Advertisement

ಕಾಸರಗೋಡು ಜಿಲ್ಲೆ: 546 ಮಂದಿ ನಿಗಾದಲ್ಲಿ

12:46 AM Mar 20, 2020 | mahesh |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಬಾಧೆ ಶಂಕಿತ 546 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 537 ಮಂದಿ ಮನೆಗಳಲ್ಲೂ, 9 ಮಂದಿ ಆಸ್ಪತ್ರೆಗಳಲ್ಲೂ ಇದ್ದಾರೆ. ಹೊಸದಾಗಿ 21 ಮಂದಿ ಸೇರಿದಂತೆ ಈ ತನಕ 170 ಮಂದಿಯ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 66 ಪರೀಕ್ಷಾ ವರದಿಗಳು ನಿರೀಕ್ಷೆಯಲ್ಲಿವೆ. ಹೊಸದಾಗಿ ಯಾರಲ್ಲೂ ಸೋಂಕು ದೃಢವಾಗಿಲ್ಲ. ಕೋವಿಡ್-19 ಬಾಧಿಸಿರುವ ಯುವಕನೊಂದಿಗೆ ಸಂಪರ್ಕದಲ್ಲಿದ್ದ 42 ಮಂದಿ ಗುರುತು ಪತ್ತೆಹಚ್ಚಿದ್ದು, ಅವರು ನಿಗಾದಲ್ಲಿದ್ದಾರೆ.

Advertisement

ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಗಡಿ ಪ್ರದೇಶಗಳ ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯರು, ಜೂನಿಯರ್‌ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳು, ಪೊಲೀಸರನ್ನೊಳಗೊಂಡ ತಂಡ
ಕಡ್ಡಾಯ ಸೂಕ್ಷ್ಮ ತಪಾಸಣೆ ನಡೆಸುತ್ತಿದೆ.

ಮಂಗಳೂರು ಮೂಲಕ ಕೇರಳಕ್ಕೆ ಬರುವವರನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಲಾಗುವುದು. ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ವಿಶೇಷ ಅಧಿಕಾರಿಯನ್ನೂ ನೇಮಿಸಲಾಗಿದೆ. ಉತ್ಸವ ಇತ್ಯಾದಿ ಚಟುವಟಿಕೆಗಳು ಪೊಲೀಸರ ನಿಗಾದಲ್ಲಿ ನಡೆಯುತ್ತಿವೆ.

ಪ್ರತ್ಯೇಕ ವಾಹನ
ಮಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುವವರನ್ನು ಕರ್ನಾಟಕ ಸರಕಾರ ಪ್ರತ್ಯೇಕ ವಾಹನಗಳಲ್ಲಿ ತಲಪಾಡಿ ವರೆಗೆ ಕರೆತರುತ್ತಿದೆ. ಅಲ್ಲಿ ಮತ್ತೆ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ.
ರೋಗಲಕ್ಷಣ ಹೊಂದಿರುವವರನ್ನು ಕಾಸರಗೋಡು ಸರಕಾರಿ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗು ತ್ತಿದೆ. ರೋಗಲಕ್ಷಣ ಇಲ್ಲದವರನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಸರಗೋಡಿಗೆ ಕಳುಹಿಸಲಾಗುತ್ತಿದೆ.ಖಾಸಗಿ ವಾಹನದಲ್ಲಿ ತೆರಳಲು ಇಚ್ಛಿಸುವವರು ತಲಪಾಡಿಯಲ್ಲಿರುವ ವಿಶೇಷ ಕೌಂಟರ್‌ನಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು.

ಜಿಲ್ಲಾಧಿಕಾರಿ ವಿಶೇಷ ಸಭೆ
ಡಿಸಿ ಕಚೇರಿಯಲ್ಲಿ ಗುರುವಾರ ವಿಶೇಷ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರು ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಸಮಿತಿಗಳನ್ನು ತುರ್ತಾಗಿ ಬಲಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

Advertisement

ಜಿಲ್ಲೆಯಲ್ಲಿ 776 ಜನಜಾಗೃತಿ ಸಮಿತಿಗಳು ಕಾರ್ಯಾಚರಿಸುತ್ತಿವೆ. ಮನೆಗಳಲ್ಲಿ ನಿಗಾದಲ್ಲಿರುವವರು ಆರೋಗ್ಯ ಇಲಾಖೆ ಮತ್ತು ರಾಜ್ಯ ಸರಕಾರದ ನಿರ್ಬಂಧಗಳನ್ನು ಉಲ್ಲಂಘಿಸಿ ಮನೆಯಿಂದ ಹೊರಗಿಳಿದರೆ ತತ್‌ಕ್ಷಣ ಕೊರೊನಾ ನಿಯಂತ್ರಣ ಘಟಕಕ್ಕೆ ಮಾಹಿತಿ ನೀಡಬೇಕು. ಅಂಥವರ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದರು.

ಹೆಚ್ಚುವರಿ ಸೌಲಭ್ಯ
ಕೋವಿಡ್-19 ಸೋಂಕು ಲಕ್ಷಣ ಹೊಂದಿದವರಿಗಾಗಿ ಹೆಚ್ಚುವರಿ ಸೌಲಭ್ಯ ಒದಗಿಸಲು ಜಿಲ್ಲಾ ಮಟ್ಟದ ಅವಲೋಕನ ಸಮಿತಿ ನಿರ್ಧರಿಸಿದೆ. ವಿದೇಶದಿಂದ ಮರಳಿ ರೋಗ ಲಕ್ಷಣ ಇಲ್ಲದವರ ಮೇಲೆ ನಿಗಾ ಇಡಲು ಕಾಸರಗೋಡು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆ ಬಳಿಯ ಬಲ್ಲ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ವ್ಯವಸ್ಥೆ ಏರ್ಪಡಿಸಲಾಗಿದೆ.

ಸಭೆಯಲ್ಲಿ ಎಸ್‌ಪಿ ಪಿ.ಎಸ್‌. ಸಾಬು, ಡಿಎಚ್‌ಒ ಡಾ| ಎ.ವಿ. ರಾಮದಾಸ್‌, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ಟಿ. ಮನೋಜ್‌, ಹೆಚ್ಚುವರಿ ದಂಡನಾಧಿಕಾರಿ ಎನ್‌. ದೇವಿದಾಸ್‌ ಉಪಸ್ಥಿತರಿದ್ದರು.

ಅಧಿಕೃತರಿಂದ ಖರೀದಿಸಿ
ಕೆಲವೆಡೆ ವೈವಿಧ್ಯಮಯ ಹ್ಯಾಂಡ್‌ ಸ್ಯಾನಿಟೈಸರ್‌, ಹ್ಯಾಂಡ್‌ ರಬ್‌ಗಳು, ದುಬಾರಿ ಬೆಲೆಗೆ ಮಾರಾಟಗೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಅವುಗಳಲ್ಲಿ ಕೆಲವು ಸೌಂದರ್ಯ ವರ್ಧಕಗಳಾಗಿದ್ದು, ಕೊರೊನಾದಂಥಾ ಸೋಂಕು ಸಹಿತ ರೋಗಾಣುಗಳ ನಾಶಕ್ಕೆ ಪರಿಣಾಮಕಾರಿಯಲ್ಲ. ಅಡ್ಡ ಪರಿಣಾಮದ ಭೀತಿಯೂ ಇದೆ. ಆದ್ದರಿಂದ ಡ್ರಗ್‌ ಲೈಸನ್ಸ್‌ ಇರುವ ಸಂಸ್ಥೆಗಳು ಉತ್ಪಾದಿಸುವ ಹ್ಯಾಂಡ್‌ ಸಾನಿಟೈಸರ್‌ಗಳನ್ನು ಮಾತ್ರ ಬಳಸಬೇಕೆಂದು ಕಣ್ಣೂರು ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next