Advertisement

Kasaragod ಲೋಕಸಭಾ ಕ್ಷೇತ್ರ ಯುಡಿಎಫ್ ತೆಕ್ಕೆಗೆ; ಉಣ್ಣಿತ್ತಾನ್‌ ಮತ್ತೆ ಜಯಭೇರಿ

12:10 AM Jun 05, 2024 | Team Udayavani |

ಕಾಸರಗೋಡು: ತ್ರಿಕೋನ ಸ್ಪರ್ಧೆ ನಡೆದ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್‌ನ ಕಾಂಗ್ರೆಸ್‌ ಅಭ್ಯರ್ಥಿ ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮತ್ತೆ ಜಯಭೇರಿ ಗಳಿಸಿದ್ದಾರೆ.

Advertisement

ಉಣ್ಣಿತ್ತಾನ್‌ ತನ್ನ ಸಮೀಪದ ಪ್ರತಿಸ್ಪರ್ಧಿ ಎಲ್‌ಡಿಎಫ್‌ನ ಸಿಪಿಎಂ ಅಭ್ಯರ್ಥಿ ಎಂ.ವಿ. ಬಾಲಕೃಷ್ಣ ಮಾಸ್ತರ್‌ ಅವರನ್ನು 1,01,649 ಮತಗಳ ಅಂತರದಿಂದ ಪರಾಭವಗೊಳಿಸಿದರು. ರಾಜ್ಯದಲ್ಲಿ ಎಡರಂಗ ಅಧಿಕಾರ
ದಲ್ಲಿದ್ದರೂ ಲೋಕಸಭೆಯಲ್ಲಿ ಯುಡಿಎಫ್‌ ಸಾಧನೆ ಮೆರೆದಿದೆ.

ಉಣ್ಣಿತ್ತಾನ್‌ 4,90,659, ಎಂ.ವಿ.ಬಾಲಕೃಷ್ಣನ್‌ ಮಾಸ್ತರ್‌ 3,90,010 ಮತಗಳನ್ನು ಪಡೆದರು. ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಎಂ.ಎಲ್‌. ಅಶ್ವಿ‌ನಿ 2,19,558 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಸುಕುಮಾರಿ ಎಂ (ಬಹುಜನ ಸಮಾಜ ಪಾರ್ಟಿ)-1612, ರಾಜೇಶ್ವರಿ ಕೆ.ಆರ್‌. (ಸ್ವತಂತ್ರ)- 759, ಅನೀಶ್‌ ಪಯ್ಯನ್ನೂರು (ಸ್ವತಂತ್ರ) -507, ಬಾಲಕೃಷ್ಣನ್‌ ಎನ್‌(ಸ್ವತಂತ್ರ)- 628, ಮನೋಹರನ್‌ ಕೆ. (ಸ್ವತಂತ್ರ)- 804, ಎನ್‌. ಕೇಶವ ನಾಯ್ಕ (ಸ್ವತಂತ್ರ) -897 ಮತಗಳನ್ನು ಪಡೆದಿದ್ದಾರೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಯುಡಿಎಫ್‌ನದ್ದೇ ಅಲೆ ಕಂಡುಬಂದಿತ್ತು. ಅಂದು ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ 19ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಗೆಲುವು ಸಾಧಿಸಿತ್ತು. ಸಿಪಿಎಂ ನೇತೃತ್ವದ ಎಡರಂಗ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಆಲಪ್ಪುಳದಲ್ಲಿ ಎಲ್‌ಡಿಎಫ್‌ ಅಭ್ಯರ್ಥಿ ಎ.ಎಂ. ಆರೀಫ್‌ ಮಾತ್ರವೇ ಗೆಲುವು ಸಾಧಿಸಿದ್ದರು. ಕಾಸರಗೋಡು ಜಿಲ್ಲೆಯ ಐದು ಮತ್ತು ಕಣ್ಣೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಒಳಗೊಂಡ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 2019ರಲ್ಲಿ ಯುಡಿಎಫ್‌ನಿಂದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಎಲ್‌ಡಿಎಫ್‌ನಿಂದ ಕೆ.ಪಿ. ಸತೀಶ್ಚಂದ್ರನ್‌, ಎನ್‌ಡಿಎಯಿಂದ ರವೀಶ ತಂತ್ರಿ ಕುಂಟಾರು ಸ್ಪರ್ಧಿಸಿದ್ದರು. ಉಣ್ಣಿತ್ತಾನ್‌ 40,438 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Advertisement

ಕೇರಳದಲ್ಲಿ ಈ ಬಾರಿ ಯುಡಿಎಫ್‌ 18 ಸ್ಥಾನಗಳನ್ನು ಗೆದ್ದುಕೊಂಡಿದೆ. ಎಲ್‌ಡಿಎಫ್‌ ಮತ್ತು ಎನ್‌ಡಿಎ ತಲಾ ಒಂದು ಸೀಟು ಪಡೆದಿವೆ. ತೃಶ್ಶೂರಿನಲ್ಲಿ ಬಿಜೆಪಿಯ ಅಭ್ಯರ್ಥಿ, ಚಿತ್ರನಟ ಸುರೇಶ್‌ ಗೋಪಿ ಗೆದ್ದು ಕೇರಳದಲ್ಲಿ ಪ್ರಥಮವಾಗಿ ಬಿಜೆಪಿ ಖಾತೆ ತೆರೆದಿದೆ.

ಯುಡಿಎಫ್‌-ಬಿಜೆಪಿ ಘರ್ಷಣೆ
ಲೋಕಸಭಾ ಚುನಾವಣೆಯ ವಿಜಯೋತ್ಸವದ ಸಂದರ್ಭ ಮಾವುಂಗಾಲ್‌ನಲ್ಲಿ ಯುಡಿಎಫ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಅವರನ್ನು ಚದುರಿಸಿದರು. ಹಲವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next