ಕಾರವಾರ: ಹಳೇ ಮೀನುಪೇಟೆಯ ಮಹಾತ್ಮಾಗಾಂಧಿ ಹರಿಜನ ಕಾಲೋನಿ ನಿವಾಸಿಗಳಾದ ಪೌರಕಾರ್ಮಿಕರು ಮತ್ತು ಜಾಡಮಾಲಿಗಳ ಮನೆಗಳಿಗೆ ಸರ್ಕಾರದ ಆದೇಶದಂತೆ ಹಕ್ಕು ಪತ್ರ ನೀಡಬೇಕೆಂದು 15ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಶನಿವಾರ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಲಿಖೀತ ಮನವಿ ಸಲ್ಲಿಸಿದರು.
ಅಂಬೇಡ್ಕರ್ ಪ್ರಗತಿಪರ ದಲಿತ ವೇದಿಕೆ ನೇತೃತ್ವದಲ್ಲಿ ಮನವಿ ನೀಡಿದ್ದು, ಕುಮಟಾದ ಹರಿಜನ ಕಾಲೋನಿ ನಿವಾಸಿಗಳನ್ನು ಹಾಲಿ ನಿವಾಸದ ಮನೆಗಳಿಂದ ಒಕ್ಕಲೆಬ್ಬಿಸುವ ತೆರೆಮೆರೆಯ ಪ್ರಯತ್ನಗಳು ನಡೆಯುತ್ತಿದ್ದು, ಇದರ ವಿರುದ್ಧ ಪ್ರಬಲ ಹೋರಾಟದ ಸುಳಿವನ್ನು ಪೌರಕಾರ್ಮಿಕರು ನೀಡಿದರು.
ಕುಮಟಾ ಪುರಸಭೆಯಲ್ಲಿ 90ಕ್ಕೂ ಹೆಚ್ಚು ಪೌರಕಾರ್ಮಿಕರು ದುಡಿಯುತ್ತಿದ್ದು ಎಲ್ಲರಿಗೂ ಸರ್ಕಾರ ಮನೆ ನಿರ್ಮಿಸಿಕೊಡಬೇಕು. ಹಾಲಿ ಹರಿಜನ ಕಾಲೋನಿ ನಿವಾಸಿಗಳಿಗೆ ಸರ್ಕಾರ 1973ರ ಪೂರ್ವದಲ್ಲಿ ಕಾಯಂ ಪೌರಕಾರ್ಮಿಕರು ವಾಸಿಸುತ್ತಿರುವ ವಸತಿಗೃಹಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗಳು 8 ಮಾರ್ಚ್ 2019ರಲ್ಲಿ ನಡೆದ ಸಭೆಯಲ್ಲಿ ಸೂಚಿಸಿ ನಡಾವಳಿ ದಾಖಲಿಸಿದ್ದಾರೆ.
ಈ ಸಂಬಂಧ ರಾಷ್ಟ್ರೀಯ ಸಫಾಯಿ ಕರ್ಮಾಚಾರಿ ಆಯೋಗದ ಸದಸ್ಯರಾದ ಜಗದೀಶ್ ಹಿರೇಮನಿ ಶಿಫಾರಸ್ಸು ಸಹ ಮಾಡಿದ್ದಾರೆ. ನಮ್ಮ ಪೂರ್ವಿಕರ ಕಾಲದಿಂದ ನಾವು ನಗರದ ಸ್ವತ್ಛತೆಗೆ ಶ್ರಮಿಸಿದ್ದೇವೆ. ಕೋರಾರ ಜನಾಂಗಕ್ಕೆ ಸೇರಿದ ನಾವು ಮೂರು ತಲೆಮಾರುಗಳಿಂದ ಪುರಸಭೆಯ ಸ್ವಚ್ಛತೆ ಕೆಲಸವನ್ನೇ ಉದ್ಯೋಗವಾಗಿ ಅವಲಂಬಿಸಿದ್ದೇವೆ.
ಹಳೆ ಮೀನುಪೇಟೆ ಹರಿಜನ ಕಾಲೋನಿ ಹೆಸರೇ ನಮ್ಮ ಪೂರ್ವಜರ ಇತಿಹಾಸ ತಿಳಿಸುತ್ತದೆ. ಗಾಂಧೀಜಿ ಅಸ್ಪೃಶ್ಯತೆ ನಿವಾರಣೆಗೆ 1930-31ರಲ್ಲಿ ಕುಮಟಾ, ಕಾರವಾರ, ಶಿರಸಿ ಪ್ರವಾಸ ಬಂದ ನೆನಪಿನಲ್ಲಿ ಕುಮಟಾ ಹರಿಜನ ಕಾಲೋನಿ ನಿರ್ಮಾಣವಾದುದು. ಮಹಾತ್ಮಾಗಾಂಧಿ ಹರಿಜನರ ಬಗ್ಗೆ ಇಟ್ಟ ಕಾಳಜಿಯ ನೆನಪಿಗಾಗಿ 1955 ರಲ್ಲಿ ಕುಮಟಾ ಪುರಸಭೆ ಪೌರಕಾರ್ಮಿಕರಿಗೆ 15 ಹೆಂಚಿನ ಮನೆ ನಿರ್ಮಿಸಿಕೊಟ್ಟಿದೆ. 2012ರಲ್ಲಿ ಇದೇ ಮನೆಗಳಿಗೆ ಪುರಸಭೆ ಆರ್‌ಸಿಸಿ ಹಾಕಿಸಿ ಕೊಟ್ಟಿದೆ. ಆದರೆ ಅಲ್ಲಿ ವಾಸಿಸುವ ಪೌರಕಾರ್ಮಿಕರಿಗೆ ನಿವೇಶನದ ಹಕ್ಕುಪತ್ರ ನೀಡಿಲ್ಲ. ನಮ್ಮ ಅಜ್ಜ, ತಂದೆ ಇದೇ ಮನೆಗಳಲ್ಲಿ ಉಳಿದು ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ಈಗ ಮನವಿ ಮಾಡುತ್ತಿರುವ 19 ಕುಟುಂಬಗಳ ಸದಸ್ಯರು ಸಹ ಪೌರಕಾರ್ಮಿಕರು, ಜಾಡಮಾಲಿ, ಬಂಗಿ ಕೆಲಸ ಮಾಡುತ್ತಿದ್ದು, ನಮ್ಮ ವಾಸದ ನಿವೇಶನ, ಮನೆಗಳಿಗೆ ಹಕ್ಕು ಪತ್ರ ನೀಡಲು ವಿನಂತಿಸುತ್ತಿದ್ದೇವೆ ಎಂದರು.
ಹಕ್ಕು ಪತ್ರ ನೀಡುವಂತೆ ಪೌರಾಡಳಿತ ನಿರ್ದೇಶಕರು ಕಚೇರಿಯಿಂದ 29 ಜನೇವರಿ 2020ರಲ್ಲಿ ಪತ್ರ ಕುಮಟಾ ಪುರಸಭೆಗೆ ಬಂದಿದೆ. ಅಲ್ಲದೇ 1973ಕ್ಕಿಂತ ಮುಂಚೆ ಹರಿಜನ ಕಾಲೋನಿಯಲ್ಲಿ ವಾಸಿಸುವ ಪೌರಕಾರ್ಮಿಕರ, ಜಾಡಮಾಲಿ, ಬಂಗಿಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳಿಗೆ ಪುರಸಭೆ ಸಲ್ಲಿಸಬೇಕಿತ್ತು. 23 ಸೆಪ್ಟಂಬರ್ 2020 ರಲ್ಲಿ ವಾಸವಿರುವ ಮನೆಗಳಿಗೆ ಹಕ್ಕುಪತ್ರ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮನವಿ ಮಾಡಿದ್ದೆವು. ಆದರೆ ಯಾವುದೇ ಕ್ರಮವಾಗಿಲ್ಲ. ಈಗಲಾದರೂ ನಮಗೆ ಹಕ್ಕಪತ್ರ ನೀಡಬೇಕೆಂದು ಜಿಲ್ಲಾಧಿಕಾರಿಗೆ ಮತ್ತೂಮ್ಮೆ ಲಿಖೀತ ಮನವಿ ಸಲ್ಲಿಸಿದ್ದೇವೆ ಎಂದರು.
ಹರಿಜನ ಕೇರಿಯಲ್ಲಿ ವಾಸಿಸುವ 19 ಕುಟುಂಬಗಳ ವಿವರವನ್ನು ಸಹ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಮನವಿ ನೀಡುವಾಗ ಸುಶೀಲಾ ಕೃಷ್ಣ ಹರಿಜನ, ದೀಪಕ್ ಸೋಮಾ ಮೂರೂರು, ಗಣೇಶ್ ಈಶ್ವರ ಹರಿಜನ, ವಿನಾಯಕ ಪಾಂಡುರಂಗ, ಪಾರ್ವತಿ, ದುರ್ಗಿ, ಸೋಮಶೇಖರ, ನಾಗರಾಜ ಗಣಪತಿ ಶೇಡಗೇರಿ, ರೇಶ್ಮಾ, ಶ್ವೇತಾ, ಪ್ರದೀಪ, ರಾಧಾ ರಮೇಶ್ ಹರಿಜನ, ವಿನಾಯಕ ಹೊನ್ನಾವರ, ಶ್ರೀಧರ, ಅಣ್ಣಪ್ಪ, ಸುಲೋಚನಾ ಮುರುಡೇಶ್ವರ ಹಾಗೂ ಅಂಬೇಡ್ಕರ ಪ್ರಗತಿ ಪರ ವೇದಿಕೆಯ ಗಣಪತಿ ಮುರುಡೇಶ್ವರ, ಅರವಿಂದ ಡಿ.ಹೊನ್ನಾವರ, ವಿ.ಲಕ್ಷ್ಮಣ ಕುಂದಾಪುರ, ನಾಗರಾಜ ಜಾಡಮಾಲಿ ಮುಂತಾದವರು ಉಪಸ್ಥಿತರಿದ್ದರು.