Advertisement

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

09:48 PM Jun 29, 2024 | Team Udayavani |

ಮಂಜೇಶ್ವರ: ಮೀಯಪದವು ಸಮೀಪದ ಪುರಾತನ ತಲೇಕ್ಕಳ ಶ್ರೀ ಸದಾಶಿವ ರಾಮ ವಿಠಲ ದೇವಸ್ಥಾನದಿಂದ ಮೂರು ಪವನ್‌ನಷ್ಟು ತೂಕದ ದೇವರ ಚಿನ್ನದ ಮುಕ್ಕಣ್ಣು ಹಾಗು ಇತರ ಬೆಳ್ಳಿ ಆಭರಣ ಮತ್ತು 2 ಕಾಣಿಕೆ ಹುಂಡಿಯಿಂದ ಹಣವನ್ನು ಕಳವು ಮಾಡಲಾಗಿದೆ.

Advertisement

ಕಳ್ಳ ಬಳಸಿದ ಕಬ್ಬಿಣದ ರಾಡ್‌ ದೇವಸ್ಥಾನದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಹಳೆಯ ದೇವಸ್ಥಾನವಾಗಿರುವುದರಿಂದ ಸುತ್ತುಗೋಪುರದ ಬಾಗಿಲು ಹಳತಾಗಿದೆ. ಬಾಗಿಲ ಎಡೆಗೆ ಕಬ್ಬಿಣದ ರಾಡ್‌ ಹಾಕಿ ಬಾಗಿಲನ್ನು ಎತ್ತಿ ಕಳ್ಳ ಒಳ ನುಗ್ಗಿದ್ದಾನೆ. ಗರ್ಭಗುಡಿಯ ಬಾಗಿಲು ಕೂಡ ಹಳತಾದುದರಿಂದ ಬಾಗಿಲು ಹಾಕಲಾಗುತ್ತದೆಯೇ ಹೊರತು ಬೀಗ ಹಾಕುವುದಿಲ್ಲವೆಂದು ದೇವಸ್ಥಾನದ ಟ್ರಸ್ಟಿ ಹಾಗು ಪ್ರಧಾನ ಅರ್ಚಕರಾದ ವಾಸುದೇವ ಭಟ್‌ ಹೇಳಿದ್ದಾರೆ.

ವಾಸುದೇವ ಭಟ್‌ ಅವರ ಪುತ್ರ ಶಿವರಾಜ್‌ ಭಟ್‌ ದೇವಸ್ಥಾನಕ್ಕೆ ಪೂಜೆಗಾಗಿ ಬಂದಿದ್ದು, ಎಂದಿನಂತೆ ಬಾಗಿಲು ತೆರೆದು ಸ್ನಾನ ಮಾಡಿ ಗರ್ಭಗುಡಿಗೆ ತೆರಳಿದಾಗಲಷ್ಟೇ ಕಳವು ಬಗ್ಗೆ ತಿಳಿಯಿತು. ಶಿವರಾಜ್‌ ಸ್ನಾನ ಮಾಡುತ್ತಿದ್ದಾಗ ಸ್ಕೂಟರೊಂದರ ಶಬ್ದ ದೇವಸ್ಥಾನ ಸಮೀಪದಿಂದ ಕೇಳಿ ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಕಾರಡ್ಕ ಸೊಸೈಟಿ ವಂಚನೆ ಪ್ರಕರಣ
ರಾಜ್ಯ ಕ್ರೈಂಬ್ರಾಂಚ್‌ ಶೀಘ್ರ ಕಾಸರಗೋಡಿಗೆ
ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆರ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ನಡೆದ 4.76 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿಗೂಢತೆಗಳನ್ನು ಪತ್ತೆಹಚ್ಚಲು ರಾಜ್ಯ ಕ್ರೈಂಬ್ರಾಂಚ್‌ ತಂಡ ಶೀಘ್ರವೇ ಕಾಸರಗೋಡಿಗೆ ತಲುಪಲಿದೆ. ವಂಚನೆ ಪ್ರಕರಣದ ಹಿಂದೆ ದೊಡ್ಡ ಜಾಲವೇ ಇದೆ ಎಂದು ಶಂಕಿಸಲಾಗಿದೆ. ವಂಚನೆಗೆ ಸಂಬಂಧಿಸಿ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿರಿಸಿದ ಚಿನ್ನಾಭರಣಗಳನ್ನು ವಶಪಡಿಸಲಾಗಿದೆ. ಆದರೆ ತನಿಖೆ ಮುಂದುವರಿಯುತ್ತಿರುವುದರಿಂದ ಚಿನ್ನಾಭರಣಗಳನು ಲಭಿಸುವುದು ವಿಳಂಬವಾಗುವ ಸಾಧ್ಯತೆಯಿದ್ದು, ಇದರಿಂದ ಚಿನ್ನದ ವಾರೀಸುದಾರರು ಆತಂಕಿತರಾಗಿದ್ದಾರೆ.

Advertisement

ವಿಷ ಸೇವಿಸಿದ ವ್ಯಕ್ತಿ ಸಾವು
ಕಾಸರಗೋಡು: ವಿಷ ಪ್ರಾಶನಗೈದು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೊಸದುರ್ಗ ಮಡಿಕೈ ಕಕ್ಕಾಟ್‌ ಕಾಮಂಡ ನಿವಾಸಿ ವಿ.ಸಿ.ವಿನೋದನ್‌ (45) ಸಾವಿಗೀಡಾದರು. ಇವರು ಒಂದು ವಾರದ ಹಿಂದೆ ವಿಷ ಸೇವಿಸಿದ್ದರು.

ಎಸ್‌.ಐ, ಡ್ರೈವರ್‌ಗೆ ಇರಿದು ಗಾಯ : 16 ವರ್ಷ ಸಜೆ, ದಂಡ
ಕಾಸರಗೋಡು: ಕರ್ತವ್ಯ ನಿರತ ಎಸ್‌.ಐ. ಮತ್ತು ಪೊಲೀಸ್‌ ಜೀಪು ಚಾಲಕ ಅವರಿಗೆ ಇರಿದು ಗಂಭೀರ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾರಾ ಗ್ರಾಮದ ಮೀತ್ತಲ್‌ ಮಾಂಙಾಡ್‌ ಕುಳಿಕುನ್ನು ಕೆ.ಎಂ.ಹೌಸ್‌ನ ಅಹಮ್ಮದ್‌ ರಾಶೀದ್‌ ಕೆ.ಎಂ(31) ನಿಗೆ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 16 ವರ್ಷ ಸಜೆ ಹಾಗು 90 ಸಾವಿರ ರೂ. ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ(2) ತೀರ್ಪು ನೀಡಿದೆ.

ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ನ್ಯಾಯಾಲಯ ತಿಳಿಸಿದೆ.

2019 ಜನವರಿ 1 ರಂದು ಮುಂಜಾನೆ 3 ಗಂಟೆಗೆ ಕಳನಾಡುನಲ್ಲಿ ಪೊಲೀಸ್‌ ವಾಹನವನ್ನು ತಡೆದು ನಿಲ್ಲಿಸಿ ಎಸ್‌.ಐ ಜಯರಾಜ್‌ ಮತ್ತು ಚಾಲಕ ಇಲ್‌ಸಾದ್‌ಗೆ ಇರಿದು ಗಂಭೀರ ಗಾಯಗೊಳಿಸಲಾಗಿತ್ತು. ಪೊಲೀಸ್‌ ವಾಹನಕ್ಕೆ ಹಾನಿಗೈಯ್ಯಲಾಗಿತ್ತು. ಈ ಸಂಬಂಧ ಬೇಕಲ ಪೊಲೀಸರು ರಾಶೀದ್‌ ವಿರುದ್ಧ ಕೇಸು ದಾಖಲಿಸಿದ್ದರು.

ಜೀಪು ಢಿಕ್ಕಿ : ವ್ಯಕ್ತಿ ಸಾವು
ಕಾಸರಗೋಡು: ಮುಟ್ಟಿಚ್ಚರಲ್‌ ತಿರುವಿನಲ್ಲಿ ಜೀಪು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮುಟ್ಟಿಚ್ಚರಲ್‌ ಕೋಪಾಳಂ ಮೂಲೆಯ ತಂಬಾನ್‌(62) ಸಾವಿಗೀಡಾದರು. ಎಣ್ಣಪ್ಪಾರಕ್ಕೆ ತೆರಳುತ್ತಿದ್ದ ಜೀಪು ಢಿಕ್ಕಿ ಹೊಡೆದಿತ್ತು.

ಮುಸೋಡಿ, ಪೆರಿಂಗಡಿ ಸಮುದ್ರ ಕಿನಾರೆಯಲ್ಲಿ
ಕಡಲ್ಕೊರೆತ : ಹಲವು ಮರಗಳು ಸಮುದ್ರ ಪಾಲು
ಕುಂಬಳೆ: ಉಪ್ಪಳ ಶಿವಾಜಿ ನಗರ, ಮುಸೋಡಿ ಹಾಗು ಪೆರಿಂಗಡಿ ಕಡಪ್ಪುರದಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಹಲವು ಗಾಳಿ ಮರಗಳು ಸಮುದ್ರ ಪಾಲಾಗಿದೆ. ಕೆಲವು ದಿನಗಳಿಂದ ಕಡಲ್ಕೊರೆತ ಮುಂದುವರಿದಿದ್ದು, ಸ್ಥಳೀಯ ನಿವಾಸಿಗಳು ಆತಂಕಿತರಾಗಿದ್ದಾರೆ. ಇದು ಹೀಗೆ ಮುಂದುವರಿದರೆ ಪರಿಸರದ ರಸ್ತೆ ಬದಿಯ ವಿದ್ಯುತ್‌ ಕಂಬಗಳು ಮತ್ತು ಮನೆ, ಮಸೀದಿಗಳು ಸಮುದ್ರ ಪಾಲಾಗುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next