Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

01:19 AM Jul 02, 2024 | Team Udayavani |

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಂಸ್‌ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಲಿಯಿಂದ ಅಕ್ರಮವಾಗಿ ಸಾಗಿಸಿದ 87,52,220 ರೂ. ಮೌಲ್ಯದ 1,223 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

Advertisement

ಈ ಸಂಬಂಧ ಕಾಸರಗೋಡು ಪಡನ್ನ ಕೊವ್ವಲ್‌ ವೀಟಿಲ್‌ ನಿವಾಸಿ ಪ್ರತೀಶ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈತ ಶಾರ್ಜಾದಿಂದ ಬಂದಿದ್ದ. ಚಾಕೊಲೇಟ್‌ ಕವರ್‌ನಲ್ಲಿ ಪೇಸ್ಟ್‌ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟು ತರಲಾಗಿತ್ತು.

ಶಾಲಾ ಕೊಠಡಿಗೆ ಬೆಂಕಿ:
ಪುಸ್ತಕ, ಕಲಿಕೋಪಕರಣ ಭಸ್ಮ
ಕಾಸರಗೋಡು: ಬೋವಿಕ್ಕಾನ ಬಿ.ಎ.ಆರ್‌. ಹೈಯರ್‌ ಸೆಕೆಂಡರಿ ಶಾಲೆಯ ಎ.ಯು.ಪಿ. ಶಾಲೆಯ ಪ್ರಿಪ್ರೈಮರಿ ತರಗತಿ ಕೊಠಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕಿಟಿಕಿ ಮೂಲಕ ಆದಿತ್ಯವಾರ ರಾತ್ರಿ ಬೆಂಕಿ ಹಚ್ಚಲಾಗಿದೆ ಎಂದು ಶಂಕಿಸಲಾಗಿದೆ.

ಸೋಮವಾರ ಬೆಳಗ್ಗೆ ಶಾಲೆ ತೆರೆದಾಗ ಬೆಂಕಿ ಹಚ್ಚಿರುವುದು ಶಾಲಾ ಸಿಬಂದಿಗೆ ತಿಳಿಯಿತು. ಪ್ರಾಥಮಿಕ ತರಗತಿಯ ಪಠ್ಯ ಪುಸ್ತಕಗಳು, ಕಲಿಕೋಪಕರಣಗಳು, ಬೆಂಚ್‌ ಇತ್ಯಾದಿ ಸುಟ್ಟುಹೋಗಿವೆ. ಪ್ರಕರಣಕ್ಕೆ ಸಂಬಂಧಿಸಿ ಮುಖ್ಯೋಪಾಧ್ಯಾಯಿನಿ ಪ್ರೇಮಬಿಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಾಜದ್ರೋಹಿಗಳು ಈ ಕೃತ್ಯ ಎಸಗಿದ್ದು, ಪದೇಪದೆ ಇಂತಹ ಕೃತ್ಯಗಳು ಇಲ್ಲಿ ನಡೆಯುತ್ತಿವೆ. ಕುಡಿಯುವ ನೀರಿನ ಟ್ಯಾಪ್‌ ಹಾನಿಗೊಳಿಸುವುದು, ಗ್ರಿಲ್ಸ್‌ನ ಬೀಗ ಮುರಿಯುವುದು, ಶಾಲಾ ಕಟ್ಟಡದ ಹೆಂಚು ಹಾನಿ ಮಾಡುವುದು ಮೊದಲಾದ ಸಮಾಜದ್ರೋಹಿ ಕೃತ್ಯಗಳು ನಿರಂತರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಮಳೆಗೆ ಮುನ್ನ ಶಾಲೆಯ ಹೂದೋಟಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ದೂರು ನೀಡಿದ್ದರೂ ಈ ವರೆಗೂ ಯಾವುದೇ ಪ್ರಯೋಜವಾಗಿಲ್ಲ.

ಮನೆಗೆ ಗುಂಡು ಹಾರಾಟ
ಕಾಸರಗೋಡು: ಚೀಮೇನಿ ತೆರೆದ ಬಂದೀಖಾನೆಯ ಸಮೀಪದ ತುರು ನಿವಾಸಿ ಎ.ಟಿ.ವಿ.ಪದ್ಮನಾಭನ್‌ ಅವರ ಮನೆಯ ಕಿಟಕಿ ಬಾಗಿಲಿನ ಗಾಜಿಗೆ ಗುಂಡು ಹಾರಾಟ ನಡೆದ ಘಟನೆ ಜೂ.30 ರಂದು ರಾತ್ರಿ ನಡೆದಿದ್ದು, ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಪ್ರದೇಶ ಕಾಡು ಹಂದಿಗಳ ಉಪಟಳವಿರುವ ಪ್ರದೇಶವಾಗಿದೆ. ಆದ್ದರಿಂದ ರಾತ್ರಿ ಕಾಡು ಹಂದಿಗಳನ್ನು ಬೇಟೆಯಾಡಲು ಬಂದ ತಂಡ ಗುಂಡು ಹಾರಿಸಿದಾಗ ಅದು ಗುರಿತಪ್ಪಿ ಮನೆಗೆ ತಗಲಿರಬಹುದೆಂದು ಶಂಕಿಸಲಾಗಿದೆ. ಪದ್ಮನಾಭನ್‌ ನಿದ್ದೆ ಮಾಡುವ ಕೊಠಡಿಯ ಕಿಟಕಿ ಬಾಗಿಲಿಗೆ ಗುಂಡು ತಗಲಿದೆ. ಗುಂಡು ತಗಲಿದ ಶಬ್ದ ಕೇಳಿ ಭಯ ಗೊಂಡ ಪದ್ಮನಾಭನ್‌ ಮತ್ತು ಪತ್ನಿ ಹೊರ ಬಂದು ನೋಡಿದಾಗ ಗುಂಡು ಪತ್ತೆಯಾಗಿದೆ. ರಾತ್ರಿ ವೇಳೆ ಈ ಪ್ರದೇಶದಲ್ಲಿ ಪದೇಪದೆ ಗುಂಡು ಹಾರಿಸುವ ಶಬ್ದ ಕೇಳಿ ಬರುತ್ತಿದೆ ಎಂದು ಮನೆಯವರು ಹೇಳಿದ್ದಾರೆ.

Advertisement

ಸ್ಥಳಕ್ಕೆ ತೆರಳಿದ ಪೊಲೀಸರು ಗುಂಡನ್ನು ವಶ ಪಡಿಸಿ ಕೊಂಡಿದ್ದಾರೆ. ಅದು ಬಂದೂಕಿಗೆ ಬಳಸುವ ವಸ್ತುವಲ್ಲ ಎಂದು ಪೊಲೀಸರು ತಿಳಿಸಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next