ಶಹಾಪುರ: ಕಸಾಪ ತಾಲೂಕು ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಒಮ್ಮತ ಮೂಡದ ಕಾರಣ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿಯವರು ತಮ್ಮ ಪದದತ್ತವಾದ ಅಧಿಕಾರ ಚಲಾಯಿಸಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಆಧಾರದಲ್ಲಿ ಫೆ.14ರೊಳಗೆ ಐವರಲ್ಲಿ ಒಬ್ಬರ ಹೆಸರು ಘೋಷಿಸುವೆ ಎಂದು ಸಭೆಯಲ್ಲಿ ತಿಳಿಸಿದರು.
ಅಧ್ಯಕ್ಷ ಸ್ಥಾನದ ತೀವ್ರ ಪೈಪೋಟಿಯಲ್ಲಿ ದೇಶಮುಖ ಶಿಕ್ಷಣ ಸಂಸ್ಥೆಯ ಶಿವರಾಜ ದೇಶಮುಖ, ಸಂಶೋಧಕ ಮೋನಪ್ಪ ಶಿರವಾಳ, ಹಿರಿಯ ವಕೀಲ ಸಾಲೋಮನ್ ಆಲ್ಪೈಡ್, ಉಪನ್ಯಾಸಕ ರವೀಂದ್ರ ಹೊಸಮನಿ ಮತ್ತು ಖಾಸಿಂಅಲಿ ಹುಜರತಿ ಅವರಿಂದ ಪೈಪೋಟಿ ನಡೆಯಿತು.
ಇಲ್ಲಿನ ಕಸಾಪ ಭವನದ ಆವರಣದಲ್ಲಿ ಅಧ್ಯಕ್ಷರ ಆಯ್ಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಕಸಾಪ ಸದಸ್ಯರು, ಕನ್ನಡ ಅಭಿಮಾನಿಗಳು, ಆಕಾಂಕ್ಷಿಗಳ ಬೆಂಬಲಿಗರು ಸೇರಿದ್ದರು. ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಸಾಹಿತಿ ಡಾ| ಅಬ್ದುಲ್ ಕರೀಂ ಮತ್ತು ಶಶಿಕಲಾ ಅಡಗಿಲ್ಲ ಹಿಂದೆ ಸರಿದರು. ಇನ್ನುಳಿದ ಐವರಲ್ಲಿ ತೀವ್ರ ಪೈಪೋಟಿ ನಡೆದಿರುವ ಕಾರಣ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ಫೆ. 14ರೊಳಗೆ ಒಬ್ಬರ ಹೆಸರನ್ನು ಘೋಷಿಸುವುದಾಗಿಯೂ ಅದಾದ ನಂತರ ಎಲ್ಲರೂ ಸಹಮತದೊಂದಿಗೆ ಕಸಾಪ ಮುನ್ನಡೆಸಬೇಕು ಎಂದು ತಿಳಿಸಿದರು.
ನಿಕಟಪೂರ್ವ ಅಧ್ಯಕ್ಷ ಸಿದ್ಲಿಂಗಪ್ಪ ಆನೆಗೊಂದಿ, ಸಾಹಿತಿ ಸಿದ್ಧರಾಮ ಹೊನ್ಕಲ್, ಶಿವಣ್ಣ ಇಜೇರಿ, ವಿಶ್ವರಾಧ್ಯ ಸತ್ಯಂಪೇಟ, ನೀಲಕಂಠ ಬಡಿಗೇರ, ಬಸವರಾಜ ಹಿರೇಮಠ, ಮಲ್ಲಿಕಾರ್ಜುನ ಪೂಜಾರಿ, ಸುಧೀರ ಚಿಂಚೋಳಿ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಶಿವಶರಣಪ್ಪ ಕಲ್ಬುರ್ಗಿ, ಸಂಗಣ್ಣ ಮೋಟಗಿ, ದೇವಿಂದ್ರ ಹೆಗಡೆ, ಹಣಮಂತಿ ಗುತ್ತೇದಾರ, ಹುಸೇನಪ್ಪ ಕಟ್ಟಿಮನಿ ಸೇರಿದಂತೆ ವ್ಯಾಪಾರಸ್ಥರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.