Advertisement

Kasaragod: ಮುಳಿಯಾರಿನಲ್ಲಿ ಮನೆ ಮುಂದೆ ಐದು ಚಿರತೆ ಪ್ರತ್ಯಕ್ಷ

07:58 PM Dec 26, 2024 | Team Udayavani |

ಕಾಸರಗೋಡು: ಮುಳಿಯಾರು ಗ್ರಾಮ ಪಂಚಾಯತ್‌ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಚಿರತೆಗಳ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಡಿ.25 ರಂದು ರಾತ್ರಿ ಇಲ್ಲಿನ ಮನೆಯೊಂದರ ಪರಿಸರದಲ್ಲಿ ಐದು ಚಿರತೆಗಳು ಗುಂಪಾಗಿ ಏಕಕಾಲದಲ್ಲಿ ಕಂಡು ಬಂದಿದೆ. ಮುಳಿಯಾರು ಪಯೋಲಾದ ಕಲೆಯಪ್ಪಾಡಿ ಕೃಷ್ಣನ್‌ ಅವರ ಮನೆ ಪರಿಸರದಲ್ಲಿ ಚಿರತೆಗಳು ಗುಂಪಾಗಿ ಕಾಣಿಸಿಕೊಂಡಿತು.

Advertisement

ಮನೆಯವರು ಪಕ್ಕದ ದೈವ ಕೋಲ ಉತ್ಸವಕ್ಕೆ ಹೋಗಿದ್ದು, ಅಲ್ಲಿಂದ ರಾತ್ರಿ ಮನೆಗೆ ವಾಪಸಾಗುತ್ತಿದ್ದಾಗ ಮನೆ ಪರಿಸರದಲ್ಲಿ ಚಿರತೆಗಳ ಗುಂಪು ಕಂಡು ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಕೆಲವೇ ಹೊತ್ತಿನಲ್ಲಿ ಈ ಚಿರತೆಗಳು ಅಲ್ಲಿಂದ ತೆರಳಿದೆ. ಈ ಪರಿಸರದ ನಾಯಿಗಳನ್ನು ಹಾಗು ಇತರ ಪ್ರಾಣಿಗಳನ್ನು ಹಿಡಿಯಲೆಂದು ಚಿರತೆಗಳು ಬಂದಿರಬಹುದೆಂದು ಶಂಕಿಸಲಾಗಿದೆ. ವಿಷಯ ತಿಳಿದು ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ವ್ಯಾಪಕ ಶೋಧ ನಡೆಸಿದರೂ ಚಿರತೆ ಪತ್ತೆಯಾಗಿಲ್ಲ.

ಇದೇ ಪಂಚಾಯತ್‌ನ ಕೊಡವಂಜಿ ಅಡ್ಕಂ ರಸ್ತೆ ಬಳಿಯ ರಾಜನ್‌ ಬೇಪು ಅವರ ನಾಯಿಯನ್ನು ಚಿರತೆ ಕಚ್ಚಿ ಸಾಗಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅದರಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ವ್ಯಾಪಕ ಶೋಧ ನಡೆಸಿದರೂ ಪತ್ತೆಯಾಗಿಲ್ಲ.

ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ವಿವಿಧೆಡೆ ಬೋನುಗಳನ್ನು ಇರಿಸಿದರೂ ಈ ವರೆಗೂ ಚಿರತೆಯನ್ನು ಹಿಡಿಯಲು ಸಾಧ್ಯವಾಗಿಲ್ಲ. ಹಲವೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರೂ, ಕ್ಯಾಮರಾ ಕಣ್ಣಿಗೆ ಚಿರತೆ ಕಂಡು ಬಂದಿಲ್ಲ. ಚಿರತೆ ಭೀತಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಉಂಟಾಗಿದೆ. ಮಕ್ಕಳನ್ನು ಮನೆಯಿಂದ ಹೊರ ಬಿಡಲು ಜನರು ಭಯ ಪಡುತ್ತಿದ್ದಾರೆ. ಹಲವು ಮನೆಗಳ ನಾಯಿಗಳನ್ನು ಹೊತ್ತೂಯ್ದಿದೆ ಹಾಗು ಇತರ ಪ್ರಾಣಿಗಳನ್ನು ಕೊಂದು ಹಾಕಿದೆ. ಚಿರತೆ ಹಾವಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಪ್ರದೇಶದ ಜನರು ಹೋರಾಟಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next