ಕಾಸರಗೋಡು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡತೊಡಗಿದ್ದು, 6 ಮಂದಿಗೆ ಡೆಂಗ್ಯೂ, ಮೂವರಿಗೆ ಎಚ್1ಎನ್1 ಜ್ವರ ಬಾಧಿಸಿರುವುದು ದಾಖಲಾಗಿದೆ. ಇದೇ ವೇಳೆ ಜ್ವರದಿಂದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಕಾಸರಗೋಡು ಜನರಲ್ ಆಸ್ಪತ್ರೆ ಸಹಿತ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಲಕೃಷ್ಣ, ನಾಗೇಶ್, ವಿಜಯನ್, ನಳಿನಿ, ಸರೋಜಿನಿ ಸಹಿತ 6 ಮಂದಿಗೆ ಡೆಂಗ್ಯೂ ಬಾಧಿಸಿರುವುದನ್ನು ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.
ಎಚ್1ಎನ್1 ಬಾಧಿಸಿದ ಮೂವರು 16ರಿಂದ 60 ವರ್ಷ ಪ್ರಾಯದವರಾಗಿದ್ದಾರೆ. ಕಾಂಞಂಗಾಡ್‌ನಲ್ಲೂ ಜ್ವರ ವ್ಯಾಪಕವಾಗಿ ಹರಡಿದೆ. ಬಳಾಲ್ ಪಂಚಾಯತ್‌ನ ನಾರಾಯಣನ್, ಕುಂಞಿರಾಮನ್ ಮತ್ತು ಮಡಿಕೈ ನಿವಾಸಿ ಬ್ರಿಜೇಶ್ ಅವರಿಗೆ ಡೆಂಗ್ಯೂ ಖಚಿತಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಲವಾರು ಮಂದಿ ದಾಖ ಲಾಗಿದ್ದು, ಅವರಲ್ಲೂ ಕೆಲವರಿಗೆ ಡೆಂಗ್ಯೂ ಇದೆ ಎನ್ನಲಾಗಿದೆ.
ಇದೇ ವೇಳೆ ಪೈಪು ಕೆಲಸಕ್ಕಾಗಿ ಬೆಳ್ಳೂರಿಗೆ ಬಂದ ತಮಿಳುನಾಡು ತೃಶಿನಾಪಳ್ಳಿ ಕರೂರು ನಿವಾಸಿ ಪೆರುಮಾಳ್ (60) ಸಾವಿಗೀಡಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.