವರ ರೈಲು ನಿಲ್ದಾಣದಲ್ಲಿ ವರಮಾನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.