Advertisement
ಕಾಸರಗೋಡಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಜೀವನ್‌ಬಾಬು ಅವರನ್ನು ಇಡುಕ್ಕಿ ಜಿಲ್ಲೆಗೆ ವರ್ಗಾಯಿಸಿ ಜು.4ರಂದು ಆದೇಶ ಹೊರಡಿಸಲಾಗಿತ್ತು. ಜು.10ರಂದು ಅವರು ಕಾಸರಗೋಡಿನಿಂದ ತೆರಳಿದ್ದರು. ಮರುದಿನ ಅಡಿಶನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ (ಎಡಿಎಂ) ಎನ್.ದೇವಿದಾಸ್ ಅವರಿಗೆ ಜಿಲ್ಲಾಧಿಕಾರಿ ಹುದ್ದೆಯ ಉಸ್ತುವಾರಿ ನೀಡಿ ಆದೇಶ ಹೊರಡಿಸಲಾಗಿತ್ತು. ಆದರೆ ಕಲೆಕ್ಟರ್ ಹುದ್ದೆಗೆ ಜಿಲ್ಲಾಧಿಕಾರಿಯ ನೇಮಕಾತಿ ಇನ್ನೂ ನಡೆಯದಿರುವುದು ವಿಪರ್ಯಾಸವಾಗಿದೆ.
ಕಂದಾಯ ಮತ್ತು ವಸತಿ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್ ಅವರು ಕಾಸರಗೋಡು ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲಾಧಿಕಾರಿ ನೇಮಕಾತಿ ವಿಚಾರದಲ್ಲಿ ವಿಳಂಬ ನೀತಿಗೆ ಅವರಿಂದಲೂ ಸ್ಪಷ್ಟ ಮಾಹಿತಿ ಇಲ್ಲ. ಮಳೆ ಹಾನಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ನಾಲ್ಕು ಕೋಟಿ ರೂ. ಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ. ಹಲವು ಮಂದಿ ಮೃತಪಟ್ಟಿದ್ದಾರೆ. ಇವರಿಗೆ ನಷ್ಟ ಪರಿಹಾರ ನೀಡುವ ಎಲ್ಲ ಕ್ರಮಗಳೂ ವಿಳಂಬಗೊಳ್ಳುತ್ತಿವೆ. ಆದಕಾರಣ ಸಾರ್ವಜನಿಕ ವಲಯದಿಂದ ಪ್ರಬಲ ಹೋರಾಟದ ಮಾತುಗಳೂ ಕೇಳಿಬರುತ್ತಿವೆ. ಜಿಲ್ಲಾಧಿಕಾರಿಯಾಗಿದ್ದ ಕೆ. ಜೀವನ್‌ಬಾಬು ಆರಂಭಿಸಿದ್ದ ಭೂಮಿಯ ರೀ ಸರ್ವೇ ಪ್ರಕ್ರಿಯೆಗಳು ಕೂಡ ಸ್ಥಗಿತಗೊಂಡಿವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಕಂದಾಯ ವಿಭಾಗದ ಮುಖ್ಯಸ್ಥರಾಗಿ ಎಡಿಎಂ ಕಾರ್ಯಾಚರಿಸುತ್ತಾರೆ. ಎಕ್ಸಿಕ್ಯೂ ಟಿವ್ ಮೆಜಿಸ್ಟ್ರೇಟ್ ಆದ ಜಿಲ್ಲಾ ಮಟ್ಟದ ಅಧಿಕಾರಿಯು ಎಲ್ಲ ಇಲಾಖೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಜಿಲ್ಲೆಯೊಳಗಿನ ವಿಚಾರಗಳನ್ನು ಸಮಯೋಚಿತವಾಗಿ ಆಯಾ ರಾಜ್ಯ ಸರಕಾರಕ್ಕೆ ವರದಿ ಮಾಡುವ ಹೊಣೆಗಾರಿಕೆ ಜಿಲ್ಲಾಧಿಕಾರಿಯದ್ದಾಗಿದೆ.
Related Articles
ಇದರ ಹೊರತು ಜಿಲ್ಲಾ ಮಟ್ಟದಲ್ಲಿರುವ ಸಮಿತಿಗಳ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಕರ್ತವ್ಯ ನಿಭಾಯಿಸಬೇಕು. ಈ ಸಮಿತಿಗಳಲ್ಲಿ ಹಲವು ಸಮಿತಿಗಳು ಜಿಲ್ಲಾಧಿಕಾರಿ ಇಲ್ಲದೆ ಸಭೆ ನಡೆಸಲಾಗದ ಸ್ಥಿತಿಯಲ್ಲಿವೆ. ಆದರೆ ಜಿಲ್ಲೆಯ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ ಹಾಗೂ ರಾಜ್ಯ ಸರಕಾರ ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸುತ್ತಿದೆ. ಎಂಡೋಸಲ್ಫಾನ್ ಬಾಧಿತ ಜಿಲ್ಲೆ ಎಂಬ ಹಣೆಪಟ್ಟಿ ಇದ್ದರೂ ಜಿಲ್ಲಾ ಕಲೆಕ್ಟರ್ ನೇಮಕಾತಿ ವಿಚಾರದಲ್ಲಿ ಸರಕಾರದ ಕಡೆಯಿಂದ ವಿಳಂಬ ಧೋರಣೆ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.
Advertisement
ತಾಂತ್ರಿಕ ಅಡಚಣೆ ಇರುವುದಿಲ್ಲ ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಜಿಲ್ಲೆಯ ಯಾವುದೇ ಕಾರ್ಯ ಯೋಜನೆಗಳು ಸ್ಥಗಿತಗೊಂಡಿಲ್ಲ. ಪ್ರಸ್ತುತ ಸಮರ್ಪಕ ವ್ಯವಸ್ಥೆ ಇರುವುದರಿಂದ ಎಲ್ಲ ಯಥಾ ವತ್ತಾಗಿ ನಡೆಯುತ್ತಿವೆ. ಜಿಲ್ಲಾಧಿ ಕಾರಿಯ ಹೊಣೆಗಾರಿಕೆಯನ್ನು ಎಡಿಎಂಗೆ ಒಪ್ಪಿಸಿ ಕೇರಳ ಸರಕಾರವು ಆದೇಶ ಹೊರಡಿಸಿ ರುವುದರಿಂದ ತಾಂತ್ರಿಕ ಅಡಚಣೆಗಳು ಇರುವುದಿಲ್ಲ. ಮತ್ತೂಂದೆಡೆ ಕಾಸರಗೋಡು ಜಿಲ್ಲೆಯ ಯಾವುದೇ ಯೋಜನೆಗಳು, ಪರಿಹಾರ ಕ್ರಮಗಳು ಜಿಲ್ಲಾಧಿ ಕಾರಿ ಇಲ್ಲ ಎಂಬ ನೆಲೆಯಲ್ಲಿ ವಿಳಂಬಗೊಳ್ಳುತ್ತಿಲ್ಲ ಎಂದು ಎಡಿಎಂ ಎನ್. ದೇವಿದಾಸ್ ಹೇಳಿದ್ದಾರೆ. ಬದಲಿ ಡಿಸಿ ವ್ಯವಸ್ಥೆ ಮಾಡದೆ ವರ್ಗಾವಣೆ
ಸಾಮಾನ್ಯವಾಗಿ ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ವರ್ಗಾಯಿಸುವಾಗ ನೂತನ ಜಿಲ್ಲಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಲಾಗುತ್ತದೆ. ಆದರೆ ಇಲ್ಲಿ ಅದು ಕೂಡ ನಡೆದಿಲ್ಲ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೇರಿಕ ಪ್ರವಾಸದಲ್ಲಿದ್ದುದರಿಂದ ಆದೇಶ ವಿಳಂಬಗೊಂಡಿರುವುದಾಗಿ ಮೊದಲು ಹೇಳಲಾಗಿತ್ತಾದರೂ ಅವರು ಹಿಂದಿರುಗಿ ಬಂದು ವಾರ ಒಂದು ಕಳೆದರೂ ನೇಮಕಾತಿ ಕ್ರಮ ನಡೆದಿಲ್ಲ.