Advertisement

Kasaragod: ಅಪರಾಧ ಸುದ್ದಿಗಳು

08:15 PM Nov 18, 2024 | Team Udayavani |

ಬಸ್‌ನಿಂದ ಹಣ ಕಳವು: ಬಂಧನ
ಮಂಜೇಶ್ವರ: ನಿಲ್ಲಿಸಿದ್ದ ಬಸ್‌ನಿಂದ 10 ಸಾವಿರ ರೂ. ಕಳವು ಮಾಡಿದ ಆರೋಪಿ ವಾಣೀನಗರದ ಉಮ್ಮರ್‌(59)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ನ. 5ರಂದು ಮಧ್ಯಾಹ್ನ ತಲಪಾಡಿ ಸಮೀಪ ಬಸ್‌ ನಿಲ್ಲಿಸಿ ಸಿಬಂದಿ ಊಟಕ್ಕೆ ತೆರಳಿದ್ದರು. ಆಗ ಚಾಲಕನ ಆಸನದ ಮೇಲ್ಭಾಗದಲ್ಲಿರುವ ಪೆಟ್ಟಿಗೆಯಲ್ಲಿದ್ದ ಹಣ ಕಳವಾಗಿದೆ ಎಂದು ಬಸ್ಸಿನ ನಿರ್ವಾಹಕ ಸೋಂಕಾಲ್‌ ಕೋಡಿಬೈಲ್‌ನ ಅಬ್ದುಲ್‌ ಲತೀಫ್‌ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾರು ಢಿಕ್ಕಿ: ಪಾದಚಾರಿ ಸಾವು
ಕಾಸರಗೋಡು: ಚೆರ್ಕಳ ಸಂತೋಷ್‌ ನಗರದಲ್ಲಿ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪಾದಚಾರಿ ಸಂತೋಷ್‌ ನಗರದ ತಾಯಲಂಗಾಡಿ ವಿಲ್ಲಾದ ಮೊಹಮ್ಮದ್‌ ಅವರ ಪುತ್ರ ಅಬ್ದುಲ್ಲ (63) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿದ್ದಆರೋಪಿಯ ಬಂಧನ
ಕಾಸರಗೋಡು: ಹಲವು ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಚೆರ್ಕಳ ನಿವಾಸಿ ಶಾಜಹಾನ್‌ ಎಸ್‌. (43)ನನ್ನು ಕಾಸರಗೋಡು ಅಬಕಾರಿ ದಳ ಬಂಧಿಸಿದೆ.

ಗ್ರಾಮ ಕಚೇರಿಯಿಂದ ಕಳವಿಗೆ ಯತ್ನ
ಕಾಸರಗೋಡು: ತಳಂಗರೆ ಗ್ರಾಮ ಕಚೇರಿಯಿಂದ ಕಳವು ಯತ್ನ ನಡೆದಿದೆ. ಕಳ್ಳರು ಕಚೇರಿಯ ಕಡತಗಳು ಹಾಗೂ ವಿವಿಧ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಗ್ರಾಮಾಧಿಕಾರಿ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ಸಹಿತ ಇಬ್ಬರ ಬಂಧನ
ಕಾಸರಗೋಡು: ಪೆರಿಯಾಟಡ್ಕದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 86.4 ಲೀಟರ್‌ ಮದ್ಯ ವಶಪಡಿಸಿಕೊಂಡ ಹೊಸದುರ್ಗ ಅಬಕಾರಿ ದಳ ಬಂಬ್ರಾಣ ಕಳತ್ತೂರು ತಪಾಸಣೆ ಕೇಂದ್ರ ಪರಿಸರದ ಪ್ರವೀಣ್‌ ಕುಮಾರ್‌ ಮತ್ತು ಕಿದೂರಿನ ಮಿತೇಶ್‌ ಅವರನ್ನು ಬಂಧಿಸಿದೆ. ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಮನೆಯಿಂದ ಕಳವಿಗೆ ಯತ್ನ
ನೀರ್ಚಾಲು: ಇಲ್ಲಿನ ಮದಕದಲ್ಲಿ ಗೋಪಾಲನ್‌ ಅವರ ಜನವಾಸವಿಲ್ಲದ ಮನೆಯಿಂದ ಕಳವು ಯತ್ನ ನಡೆದಿದೆ. ಗೋಪಾಲನ್‌ ಮಡಿಕೇರಿಯಲ್ಲಿ ಬ್ಯಾಂಕ್‌ ನೌಕರರಾಗಿದ್ದು ಮನೆಗೆ ಬೀಗ ಹಾಕಿ ತೆರಳಿದ್ದರು. ಕಳವು ಯತ್ನದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ.

ರೈಲು ಪ್ರಯಾಣಿಕನ ಐ ಫೋನ್‌ ಕಳವು
ಕಾಸರಗೋಡು: ತಿರುವನಂತಪುರದಿಂದ ಪೆರಾವಲ್‌ಗೆ ಸಾಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಾರಾಷ್ಟ್ರ ಪುಣೆ ನಿವಾಸಿ ಕೇತನ ಸಂಜಯ್‌ ಕುಲಕರ್ಣಿ ಅವರ 75 ಸಾವಿರ ರೂ. ಮೌಲ್ಯದ ಐ ಫೋನ್‌ ಕಳವಾಗಿರುವ ಕುರಿತು ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.

ಪತ್ನಿಗೆ ಇರಿತ: ಕೇಸು ದಾಖಲು
ಬದಿಯಡ್ಕ: ನೀರ್ಚಾಲು ಕೆಡೆಂಜಿಯ ಕೆ. ಶೋಭಾ (50) ಅವರಿಗೆ ಇರಿದು ಗಾಯಗೊಳಿಸಿ ತಲೆಮರೆಸಿಕೊಂಡಿರುವ ಪತಿ ಗೋವಿಂದನ್‌ ವಿರುದ್ಧ ಬದಿಯಡ್ಕ ಪೊಲೀಸರು ಹತ್ಯೆ ಯತ್ನ ಕೇಸು ದಾಖಲಿಸಿಕೊಂಡು ಶೋಧ ನಡೆಸುತ್ತಿದ್ದಾರೆ.
ನ. 16ರಂದು ಸಂಜೆ 4.30ಕ್ಕೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಶೋಭಾ ಅವರನ್ನು ತಡೆದು ಇರಿದು ಗಾಯಗೊಳಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಶೋಭಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೇಣು ಬಿಗಿದು ಆತ್ಮಹತ್ಯೆ
ಪೈವಳಿಕೆ: ಸುಂಕದಕಟ್ಟೆಯಲ್ಲಿರುವ ಬೈಕ್‌ ಗ್ಯಾರೇಜಿನ ನೌಕರ ಅಶೋಕ್‌ (40) ಕುರುಡಪದವಿನ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರ ಬಿದ್ದು ಮನೆಗೆ ಹಾನಿ
ಕಾಸರಗೋಡು: ಭಾರೀ ಗಾಳಿ ಮಳೆಯಿಂದಾಗಿ ತೆಂಗಿನ ಮರ ಬಿದ್ದು ಮಾರ್ಪನಡ್ಕ ಮಾಳಿಗೆ ಮನೆಯ ಉದಯ ಕುಮಾರ್‌ ಭಟ್‌ ಅವರ ಮನೆಯ ಛಾವಣಿ ಹಾನಿಗೀಡಾಗಿದೆ. ಗೋಡೆ ಬಿರುಕು ಬಿಟ್ಟಿದೆ.

ರೈಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ
ಕಾಸರಗೋಡು: ನೆಲ್ಲಿಕುಂಜೆ ರೈಲು ಹಳಿಯಲ್ಲಿ ನವೆಂಬರ್‌ 15ರಂದು ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು, ಮೂಲತಃ ಪತ್ತನಂತಿಟ್ಟ ನಿವಾಸಿ ಪ್ರಸ್ತುತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ವಾಸವಾಗಿದ್ದ ಜಯ ಕುಮಾರ್‌ (54) ಅವರದೆಂದು ತಿಳಿದುಬಂದಿದೆ.
ಪ್ರಯಾಣದ ವೇಳೆ ರೈಲಿನಿಂದ ಹೊರಕ್ಕೆಸೆಯಲ್ಪಟ್ಟಿರಬೇಕೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next