Advertisement

ಮಹಿಳೆಯ ಹತ್ಯೆ ಆರೋಪಿಗೆ ಜೀವಿತಾವಧಿ ಶಿಕ್ಷೆ; ಲಕ್ಷ ರೂ. ದಂಡ

05:29 PM Dec 15, 2022 | Team Udayavani |

ಕುಂಬಳೆ: ಕಳೆದ 2018ರ ಜ. 19ರಂದು ಕಾಸರಗೋಡು ಪೆರಿಯಾದ ಆಯಂಪಾರ ಚಿಕ್ಕಿಪ್ಪಳ್ಳದ ಸುಬೈದಾ (60) ಅವರ ಮನೆಗೆ ಅಕ್ರಮವಾಗಿ ನುಗ್ಗಿ ಮಹಿಳೆಯನ್ನು ಕೊಲೆಗೈದು ಚಿನ್ನಾಭರಣವನ್ನು ದರೋಡೆಗೈದ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಧೂರು ಪಟ್ಲ ಕುಂಜಾರು ಕೋಟೆಕಣಿಯ ನಿವಾಸಿ ಅಬ್ದುಲ್‌ ಖಾದರ್‌ (28) ತಪ್ಪಿತಸ್ಥನೆಂದು ಕಾಸರಗೊಡು ಪ್ರಿನ್ಸಿಪಲ್‌ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದ್ದು ಜೀವಿತಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದೆ.

Advertisement

ಪ್ರಕರಣದ ಇನ್ನೋರ್ವ ಆರೋಪಿ ಮಾನ್ಯದ ಆರ್ಷಾದ್‌ (24) ನ ಮೇಲಿನ ಆರೋಪ ದೃಢವಾಗದ ಕಾರಣ ಆತನನ್ನು ಖುಲಾಸೆಗೊಳಿಸಿದೆ. ಇನ್ನೋರ್ವ ಆರೋಪಿ ಅಬ್ದುಲ್ಲ ಅಸೀಸ್‌ ಅಲಿಯಾಸ್‌ ಅಜ್ಜಾವರ ಅಸೀಸ್‌ನನ್ನು ಪೊಲೀಸರು ಬಂಧಿಸಿ ಕಾಸರಗೋಡು ವಿಶೇಷ ಸಬ್‌ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಆರೋಪಿಯನ್ನು 2018ರ ಸೆ. 14ರಂದು ಇನ್ನೊಂದು ಪ್ರಕರಣದಲ್ಲಿ ವಿಚಾರಣೆಗಾಗಿ ಸುಳ್ಯಕ್ಕೆ ಕರೆದೊಯ್ದು ಮರಳುತ್ತಿದ್ದಾಗ ಬಸ್‌ ನಿಲ್ದಾಣದ ಬಳಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಈತನನ್ನು ಇಷ್ಟರವರೆಗೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಆರೋಪಿಗಳು ಮಹಿಳೆಯ ಮನೆಗೆ ಕೊಲೆಯ ಹಿಂದಿನ ದಿನ ಪರಿಚಯ ಹೇಳಿ ಹೋಗಿದ್ದರು. ಮರುದಿನ ಮತ್ತೆ ಅವರ ಮನೆಗೆ ಹೋದಾಗ ಮಹಿಳೆ ಬಾಯಾರಿಕೆ ತರಲು ಒಳಹೋದಾಗ ಆಕೆಯ ಕುತ್ತಿಗೆ ಹಿಚುಕಿ ಕೊಲೆಗೈದು ಚಿನ್ನಾಭರಣಗಳನ್ನು ಅಪಹರಿಸಿದ್ದರು. ಪ್ರಕರಣಕ್ಕೆ ಬಳಸಿದ ಕಾರು ಮತ್ತು ಕಳವುಗೈದ ಚಿನ್ನಾಭರಣಗಳನ್ನು ಕಾಸರಗೋಡಿನ ಚಿನ್ನದಂಗಡಿಯಿಂದ ಪತ್ತೆ ಹಚ್ಚಲಾಗಿತ್ತು. ಆರೋಪಿಗಳನ್ನು ಅಂದಿನ ಎಸ್‌ಪಿ ಕೆ. ಜೆ. ಸೈಮನ್‌ ನೇತೃತ್ವದ ಪೊಲೀಸ್‌ ತಂಡ ಬಂಧಿಸಿತ್ತು.

ಕುಂಬಳೆ: ಕೊಲೆ ಆರೋಪಿಯ ಸೆರೆ

ಕುಂಬಳೆ: ಕಳೆದ 2019ರ ಸೆ. 26ರಂದು ಮಧೂರು ಪಟ್ಲದ ಶಾನವಾಸ್‌ ಅಲಿಯಾಸ್‌ ಶೈನ್‌ ಕುಮಾರ್‌ (27) ಅವರು ಮನೆಯಿಂದ ನಾಪತ್ತೆಯಾಗಿದ್ದು ಬಳಿಕ ಅ. 20ರಂದು ಕಾಸರಗೋಡಿನ ನಾಯಕ್ಸ್‌ ರಸ್ತೆಯ ಪಕ್ಕದ ಹಿತ್ತಿಲ ಪಾಳು ಬಿದ್ದ ಬಾವಿಯಲ್ಲಿ ಈತನ ಜೀರ್ಣಗೊಂಡ ಮೃತದೇಹ ಪತ್ತೆಯಾಗಿತ್ತು.

Advertisement

ಈತನನ್ನು ಕೊಲೆಗೈದ ಪ್ರಕರಣದ ಓರ್ವ ಆರೋಪಿ ಕುಂಬಳೆ  ಕೊಯಿಪ್ಪಾಡಿ ಶಾಂತಿಪ್ಪಳ್ಳದ ಅಬ್ದುಲ್‌ ರಶೀದ್‌ಯಾನೆ ಸಮೂಸಾ ರಶೀದ್‌ (40)ಕೊಲೆಯ ಬಳಿಕ ನಾಪತ್ತೆಯಾಗಿದ್ದು, ಈತನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದ ಇನ್ನಿತರ ಆರೋ ಪಿಗಳಾದ ಮೊಗ್ರಾಲ್‌ ಕೆ.ಕೆ. ಪುರಂ ಮುನಾವರ್‌ ಖಾಸಿಂ ಅಲಿಯಾಸ್‌ ಯಾನೆ ಮುನ್ನ (25), ಕಾಸರಗೊಡು ನೆಲ್ಲಿಕುಂಜೆಯ ಕಡಪ್ಪುರಂ ನಿವಾಸಿ ಜಯಚಂದ್ರನ್‌ (43), ಕುಂಬಳೆ ಕುಂಟಂಗರಡ್ಕದ ಇನ್ನೋರ್ವ ಆರೋಪಿಯನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

ಮಧೂರು ಪಟ್ಲದ ದಿ| ರಮೇಶ್‌ ಪ್ರಮೀಳಾ ದಂಪತಿ ಪುತ್ರ ಶೈನ್‌ ಕುಮಾರ್‌ ಬಳಿಕ ಮತಾಂತರಗೊಂಡು ತನ್ನ ಹೆಸರನ್ನು ಶಾನವಾಸ್‌ ಎಂಬುದಾಗಿ ಬದಲಾಯಿಸಿದ್ದು ಈತನೂ ಪ್ರಕರಣವೊಂದರ ಆರೋಪಿಯಾಗಿದ್ದ. ಸೆ. 26ರಂದು ಸಾವಿಗೀಡಾದ ಶಾನವಾಸ್‌ ಅಲಿಯಾಸ್‌ ಶೈನ್‌ ಕುಮಾರ್‌ ಮತ್ತು ಕೊಲೆ ಆರೋಪಿಗಳು ಪಾಳುಬಿದ್ದ ಬಾವಿ ಪಕ್ಕ ಒಟ್ಟಿಗೆ ಮದ್ಯ ಸೇವಿಸಿ ಇದರ ನಶೆಯಲ್ಲಿ ಪರಸ್ಪರ ಜಗಳವಾಗಿ ಶಾನವಾಸ್‌ನನ್ನು ಚೂರಿಯಿಂದ ಇರಿದು ಮೃತದೇಹವನ್ನು ಪಾಳುಬಾವಿಗೆ ಎಸೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next