ಗಂಗಾವತಿ: ಭತ್ತದ ಕಣಜವೆಂದು ಖ್ಯಾತಿ ಪಡೆದ ಅಖಂಡ ಗಂಗಾವತಿ ತಾಲೂಕಿನ ವಿದ್ಯಾರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂಬ ಕಪ್ಪುಚುಕ್ಕಿಯನ್ನು ತೆಗೆದುಹಾಕಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರದ ಯುಪಿಎಸ್ಸಿ ಪರೀಕ್ಷೆಯಲ್ಲಿ ಗಂಗಾವತಿಯ ವಿನೋದ ಪಾಟೀಲ್, ನವಲಿ ಗ್ರಾಮದ ಜಗದೀಶ ಬಳಗಾನೂರು ಕ್ರಮವಾಗಿ ಅತ್ಯುತ್ತಮ ಸ್ಥಾನ ಪಡೆದು ರೈಲ್ವೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾಗಿ ಆಯ್ಕೆಯಾಗಿ ಮಾದರಿಯಾಗಿದ್ದರು.
ಸೋಮವಾರ ಪ್ರಕಟಗೊಂಡ ಕೆಪಿಎಸ್ಸಿ ಕೆಎಎಸ್ ಪರೀಕ್ಷೆಯಲ್ಲಿ ಗಂಗಾವತಿಯ ಸುರೇಶ ಮಳ್ಳಿಕೇರಿ, ಹನುಮಂತ ಭಜಂತ್ರಿ, ಕನಕಾಪುರದ ಶೇಖರಪ್ಪ, ಬೂದ ಗುಂಪಾ ಗ್ರಾಪಂ ಪಿಡಿಒ ಮಹಮದ್ ಜಿಲಾನ್, ಜೀರಾಳ ಕುಲ್ಗುಡಿ ಕ್ಯಾಂಪ್‌ನ ವೆಂಕೋಬ ಕುಂಬಾರ ಅವರು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಭತ್ತದ ಕಣಜ ಗಂಗಾವತಿಗೆ ಕೀರ್ತಿ ತಂದಿದ್ದಾರೆ. ಇವರಲ್ಲಿ ಹನುಮೇಶ ಭಜಂತ್ರಿ ಗ್ರಾಮಲೆಕ್ಕಾಧಿಕಾರಿ, ಮಹಮದ್ ಜಿಲಾನ್ ಬೂದಗುಂಪಾ ಗ್ರಾ.ಪಂ ಪಿಡಿಒ ಸರಕಾರಿ ನೌಕರಿಯಲ್ಲಿದ್ದಾರೆ. ಸುರೇಶ ಮಳ್ಳಿಕೇರಿ ಮತ್ತು ಶೇಖರಪ್ಪ ಕನಕಾಪುರ ಇವರು ಬಿಇ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆದು ಎಲ್ಲರೂ ಎರಡನೇಯ ಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ವೆಂಕೋಬ ಕುಂಬಾರ ವಕೀಲರಾಗಿದ್ದು, 2ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದಾರೆ.
ದಿವಂಗತ ಡಾ|ನಂಜುಂಡಪ್ಪ ಪ್ರಾದೇಶಿಕ ಅಸಮತೋಲನ ನಿವಾರಣೆಯ ಅಧ್ಯಾಯನ ಸಮಿತಿ ಗಂಗಾವತಿ ತಾಲೂಕನ್ನು ಶೆಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಘೋಷಣೆ ಮಾಡಲಾಗಿತ್ತು. ವರದಿ ನಂತರ ಸರಕಾರ ಹೋಬಳಿ ಮಟ್ಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರಕಾರಿ ಪ್ರೌಢಶಾಲೆಗಳು, ಪಿಯುಸಿ ಮತ್ತು ಪದವಿ ಮಹಾವಿದ್ಯಾಲಯಗಳನ್ನು ಆರಂಭಿಸಿ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿತ್ತು. ಇವುಗಳ ಪರಿಣಾಮವಾಗಿ ಕಲ್ಯಾಣ ಕರ್ನಾಟಕ(ಹೆ.ಕ.)ಭಾಗದವರು ಕೆಎಎಸ್ ಸೇರಿ ಇತರೆ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ಉತ್ತೀರ್ಣರಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪಿಯುಸಿ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ ಸುಮಾರು 567 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದೀಗ ಕೆಎಎಸ್ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಹನುಮೇಶ ಭಜಂತ್ರಿ: ಇಡೀ ಕುಟುಂಬ ಅನಕ್ಷರಾಗಿದ್ದರೂ ಸಾಧಿಸುವ ಛಲ ಬಿಡದ ಹನುಮೇಶ ಭಜಂತ್ರಿ ಸೋಮವಾರ ಪ್ರಕಟಗೊಂಡ ಕೆಎಎಸ್ ಪರೀಕ್ಷಾ ಫಲಿತಾಂಶದಲ್ಲಿ 4ನೇ ರ್‍ಯಾಂಕ್ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 2011ರಲ್ಲಿ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿಯಾಗಿ ನೇಮಕಗೊಂಡ ಹನುಮೇಶ್ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದವರು. ಎರಡನೇ ಬಾರಿ ಕೆಎಎಸ್ ಪರೀಕ್ಷೆ ಬರೆದ ಹನುಮೇಶ ಎರಡನೇ ಸಲಕ್ಕೆ ರಾಜ್ಯಕ್ಕೆ 4 ರ್‍ಯಾಂಕ್ ಉತ್ತೀರ್ಣಗೊಂಡು ಅಬಕಾರಿ ಇಲಾಖೆಯ ಡಿವೈಎಸ್‌ಪಿಯಾಗಿ ನೇಮಕಗೊಳ್ಳುವ ಅರ್ಹತೆ ಪಡೆದಿದ್ದಾರೆ.
ಪಿಯುಸಿ ನಂತರ ಗ್ರಾಮಲೆಕ್ಕಾಧಿಕಾರಿಯಾಗಿ ನೇಮಕಗೊಂಡ ಹನುಮೇಶ ನಂತರ ಪದವಿ ನಂತರ ರಾಜ್ಯಶಾಸ್ತ್ರ ಮತ್ತು ಆಂಗ್ಲಭಾಷೆ ಎರಡಲ್ಲೂ ಎಂಎ ಪಾಸ್ ಆಗಿದ್ದಾರೆ. ಅಪ್ಪ ಅವ್ವ ಮೂರು ಜನ ಸಹೋದರರು ಕುಲ ಕಸುಬು ಮಾಡುತ್ತಿದ್ದಾರೆ. ಕುಟುಂಬದಲ್ಲಿ ಹನುಮೇಶ ಭಜಂತ್ರಿ ಒಬ್ಬರೇ ಅಕ್ಷರಸ್ಥರಾಗಿದ್ದು ಇಡೀ ಕುಟುಂಬ ಇವರ ಸಾಧನೆ ಕಂಡು ಖುಷಿಯಾಗಿದೆ. ಸರಕಾರಿ ಉದ್ಯೋಗದಲ್ಲಿದ್ದು ಕೆಎಎಸ್ ಪರೀಕ್ಷೆ ಬರೆದು ಅತ್ಯುತ್ತಮ ಸಾಧನೆ ಮಾಡಿ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸುರೇಶ ಮಳ್ಳಿಕೇರಿ: ನಗರದ ಮಳ್ಳಿಕೇರಿ ಓಣಿಯ ಸುರೇಶ ಮಳ್ಳಿಕೇರಿ ಕೆಎಎಸ್ ಪರೀಕ್ಷೆಯಲ್ಲಿ 2ನೇ ರ್‍ಯಾಂಕ್ ಪಡೆದು ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿಯಾಗಿ ನೇಮಕ ಗೊಂಡಿದ್ದಾರೆ. ನಗರದಲ್ಲಿ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಸುರೇಶ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿ ಹೊಂದಿ, ಎರಡು ಬಾರಿ ಕೆಎಎಸ್ ಪರೀಕ್ಷೆ ಬರೆದು ಎರಡನೇ ಬಾರಿಗೆ ಯಶ ಕಂಡಿದ್ದಾರೆ. ರಾಜ್ಯ ಸರಕಾರದಿಂದ ದೆಹಲಿಯಲ್ಲಿ ಕೆಎಎಸ್ ಪರೀಕ್ಷೆಯ ತರಬೇತಿ ಪಡೆದಿದ್ದು ದಿನಕ್ಕೆ 8 ತಾಸು ಅಭ್ಯಾಸ ಮಾಡುವ ಮೂಲಕ ಅತ್ಯುತ್ತಮ ಸಾಧನೆಯನ್ನು ಸುರೇಶ ಮಾಡಿದ್ದಾರೆ.
ಶೇಖರಪ್ಪ ಕನಕಾಪುರ: ಕನಕಗಿರಿ ತಾಲೂಕಿನ ಕನಕಾಪುರದ ಶೇಖರಪ್ಪ ತಂದೆ ಪಂಪನಗೌಡ ಕೆಎಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣಗೊಂಡು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನೇಮಕವಾಗಿದ್ದಾರೆ. 1ರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಷಯ ಓದಿದ್ದಾರೆ. ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ನಂತರ ಬೆಂಗಳೂರು ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಎಂಟೇಕ್ ಮಾಡಿ ಯುಪಿಎಸ್ಸಿ ಪರೀಕ್ಷೆಯ ತರಬೇತಿ ಪಡೆದು ಎರಡು ಬಾರಿ ಕೆಎಎಸ್ ಪರೀಕ್ಷೆ ಬರೆದು ದ್ವಿತೀಯ ಯತ್ನದಲ್ಲಿ ಕೆಎಎಸ್ ಪರೀಕ್ಷೆ ಬರೆದು ಯಶಸ್ಸು ಪಡೆದಿದ್ದಾರೆ.
-ಕೆ.ನಿಂಗಜ್ಜ