Advertisement

Sakrebyle Elephant Camp: ನಾ ಕಂಡ ಸಕ್ರೆಬೈಲ್‌ ಆನೆ ಬಿಡಾರ

03:34 PM Jun 22, 2024 | Team Udayavani |

ಮಲೆನಾಡಿನ ಹೆಬ್ಟಾಗಿಲು ಪಶ್ಚಿಮ ಘಟ್ಟದ ಸಾಲಿನಲ್ಲಿ ಹರಿಯುವ ತುಂಗಾನದಿಯ ಮಡಿಲಲ್ಲಿರುವ ಪ್ರವಾಸಿತಾಣವೇ ಸಕ್ರೆಬೈಲ್‌ ಆನೆ ಬಿಡಾರ.  ಸಕ್ರೆಬೈಲ್‌ ಅಂದರೆ  ಸಕ್ಕರೆ ಹೊಲಗಳು ಎಂದರ್ಥ.

Advertisement

ಇದು ಶಿವಮೊಗ್ಗ ನಗರ ಪ್ರದೇಶದಿಂದ 14 ಕಿ.ಮೀ. ದೂರದಲ್ಲಿದ್ದು ಇಲ್ಲಿಗೆ ಮಳೆಗಾಲದ ಪ್ರವಾಸವು ಅತಿ ಸೊಗಸಾಗಿರುತ್ತದೆ. ಆನೆಗಳನ್ನು ಕಣ್ತುಂಬಿಕೊಳ್ಳಲೆಂದೇ ದೇಶಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀಳ, ಎತ್ತರದ, ಗಾಂಭಿರ್ಯದ ಆನೆಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದು.  ಕರ್ನಾಟಕದ ಪ್ರಮುಖ ಆನೆ ಶಿಬಿರಗಳೆಂದರೆ ಶಿವಮೊಗ್ಗದ ಸಮೀಪದಲ್ಲಿರುವ ಸಕ್ರೆಬೈಲ್‌ ಆನೆ ಶಿಬಿರ ಮತ್ತು ಕೊಡಗಿನ ದುಬಾರೆ ಆನೆ ಶಿಬಿರ.

ಸಕ್ರೆಬೈಲ್‌ ಆನೆ  ಬಿಡಾರ ಕರ್ನಾಟಕದಲ್ಲಿ ಸೆರೆ ಹಿಡಿಯಲ್ಪಟ್ಟ ಅಥವಾ ಬಂಧಿಸಲ್ಪಟ್ಟ ಆನೆಗಳಿಗೆ  ತರಬೇತಿ ನೀಡುವ ಅತ್ಯುತ್ತಮ ಬಿಡಾರವಾಗಿದ್ದು ಇಲ್ಲಿ ಸಾಮಾನ್ಯವಾಗಿ ಬೃಹತ್‌ ಗಾತ್ರದ ಆನೆಗಳನ್ನು ಅತಿ ಸಮೀಪದಿಂದ ನೋಡುವ ಅವಕಾಶ ಸಿಗುತ್ತದೆ. ಇದು  ಕರ್ನಾಟಕದಲ್ಲಿನ ಪರಿಸರ ಸ್ನೇಹಿ ಪ್ರವಾಸೋದ್ಯಮ ಕೇಂದ್ರಗಳ ಪೈಕಿಯೂ ಒಂದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿರುವ ಪುಂಡ ಆನೆಗಳು, ಅಸ್ವಸ್ಥಗೊಂಡ, ನಡತೆಯ ಸಮಸ್ಯೆಯಿರುವ, ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿರುವ ಮುಂತಾದ ಅನೇಕ ಕಾರಣಗಳಿಂದ ಆನೆಗಳನ್ನು ಬಿಡಾರಕ್ಕೆ ಕರೆತಂದು ಅನುಭವ ಹೊಂದಿರುವ ಪಶು ವೈದ್ಯರಿಂದ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಪ್ರತೀ  ದಿನ ಅವಕ್ಕೆ ನುರಿತ  ಮಾವುತರಿಂದ ತರಬೇತಿ ನೀಡಲಾಗುತ್ತದೆ. ಅನಂತರ ಪ್ರತೀ ದಿನ ಆನೆಗಳಿಗೆ ಮೇವು ಹಾಕುತ್ತಾರೆ ರಾತ್ರಿ ಮೇವು ತಿಂದು ಬಂದು ವಿಶ್ರಾಂತಿ ಪಡೆದ ಬಳಿಕ ಬೆಳಗ್ಗೆ ಏಳು ಗಂಟೆಗೆ ಅವುಗಳಿಗೆ ಸ್ನಾನ ಮಾಡಿಸಿ, ಪಶು ವೈದ್ಯರ ಸಲಹೆಯಂತೆ ಅವುಗಳಿಗೆ ಪುಷ್ಕಳ ಭೋಜನ ನೀಡಿ, ಅವುಗಳನ್ನು ಬಿಡಾರಕ್ಕೆ ಬಿಡಲಾಗುತ್ತದೆ.

ಆನೆ  ವೀಕ್ಷಣೆ ಸಮಯ ಬೆಳಗ್ಗೆ 8.30ರಿಂದ ಮಧ್ಯಾಹ್ನ 1ರ ವರೆಗೆ ಇದ್ದು, ಆನೆಗಳನ್ನು ಬೆಳಗ್ಗೆ ಕಾಡಿನಿಂದ ಬಿಡಾರಕ್ಕೆ ಕರೆತರುತ್ತಾರೆ.  ಇದನ್ನು ನೋಡಲು ತುಂಬಾ ಸೊಗಸಾಗಿದ್ದು  ಪ್ರವಾಸಿಗರು ಬೆಳಗ್ಗೆ ಬರುವುದು ಹೆಚ್ಚು. ಪ್ರವಾಸಿಗರು ಪ್ರವೇಶ ಶುಲ್ಕಗಳ ವಿವರಗಳನ್ನೊಳಗೊಂಡತೆ ಪ್ರವೇಶ ಪಡೆದು ಬಿಡಾರಕ್ಕೆ ಆಗಮಿಸಿ ಅಲ್ಲಿ ವಿವಿಧ ನಾಮಗಳೊಂದಿಗೆ ಆಟ ಆಡುತ್ತಿರುವ ಆನೆಗಳನ್ನು ನೋಡಬಹುದು. ಕಾಡಿನಿಂದ ಬಂದ ಆನೆಗಳನ್ನು ಮೊದಲು ತುಂಗಾನದಿ ದಡಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಮಾವುತನ ಕಣ್ಗಾವಲಿನಲ್ಲಿ ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುತ್ತಾರೆ.  ಇಲ್ಲಿ ಪ್ರವಾಸಿಗರು ಆನೆಯ ಮೈ ಉಜ್ಜುತ್ತಾ ದಣಿದರೆ ಆನೆ ಆನಂದವಾಗಿ  ಸ್ನಾನ ಮಾಡುತ್ತದೆ. ಮತ್ತು ಆನೆಯು ವಿವಿಧ

ಆಟವನ್ನು ಆಡುತ್ತದೆ. ಉದಾಹರಣೆಗೆ ಸೊಂಡಿಲಿನಿಂದ ನೀರು ಚಿಮ್ಮಿಸುವುದು, ನೀರಿನಲ್ಲಿ ಬಿದ್ದು ಹೊರಳಾಡುವುದು ಮುಂತಾದವು. ಇದನ್ನು ನೋಡುತ್ತಾ, ಅನುಭವಿಸುತ್ತಾ ದೊಡ್ಡವರು ಚಿಕ್ಕವರಂತೆ ವರ್ತಿಸುತ್ತಾರೆ. ತದನಂತರ ಆನೆಗಳನ್ನು ಬಿಡಾರಕ್ಕೆ ಕರೆತರುತ್ತಾರೆ ಈ ಸಂದರ್ಭ ಆನೆಗಳ ಜತೆ ಛಾಯಾಚಿತ್ರ ತೆಗೆದುಕೊಳ್ಳುವವರೇ  ಹೆಚ್ಚು. ಬಿಡಾರಕ್ಕೆ ಆನೆಗಳನ್ನು ಕರೆತಂದಾಗ ಅಲ್ಲಿನ ಪ್ರವಾಸಿಗರು ಆನೆಗಳ ಆಟಗಳನ್ನು ನೋಡಿ ಸಂತೋಷಪಡುತ್ತಾರೆ ಮತ್ತು ಕೇವಲ ಪ್ರವೇಶ ಶುಲ್ಕ ಪಡೆದವರು ಆನೆ ಆಟವನ್ನು ನೋಡಿ ಆನೆಯ ಮುಂದೆ ನಿಂತು ಛಾಯಾಚಿತ್ರ ತೆಗೆದುಕೊಂಡು ಸಂತೋಷಪಡುತ್ತಾರೆ.

Advertisement

ಇಲ್ಲಿ ಆನೆಗಳನ್ನು ಮಾತ್ರವಲ್ಲದೆ ಅನೇಕ ಜಾತಿಯ ಮರಗಳನ್ನೂ ನೋಡಬಹುದು. ತೇಗ, ಬೀಟೆ, ಹೊನ್ನೆ, ಮತ್ತಿ, ನೀಲಗಿರಿ ಮುಂತಾದ ಮರಗಳು ಪರಿಸರಕ್ಕೆ ನೆರಳನ್ನು ನೀಡುತ್ತಿವೆ. ಇಲ್ಲಿಗೆ ಹತ್ತಿರವಾದ ಸ್ಥಳಗಳೆಂದರೆ ಜೋಗ ಜಲಪಾತ, ಗಾಜನೂರು ಅಣೆಕಟ್ಟು, ಆಗುಂಬೆ,ಕೊಡಾಚಾದ್ರಿ,ಹಿಡ್ಲುಮನೆ ಜಲಪಾತ, ಕುಪ್ಪಳ್ಳಿ  ಮುಂತಾದವು.

-ಶ್ರೀಕಾಂತ ಎಂ.

ದಾವಣಗೆರೆ

Advertisement

Udayavani is now on Telegram. Click here to join our channel and stay updated with the latest news.

Next