ಕಾಸರಗೋಡು: ಜಿಲ್ಲೆಯಲ್ಲಿ ಮೂರು ಮಂದಿಯ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರ 19 ಮಂದಿಗೆ ಕೋವಿಡ್ 19 ಬಾಧೆ ದೃಢವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದರೊಂದಿಗೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಬಾಧಿತರ ಸಂಖ್ಯೆ 47ಕ್ಕೇರಿದೆ. ರಾಜ್ಯದಲ್ಲಿ ಇದು ವರೆಗೆ 138 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಗೊಂಡಿದೆ. ಇವರಲ್ಲಿ 126 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯನಾಡು ಜಿಲ್ಲೆಯಲ್ಲಿ ಮೊದಲ ಬಾರಿಗೆ ಒಬ್ಬರಿಗೆ ಕೋವಿಡ್ 19 ಸೋಂಕು ಬಾಧಿಸಿದೆ. ಕಣ್ಣೂರು ಜಿಲ್ಲೆಯಲ್ಲಿ 9, ಮಲಪ್ಪುರ ಜಿಲ್ಲೆಯಲ್ಲಿ 3, ತೃಶ್ಶೂರು ಜಿಲ್ಲೆಯಲ್ಲಿ 2, ಇಡುಕ್ಕಿ ಜಿಲ್ಲೆಯಲ್ಲಿ 1 ಪ್ರಕರಣ ಗುರುವಾರ ದೃಢವಾಗಿದೆ.
ಎರ್ನಾಕುಳಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕಣ್ಣೂರು ನಿವಾಸಿ ಗಳೂ ಇಬ್ಬರು ವಿದೇಶೀ ಪೌರರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪತ್ತನಂತಿಟ್ಟದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರ ಸ್ಯಾಂಪಲ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಬಂದಿದೆ. ರಾಜ್ಯದಲ್ಲಿ ಒಟ್ಟು 1,20,003 ಮಂದಿ ನಿಗಾದಲ್ಲಿದ್ದಾರೆ. ಅವರಲ್ಲಿ 1,01,402 ಮಂದಿ ಮನೆಗಳಲ್ಲೂ, 601 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ ಮಾತ್ರ 136 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, 1,342 ಮಂದಿಯ ಸ್ಯಾಂಪಲ್ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ 4,798 ಮಂದಿ ನಿಗಾದಲ್ಲಿ
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಬಾಧಿತರ ಸಂಖ್ಯೆ 47ಕ್ಕೇರಿದ್ದು, 4,798 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 100 ಮಂದಿ ಆಸ್ಪತ್ರೆಗಳಲ್ಲೂ, 4,698 ಮಂದಿ ಮನೆಗಳಲ್ಲೂ ನಿಗಾದಲ್ಲಿದ್ದಾರೆ. ಮಾ. 26ರಂದು ಐವರ ಸ್ಯಾಂಪಲ್ ಕಳುಹಿಸಲಾಗಿದೆ.
ಕೋವಿಡ್ 19 ಬಾಧಿಸಿದ ವ್ಯಕ್ತಿಗಳು 37ರ ಹರೆಯದ ಚೆಂಗಳ ನಿವಾಸಿ, 38 ವರ್ಷ ಪ್ರಾಯದ ಅಣಂಗೂರು ಕೊಲ್ಲಂಪಾಡಿ ನಿವಾಸಿ ಮತ್ತು 26 ವರ್ಷ ಪ್ರಾಯದ ಉಳ್ಳತ್ತಡ್ಕ ನಿವಾಸಿಯಾಗಿದ್ದಾರೆ. ಇದ ರಲ್ಲಿ ಚೆಂಗಳ ನಿವಾಸಿ ಮಾರ್ಚ್ 21ರಂದು ಕೋವಿಡ್ 19 ದೃಢವಾಗಿದ್ದ ದುಬಾೖಯಿಂದ ಬಂದ ವ್ಯಕ್ತಿಯನ್ನು ಕೋಯಿಕ್ಕೋಡ್ ಕರಿಪೂರ್ ವಿಮಾನ ನಿಲ್ದಾಣದಿಂದ ವಾಹನದಲ್ಲಿ ಕರೆದುಕೊಂಡ ಬಂದ ವ್ಯಕ್ತಿಯಾಗಿದ್ದಾರೆ. ಕೊಲ್ಲಂ ಪಾಡಿ, ಉಳ್ಳತ್ತಡ್ಕ ನಿವಾಸಿಗಳು ಮಾರ್ಚ್ 21ರಂದು ದುಬಾೖಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಖಾಸಗಿ ವಾಹನದಲ್ಲಿ ಕಾಸರಗೋಡಿಗೆ ತಲುಪಿದ್ದ ರೆಂದು ಡಿಎಂಒ ಡಾ| ಎ.ವಿ. ರಾಮದಾಸ್ ಹೇಳಿದ್ದಾರೆ.
“ಕಮ್ಯೂನಿಟಿ ಕಿಚ್ಚನ್’
ರಾಜ್ಯದ 84 ಮುನಿಸಿಪಾಲಿಟಿಗಳಲ್ಲಿ ಸಿದ್ಧ ಆಹಾರ ವಿತರಣೆ ಯೋಜನೆ “ಕಮ್ಯೂನಿಟಿ ಕಿಚ್ಚನ್’ ಆರಂಭಿಸಲಾಗಿದ್ದು, ದುರ್ಬಲ ವರ್ಗ ದವರನ್ನು ಗುರುತಿಸಿ ಆಹಾರ ವಿತರಿಸ ಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.